ಸಾರಾಂಶ
ದೊಡ್ಡಬಳ್ಳಾಪುರ: ಜನಪರ ಹೋರಾಟಗಾರರು ಸಂವಿಧಾನದ ಚೌಕಟ್ಟಿನಲ್ಲಿ ದುಡಿಮೆಗೆ ಮಾರ್ಗ ಮಾಡಿಕೊಳ್ಳದೇ ಹೋದರೆ ಹೋರಾಟಗಳು ಸೋಲುತ್ತವೆ. ಇದರಿಂದ ಸಮಾಜಕ್ಕೆ ದೊಡ್ಡ ನಷ್ಟವಾಗಲಿದೆ ಎಂದು ಲೇಖಕ ಮಂಜುನಾಥ ಎಂ.ಅದ್ದೆ ಹೇಳಿದರು.
ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ ಅವರ ‘ಕನ್ನಡ ಜನಪರ ಸತ್ಯ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.ಯಾವುದೇ ವ್ಯಕ್ತಿ ನ್ಯಾಯಯುತ ಮಾರ್ಗದ ದುಡಿಮೆಯಲ್ಲಿ ಬಂಡವಾಳ ಮಾಡುವುದು ತಪ್ಪಲ್ಲ. ಆದರೆ ಅದನ್ನು ತನ್ನ ಸುತ್ತಲಿನ ಸಮಾಜಕ್ಕು ಹಂಚುವ ಮೂಲಕ ಬದುಕಿದಾಗ ಮಾತ್ರ ಸಾರ್ಥಕತೆ ಕಾಣಲು ಸಾಧ್ಯ. ಆದರೆ ಕಾರ್ಪೋರೆಟ್ ವಲಯದ ವ್ಯಕ್ತಿಗಳು ಜನರ ಶೋಷಣೆಯ ಮೂಲಕ ಬಂಡವಾಳ ಮಾಡುವುದು ಅಪಾಯಕಾರಿ. ಇದನ್ನು ವಿರೋಧಿಸುವ ಎದೆಗಾರಿಕೆಯನ್ನು ಬೆಳೆಸಿಕೊಂಡು ಜನಪರ ಹೋರಾಟ ಮಾಡುವ ತನ್ನ ಸುತ್ತಲಿನ ಜನರ ಒಳಿತಿಗಾಗಿ ಶ್ರಮಿಸಿದವರು ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ. ಹೀಗಾಗಿಯೇ ಕರ್ನಾಟಕ 50ನೇ ವರ್ಷಾಚರಣೆ ಸಂದರ್ಭದಲ್ಲಿ ಸಮಾನ ಮನಸ್ಕರು ನಗದು ಪುರಸ್ಕಾರ ನೀಡುವ ಮೂಲಕ ಅಭಿನಂದಿಸುತ್ತಿರುವುದು ಅರ್ಥಪೂರ್ಣವಾಗಿದೆ. ಇದು ಇತರೆ ಹೋರಾಟಗಾರರಿಗೆ ಜನರಪರವಾಗಿ ಕೆಲಸ ಮಾಡುವ ಸ್ಫೂರ್ತಿ ತುಂಬಲಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ, ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ್ ಮಾತನಾಡಿ, ಆರಂಭದ ದಿನಗಳಲ್ಲಿ ಪರಭಾಷಾ ಚಿತ್ರಗಳ ವಿರುದ್ಧದ ಪ್ರತಿಭಟನೆಗೆ ಸೀಮಿತವಾಗಿದ್ದ ನಮ್ಮ ಹೋರಾಟಗಳು ನಂತರದ ದಿನಗಳಲ್ಲಿ ನಾಡಿನ ನೆಲ,ಜಲ, ಭಾಷೆ ಹಾಗೂ ಕನ್ನಡಿಗರಿಗೆ ಉದ್ಯೋಗ ಕೊಡಿಸುವ ಹೋರಾಟಗಳಾಗಿ ರೂಪುಗೊಂಡಿದ್ದು ಈಗ ಇತಿಹಾಸ. 80ರ ದಶಕದಲ್ಲಿ ನಗರದಲ್ಲಿ ಹುಟ್ಟಿಕೊಂಡ ಕನ್ನಡ ಜಾಗೃತ ಪರಿಷತ್ ಅಡಿಯಲ್ಲಿ ಇಡೀ ರಾಜ್ಯವೇ ಇಲ್ಲಿನ ಕನ್ನಡಪರ, ರೈತರಪರ ಹಾಗೂ ದಲಿತಪರ ಚಳುವಳಿಗೆಗಳನ್ನು ಗುರುತಿಸುವಂತೆ ಹಲವಾರು ದಾಖಲರ್ಹ ಹೋರಾಟಗಳು ನಡೆದಿವೆ. ಈ ಎಲ್ಲಾ ಹೋರಾಟಗಳಲ್ಲೂ ಡಾ.ವೆಂಕಟರೆಡ್ಡಿ, ಜಿ.ಸತ್ಯನಾರಾಯಣ ಸೇರಿದಂತೆ ಹಲವಾರು ಜನ ತೊಡಗಿಸಿಕೊಂಡಿದ್ದರು. ಇದರ ಫಲವಾಗಿಯೇ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗಗಳು ದೊರೆಯಲು ಕಾರಣವಾಯಿತು. ಇದರಿಂದ ಕನ್ನಡಿಗರು ಆರ್ಥಿಕವಾಗಿ ಸದೃಢರಾಗಿ ಬೆಳೆಯಲು ಸಾಧ್ಯವಾಗಿದೆ. ಇಂದಿನ ಯುವ ಪೀಳಿಗೆ ಹೋರಾಟಗಳ ಇತಿಹಾಸವನ್ನು ತಿಳಿಯುವ ಮೂಲಕ ಸ್ವಾಭಿಮಾನದ ಬದುಕು ರೂಪಿಕೊಳ್ಳಲು ನಾಡಿನ ಏಳಿಗೆಗೆ ಶ್ರಮಿಸಲು ಸಜ್ಜಾಗಬೇಕು ಎಂದರು.ಧಾರವಾಡದಲ್ಲಿನ ವಿದ್ಯಾವರ್ಧಕ ಸಂಘದಂತೆ ಇಲ್ಲಿನ ಕನ್ನಡ ಜಾಗೃತ ಪರಿಷತ್ ಹಲವಾರು ಜನಪರ ಹೋರಾಟಗಳಲ್ಲಿ ಕೇಂದ್ರ ಸಂಸ್ಥೆಯಾಗಿ ಇಂದಿಗೂ ಕ್ರೀಯಾಶೀಲವಾಗಿದೆ. ಇದರ ಹೆಸರಿನಲ್ಲಿ ಪ್ರತಿ ವರ್ಷ ಇಬ್ಬರು ಹಿರಿಯರು, ಒಬ್ಬ ಯುವ ಬರಹಗಾರರು ಅಥವಾ ಹೋರಾಟಗಾರರನ್ನು ಗುರುತಿಸಿ ನಗದು ಪುರಸ್ಕಾರ ನೀಡುವ ಸಮಾರಂಭ ನಿರಂತರವಾಗಿ ನಡೆಯಬೇಕು. ಇದಕ್ಕೆ ಅಗತ್ಯ ಆರ್ಥಿಕ ನೆರವನ್ನು ಮಾಡಲಾಗುವುದು ಎಂಬ ನೀಡುವ ಭರವಸೆಯನ್ನು ಮಂಜುನಾಥ ಎಂ.ಅದ್ದೆ ಘೋಷಣೆ ಮಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ, ಚಳುವಳಿಗಾರರು ಎಂದೂ ಸಹ ಪ್ರಶಸ್ತಿ, ಅಭಿನಂದನೆಗಳಿಗಾಗಿ ಹೋರಾಟಗಳನ್ನು ನಡೆಸುವುದಿಲ್ಲ. ಸದಾ ತಮ್ಮ ಸುತ್ತಲಿನ ಸಮಾಜದ ನೆಮ್ಮದಿಗಾಗಿ ತುಡಿಯುತ್ತಾರೆ. ಆದರೆ ಈ ತುಡಿತವನ್ನು ಇಳಿ ವಯಸ್ಸಿನಲ್ಲಿ ಗುರುತಿಸಿ ಗೌರವಿಸಿದಾಗ ಹೋರಾಟಗಾರರ ಬದುಕು ಸಾರ್ಥಕವಾಗಲಿದೆ ಎಂದರು.ಸಮಾರಂಭದ ಅಧ್ಯಕ್ಷತೆಯನ್ನು ಮೇಜರ್ ಎಸ್.ಮಹಾಬಲೇಶ್ವರ್ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ, ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್ ಅಭಿನಂದನಾ ನುಡಿಗಳನ್ನಾಡಿದರು. ಶಾಸಕ ಧೀರಜ್ ಮುನಿರಾಜು, ಜೆಡಿಎಸ್ ಮುಖಂಡ ಬಿ.ಮುನೇಗೌಡ, ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಕಜಾಪ ಕೇಂದ್ರ ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಸತ್ಯನಾರಾಯಣ್ ಅವರನ್ನು ಅಭಿನಂದಿಸಿದರು.4ಕೆಡಿಬಿಪಿ1-ದೊಡ್ಡಬಳ್ಳಾಪುರದ ಹಿರಿಯ ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ್ ಅವರಿಗೆ ಕನ್ನಡ ಜನಪರ ಸತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.