ವೈಯಕ್ತಿಕ ಕೆಲಸ ಬದಿಗಿಡಿ: ಪಕ್ಷವನ್ನು ಗೆಲ್ಲಿಸಿ: ಈರಣ್ಣ ಕಡಾಡಿ

| Published : Mar 31 2024, 02:08 AM IST

ವೈಯಕ್ತಿಕ ಕೆಲಸ ಬದಿಗಿಡಿ: ಪಕ್ಷವನ್ನು ಗೆಲ್ಲಿಸಿ: ಈರಣ್ಣ ಕಡಾಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕರ್ತರು ಈಗಿನಿಂದಲೇ ಪಕ್ಷದ ಅಭ್ಯರ್ಥಿ ಗೆಲುವಿಗೆ ಬೇಕಾದ ಅಗತ್ಯ ಸಿದ್ಧತೆ ಕೈಗೊಳ್ಳಲು ಈರಣ್ಣ ಕಡಾಡಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಲೋಕಸಭಾ ಚುನಾವಣೆಯು 5 ವರ್ಷಗಳಿಗೊಮ್ಮೆ ಬರುವ ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾಗಿದ್ದು, ಪಕ್ಷದ ಕಾರ್ಯಕರ್ತರು ಒಂದು ತಿಂಗಳ ವರೆಗೆ ವೈಯಕ್ತಿಕ ಕೆಲಸ ಬದಿಗಿಟ್ಟು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಲೋಕಸಭಾ ಚುನಾವಣೆಯ ಕ್ಲಸ್ಟರ್‌ ಪ್ರಮುಖ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಕರೆ ನೀಡಿದರು.

ಅವರು ಶನಿವಾರ ಸಂಜೆ ಇಲ್ಲಿನ ಅರವಿಂದ ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಹು-ಧಾ ಮಹಾನಗರ ಜಿಲ್ಲೆ ಮತ್ತು ಗ್ರಾಮಾಂತರ ಲೋಕಸಭಾ ಚುನಾವಣೆಯ ನಿರ್ವಹಣಾ ಸಮಿತಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.

ದೇಶಾದ್ಯಂತ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಯಾವುದೇ ಒಂದು ಹಬ್ಬ ಬಂದರೆ ಮನೆಯವರೆಲ್ಲ ಸೇರಿ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತೆವೆಯೋ ಹಾಗೆ ಕಾರ್ಯಕರ್ತರು ಈಗಿನಿಂದಲೇ ಪಕ್ಷದ ಅಭ್ಯರ್ಥಿ ಗೆಲುವಿಗೆ ಬೇಕಾದ ಅಗತ್ಯ ಸಿದ್ಧತೆ ಕೈಗೊಳ್ಳಲು ಕರೆ ನೀಡಿದರು.

ದೇಶದ ಹಿತದೃಷ್ಟಿಯಿಂದ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಆದರೆ, ಕೆಲವು ಕಡೆಗಳಲ್ಲಿ ಹಣಬಲ, ತೋಳಬಲದಿಂದ ರಾಜಕಾರಣ ಮಾಡುತ್ತಿರುವ ಆರೋಪಗಳೂ ಕೇಳಿ ಬಂದಿವೆ. ರಾಜಕಾರಣ ಹಾಳಾಗುತ್ತಿದ್ದ ವೇಳೆ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರು ದೇಶದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಇದರ ಫಲವಾಗಿಯೇ ಇಂದು ರಾಜಕೀಯದಿಂದ ದೂರ ಉಳಿದಂತಹ ಪ್ರಜ್ಞಾವಂತರು ಚುನಾವಣೆಗೆ ಸ್ಪರ್ಧಿಸಲು ಮುಂದೆ ಬರುತ್ತಿರುವುದೇ ಸಾಕ್ಷಿ ಎಂದರು. ಚುನಾವಣೆಯ ಪೂರ್ವದಲ್ಲಿ ನಮ್ಮ ಪಕ್ಷ ನೀಡಿದ್ದ ಭರವಸೆಗಳನ್ನು ಈಡೇರಿಸುವ ಮೂಲಕ ಅಂದುಕೊಂಡಂತೆ ನಡೆದುಕೊಂಡಿದ್ದೇವೆ. 5 ವರ್ಷಗಳ ಕಾಲ ದೇಶವನ್ನು ಸುಭೀಕ್ಷೆಯ ಕಡೆಗೆ ಕೊಂಡೊಯ್ಯಬೇಕಾದರೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕಿದ್ದು, ಈಗಿನಿಂದಲೇ ಕಾರ್ಯಕರ್ತರು ಬಿಜೆಪಿ ಕೈಗೊಂಡ ಯೋಜನೆಗಳನ್ನು ಮನೆಮನೆಗೆ ಮುಟ್ಟಿಸುವ ಮೂಲಕ ಕ್ಷೇತ್ರದಲ್ಲಿ ಪ್ರಹ್ಲಾದ ಜೋಶಿ ಮತ್ತೊಮ್ಮೆ ಗೆಲುವು ಸಾಧಿಸುವ ಮೂಲಕ ಮೋದಿ ಪ್ರಧಾನಿಯಾಗಿಸಲು ಕೈ ಬಲಪಡಿಸುವಂತೆ ಮನವಿ ಮಾಡಿದರು.

ಗ್ಯಾರಂಟಿಯಿಂದ ಗೆದ್ದ ಕಾಂಗ್ರೆಸ್:

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗ್ಯಾರಂಟಿ ಘೋಷಣೆ ಮಾಡುವ ಮೂಲಕ ಜನರನ್ನು ಮರಳು ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇದನ್ನು ನಂಬಿದ ಜನತೆ ಅಧಿಕಾರ ಕೊಟ್ಟರೆ ಇಂದು ಗ್ಯಾರಂಟಿ ಯಶಸ್ವಿಯಾಗಿಸುವಲ್ಲಿ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ಚುನಾವಣೆ ವರೆಗೆ ಮಾತ್ರ ಗ್ಯಾರಂಟಿಗಳು ಇರಲಿದ್ದು, ನಂತರ ಕಣ್ಮರೆಯಾಗಲಿವೆ. ಕಾಂಗ್ರೆಸ್ಸಿನಲ್ಲಿ ಲೋಕಸಭೆಗೆ ಸ್ಪರ್ಧಿಸಲು ಅಭ್ಯರ್ಥಿಗಳೇ ಸಿಗುತ್ತಿಲ್ಲ. ಹಾಗಾಗಿ ಪಕ್ಷದ ಸಚಿವರ, ಹಿರಿಯರ ಕುಟುಂಬದವರಿಗೆ ಟಿಕೆಟ್‌ ನೀಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಂಚಾಲಕ ಮಾ. ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಕಳೆದ ವಾರ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಭೆ ಕರೆದು ಚುನಾವಣೆಯ ಸಿದ್ಧತೆ ಕುರಿತು ಚರ್ಚಿಸಲಾಗಿದೆ. ಹುಬ್ಬಳ್ಳಿಯ ಈ ಸಭೆಯಲ್ಲಿ 37 ವಿಭಾಗಗಳ ಕಾರ್ಯಕರ್ತರು, 8 ವಿಧಾನಸಭಾ ಕ್ಷೇತ್ರಗಳ ಸಂಚಾಲಕರು ಹಾಗೂ ಪ್ರಭಾರಿಗಳು ಪಾಲ್ಗೊಂಡಿದ್ದು ಚುನಾವಣೆಯ ಸಿದ್ಧತೆ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತಿದೆ. ಏಪ್ರಿಲ್‌ 1ರಿಂದ 5ರ ವರೆಗೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಬೂತ್‌ ಸಮಿತಿಯ ಸಭೆ ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.

ಈ ವೇಳೆ ಮಾಜಿ ಶಾಸಕ ಅಶೋಕ ಕಾಟವೆ, ಸಂಜಯ ಕಪಟಕರ, ಬಸವರಾಜ ಕುಂದಗೋಳಮಠ, ಗ್ರಾಮೀಣ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಪಾಲಿಕೆ ಮಾಜಿ ಮೇಯರ್‌ ಈರೇಶ ಅಂಚಟಗೇರಿ, ದತ್ತಮೂರ್ತಿ ಕುಲಕರ್ಣಿ, ರವಿ ನಾಯ್ಕ ಸೇರಿದಂತೆ ಹಲವರಿದ್ದರು.