ಸಮಾಜದಲ್ಲಿ ಆದರ್ಶ, ಸಾರ್ಥಕ ಬದುಕು ಸಾಗಿಸಿ: ಮಾಜಿ ಶಾಸಕ ಎಚ್.ಎಸ್.ಶಿವಶಂಕರ

| Published : Jan 22 2024, 02:22 AM IST

ಸಮಾಜದಲ್ಲಿ ಆದರ್ಶ, ಸಾರ್ಥಕ ಬದುಕು ಸಾಗಿಸಿ: ಮಾಜಿ ಶಾಸಕ ಎಚ್.ಎಸ್.ಶಿವಶಂಕರ
Share this Article
  • FB
  • TW
  • Linkdin
  • Email

ಸಾರಾಂಶ

ಜೀವನದ ಮೊದಲ ಸಾಲು ಹಾಗೂ ಕೊನೆಯ ಪುಟ ಮಧ್ಯೆ ಇರುವ ಪುಟಗಳಲ್ಲಿ ಅರ್ಥಪೂರ್ಣ, ಆದರ್ಶದ ಬಾಳನ್ನು ಬಾಳಬೇಕು. ಅಂತಹ ಆದರ್ಶ, ಸಾರ್ಥಕ ಬದುಕನ್ನು ಸಾಗಿಸಿ, ಸಮಾಜಕ್ಕೆ ಕೊಡುಗೆ ನೀಡಬೇಕು. ಇದ್ದಾಗ ಅಂತಹ ವರ ಬಗ್ಗೆ ಮಾಡಲಾಗದೇ, ಸತ್ತಾಗ ಸ್ಮಾರಕ ಮಾಡುವುದನ್ನು ಕಾಣುತ್ತೇವೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರತಿಯೊಬ್ಬರ ಹುಟ್ಟು-ಸಾವಿನ ಪುಟಗಳ ಮಧ್ಯೆ ಸಾಕಷ್ಟು ಪುಟಗಳಿದ್ದು, ಆ ಪುಟಗಳು ಸಾರ್ಥಕ ಬದುಕನ್ನು ಸಾಗಿಸಿದರೆ, ಸಮಾಜಕ್ಕೆ ಅನೇಕ ಕೊಡುಗೆಗಳ ನೀಡಿದರೆ ಸಾವಿನ ನಂತರವೂ ಜೀವಂತವಾಗಿರಬಹುದು ಎಂಬುದಕ್ಕೆ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ ಮಾನಸಿಕವಾಗಿ ಜನರ ಮನಸ್ಸಿನಲ್ಲಿ ನೆಲೆಯೂರಿರುವ ಸಾಧಕರೇ ಸಾಕ್ಷಿ ಎಂದು ಹರಿಹರ ಮಾಜಿ ಶಾಸಕ ಎಚ್.ಎಸ್.ಶಿವಶಂಕರ ತಿಳಿಸಿದರು.

ನಗರದ ಎಂಸಿಸಿ ಬಿ ಬ್ಲಾಕ್‌ನ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಪದ್ಮಶ್ರೀ ಚಿಂದೋಡಿ ಲೀಲಾ ಟ್ರಸ್ಟ್ ಹಮ್ಮಿಕೊಂಡಿದ್ದ ರಂಗಭೂಮಿ ಮತ್ತು ಚಲನಚಿತ್ರ ಹಿರಿಯ ಕಲಾವಿದೆ ದಿವಂಗತ ಪದ್ಮಶ್ರೀ ಚಿಂದೋಡಿ ಲೀಲಾರ 14ನೇ ವರ್ಷದ ರಂಗಸ್ಮರಣೆ ಅಂಗವಾಗಿ ರಂಗಭೂಮಿ ಕಲಾವಿದರ ಸಮ್ಮಿಲನ ಹಾಗೂ ಕಲಾ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿ, ಜೀವನದ ಮೊದಲ ಸಾಲು ಹಾಗೂ ಕೊನೆಯ ಪುಟ ಮಧ್ಯೆ ಇರುವ ಪುಟಗಳಲ್ಲಿ ಅರ್ಥಪೂರ್ಣ, ಆದರ್ಶದ ಬಾಳನ್ನು ಬಾಳಬೇಕು. ಅಂತಹ ಆದರ್ಶ, ಸಾರ್ಥಕ ಬದುಕನ್ನು ಸಾಗಿಸಿ, ಸಮಾಜಕ್ಕೆ ಕೊಡುಗೆ ನೀಡಬೇಕು. ಇದ್ದಾಗ ಅಂತಹ ವರ ಬಗ್ಗೆ ಮಾಡಲಾಗದೇ, ಸತ್ತಾಗ ಸ್ಮಾರಕ ಮಾಡುವುದನ್ನು ಕಾಣುತ್ತೇವೆ. ಹೆತ್ತ ತಂದೆ, ತಾಯಿಯ ಕೈಲಾಸ ಸಮಾರಾಧನೆ ಮಾಡಿದ ನಂತರ ಮರೆತು ಬಿಡುವವರನ್ನೂ ಸಮಾಜದಲ್ಲಿ ಕಾಣುತ್ತೇವೆ. ಅಪ್ಪನ ಆಸ್ತಿ ಹಂಚಿಕೆಯಾದ ನಂತರ ಎಲ್ಲರೂ ಮರೆತು ಹೋಗುತ್ತದೆ. ಇದು ಜಗತ್ತು, ಜಗತ್ತಿನ ಜನರ ಮನಸ್ಥಿತಿ ಎಂದು ವಿಷಾದಿಸಿದರು.

ಆದರೆ, ಪದ್ಮಶ್ರೀ ಚಿಂದೋಡಿ ಲೀಲಾರಂತಹ ಮೇರು ಕಲಾವಿಗೆ ಕನ್ನಡ ನಾಡು, ನುಡಿ, ರಂಗಭೂಮಿ, ಕನ್ನಡ ಚಿತ್ರರಂಗಕ್ಕೆ, ಕಲಾವಿದರ ಬದುಕಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮರಾಠಿಗರಿಗೆ ಸೆಡ್ಡು ಹೊಡೆದು, ಕನ್ನಡತನ ಮೆರೆದ, ಅಲ್ಲಿನ ಪಾಲಿಕೆಯಲ್ಲೂ ಕನ್ನಡದ ಸ್ವಾಭಿಮಾನದ ಧ್ವನಿ ಹಾಕಿದವರು ಲೀಲಾ. ತಾವೂ ಬೆಳೆದು, ಇತರೆ ಕಲಾವಿದರನ್ನೂ ಬೆಳೆಸಿ, ದಾವಣಗೆರೆಗೆ ಕೀರ್ತಿ ತಂದ ಸಾಧಕಿ ಪದ್ಮಶ್ರೀ ಚಿಂದೋಡಿ ಲೀಲಾರವರು ಎಂದು ಸ್ಮರಿಸಿದರು.

ಸಾನ್ನಿಧ್ಯ ವಹಿಸಿದ್ದ ಬನಹಟ್ಟಿಯ ಶ್ರೀ ಮಹಾಂತ ಮಂದಾರ ಮಠದ ಶ್ರೀ ಮಹಾಂತ ದೇವರು ಮಾತನಾಡಿ, ಪದ್ಮಶ್ರೀ ಚಿಂದೋಡಿ ಲೀಲಾ ಕೇವಲ ಒಬ್ಬ ಕಲಾವಿದೆಯಾಗಿ ಮಾತ್ರವಲ್ಲ, ಓರ್ವ ಮಾತೃಹೃದಯಿ, ಕನ್ನಡ ಪರ ಹೋರಾಟಗಾರ್ತಿಯೂ ಆಗಿದ್ದರು. ಕನ್ನಡ ನಾಡು, ನುಡಿಗೆ, ಕನ್ನಡ ನೆಲಕ್ಕೆ, ರಂಗಭೂಮಿಗೆ ಚಿಂದೋಡಿ ಮನೆತನ ಸಾಕಷ್ಟು ಕೊಡುಗೆ ನೀಡುತ್ತಿದೆ. ಇದೀಗ ಪದ್ಮಶ್ರೀ ಚಿಂದೋಡಿ ಲೀಲಾ ಟ್ರಸ್ಟ್ ಮೂಲಕ ಹಿರಿಯ ಕಲಾವಿದೆಯನ್ನು ಸ್ಮರಿಸುವ ಜೊತೆ ರಂಗಭೂಮಿ ಕಲಾವಿದರ ಸಮ್ಮಿಲನ, ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಮಾದರಿ ಹೆಜ್ಜೆಯನ್ನು ಚಿಂದೋಡಿ ಚಂದ್ರಧರ್ ಮತ್ತು ತಂಡ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಹಿರಿಯ ಉದ್ಯಮಿ, ಟ್ರಸ್ಟ್‌ನ ಮುಖ್ಯ ಟ್ರಸ್ಟಿ ಚಿಂದೋಡಿ ಎಲ್.ಚಂದ್ರಧರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಹಾಸ್ಯ ನಟ, ರಂಗಭೂಮಿ ಕಲಾವಿದ ಡಿಂಗ್ರಿ ನಾಗರಾಜ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಜಗದೀಶ ಬಾವಿಕಟ್ಟಿ ಇತರರು ಇದ್ದರು. ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು.

ಬದುಕು ಮತ್ತೊಬ್ಬರಿಗೆ ಮಾದರಿಯಾಗಲಿ

ಹುಟ್ಟು-ಸಾವು ಸಹಜ, ಸ್ವಾಭಾವಿಕ. ಆದರೆ, ಸಮಾಜಕ್ಕೆ ನಾವು ಒಳ್ಳೆಯದು ಕೊಟ್ಟರೆ, ಸದಾ ಸ್ಮರಣೀಯರಾಗಿರುತ್ತೇವೆ. ಎಂತಹ ಕೆಟ್ಟವರಿಗೂ ಸಹಕಾರ ಮಾಡುವವರು ಇರುತ್ತಾರೆ. ಆದರೆ, ನಮ್ಮ ಬದುಕು ಮತ್ತೊಬ್ಬರಿಗೆ ಮಾದರಿಯಾಗಿದ್ದು, ಸ್ಮರಣೀಯವಾಗಬೇಕು. ಆಗ ಮಾತ್ರ ಸ್ಮರಣೆಯ ಕಾರ್ಯಕ್ರಮಗಳಿಗೂ ಅರ್ಥ ಬರುತ್ತದೆ. ಮಾನವನಾಗಿ ಹುಟ್ಟಿದ ಮೇಲೆ ಮಾನವೀಯ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು.

ಎಚ್.ಎಸ್.ಶಿವಶಂಕರ, ಹರಿಹರ ಮಾಜಿ ಶಾಸಕ