ಸಾರಾಂಶ
ಚಿಕ್ಕಮಗಳೂರು ವಕೀಲರ ಸಂಘದ ವಕೀಲರೊಬ್ಬರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಮತ್ತು ಅದೇ ಪೋಲಿಸರು ಪೊಲೀಸ್ ಲಾಠಿಯನ್ನು ಸುಟ್ಟು ಧರಣಿ ನಡೆಸಿದವರ ಮೇಲೆ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘದಿಂದ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಹಾಸನ ಚಿಕ್ಕಮಗಳೂರು ವಕೀಲರ ಸಂಘದ ವಕೀಲರೊಬ್ಬರ ಮೇಲೆ ಪೊಲೀಸರು ನಡೆಸಿದ ಹಲ್ಲೆ ಮತ್ತು ಅದೇ ಪೋಲಿಸರು ಪೊಲೀಸ್ ಲಾಠಿಯನ್ನು ಸುಟ್ಟು ಧರಣಿ ನಡೆಸಿದವರ ಮೇಲೆ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘದಿಂದ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ನಗರದ ಹೊಸ ಬಸ್ ನಿಲ್ದಾಣದ ಎದುರು ಇರುವ ಜಿಲ್ಲಾ ವಕೀಲರ ಸಂಘದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ನೂತನ ಮೇಲ್ಸೇತುವೆ ಮೇಲೆ ಬಂದು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದಿತು. ಇದೆ ವೇಳೆ ವಕೀಲರ ಸಂಘದ ಅಧ್ಯಕ್ಷ ಎಂ.ಜಿ. ಪೂರ್ಣಚಂದ್ರ ಮಾಧ್ಯಮದೊಂದಿಗೆ ಮಾತನಾಡಿ, ಚಿಕ್ಕಮಗಳೂರು ವಕೀಲರ ಸಂಘದ ಸದಸ್ಯರಾದ ವಕೀಲ ಪ್ರೀತಮ್‌ರವರು ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಅವರ ಬೈಕ್ ಕೀಯನ್ನು ಅಕ್ರಮವಾಗಿ ತೆಗೆದುಕೊಂಡಾಗ ಏಕೆ ಹೀಗೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಆಗ ವಕೀಲರನ್ನು ಠಾಣೆಯ ಒಳಗೆ ಕರೆದುಕೊಂಡು ಹೋಗಿ ಪೊಲೀಸ್ ಸಿಬ್ಬಂದಿ ಅಮಾನುಷವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ದುಷ್ಕೃತ್ಯದ ವಿರುದ್ಧ ಚಿಕ್ಕಮಗಳೂರು ವಕೀಲರ ಸಂಘವು ಪ್ರಶ್ನಿಸಿ ಹೋರಾಟ ಮಾಡಿದ್ದರ ಅನ್ವಯ ಈ ಪ್ರಕರಣ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಡಾವಳಿ ಹಂತದಲ್ಲಿದ್ದರೂ ಸಹ ಚಿಕ್ಕಮಗಳೂರು ಪೊಲೀಸರು ರಸ್ತೆಯಲ್ಲಿ ಪ್ರತಿಭಟನೆ ಮಾಡುವ ಮೂಲಕ ಸಮಾಜದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯಲ್ಲಿರುವ ಪೊಲೀಸರು ಧರಣಿ ಮಾಡಿರುವುದು ದುರಾದೃಷ್ಟಕರ ಮತ್ತು ಕಾನೂನಿಗೆ ವಿರುದ್ಧವಾಗಿರುತ್ತದೆ ಎಂದರು. ವೃತ್ತಿನಿರತ ಮತ್ತು ಗೌರವ ಕಾಪಾಡುವ ಪೊಲೀಸ್ ಲಾಠಿಯನ್ನು ನಡು ರಸ್ತೆಯಲ್ಲಿ ಬಿಸಾಡಿ ಬೆಂಕಿ ಹಚ್ಚಿ ತೊಡೆ ತಟ್ಟಿ ವಕೀಲರನ್ನು ಅವಹೇಳನಕಾರಿಯಾಗಿ ನಿಂದಿಸಿ ವಕೀಲರ ಮನೆಗೆ ನುಗ್ಗಿ ಹೊಡೆಯುತ್ತೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮೀಡಿಯಾದ ಮುಂದೆ ನೇರವಾಗಿ ಹೇಳಿಕೆ ನೀಡುತ್ತಿರುವುದು ಸಮಾಜದಲ್ಲಿ ಶಾಂತಿ ಕದಡುವಂತೆ ಪೊಲೀಸರು ಮುಂದಾಗಿರುತ್ತಾರೆ ಎಂದು ಆರೋಪಿಸಿದರು. ವಕೀಲರಲ್ಲದೆ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸಿರುವುದು ಕಾನೂನಿನ ನೇರ ಉಲ್ಲಂಘನೆಯಾಗಿರುವುದರಿಂದ ಗೃಹ ಮಂತ್ರಿಗಳು ಪುಂಡ ಪೊಲೀಸ್ ಅಧಿಕಾರಿ ಮತ್ತು ಪೇದೆಗಳ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ, ನ್ಯಾಯ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಪೊಲೀಸ್ ವರ್ತನೆಗೆ ಕ್ರಮ ಜರುಗಿಸಬೇಕೆಂದು ಹಾಸನ ಜಿಲ್ಲಾ ವಕೀಲರ ಸಂಘದಿಂದ ಮನವಿ ಮಾಡುವುದಾಗಿ ಹೇಳಿದರು.ಪ್ರತಿಭಟನೆಯಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜಿ. ರಂಗಸ್ವಾಮಿ, ಖಜಾಂಚಿ ಕೆ.ವಿ. ಲೋಹಿತ್, ಉಪಾಧ್ಯಕ್ಷ ಎಸ್.ಬಿ. ಮಂಜುನಾಥ್, ಜಂಟಿ ಕಾರ್ಯದರ್ಶಿ ಬಿ.ಎಲ್. ಲಲಿತಾ, ಸದಸ್ಯರಾದ ಎಚ್.ಎಸ್. ಮಂಜುನಾಥ್ ಮೂರ್ತಿ, ಕೆ.ಕೆ. ಮೋಹನ್ ಕುಮಾರ್, ಯು.ಎಂ. ಚಿದಾನಂದ, ಕೆ.ಎನ್. ದಿಲೀಪ್ ಕುಮಾರ್, ಎ.ಜೆ. ರಘು, ಕೆ.ಸಿ. ಕೇಶವ ಮೂರ್ತಿ, ಶ್ರೀಕಾಂತ್, ಇತರರು ಉಪಸ್ಥಿತರಿದ್ದರು.