ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ

| Published : Sep 09 2025, 01:00 AM IST

ಸಾರಾಂಶ

ಜಿಲ್ಲೆಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ತಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಬುಡಕಟ್ಟು ಬೇಡರ ಪಡೆ ಸಂಘಟನೆಯ ಅಧ್ಯಕ್ಷರಾದ ಮಾರಣ್ಣ ಪಾಳೇಗಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಿ ತಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಬುಡಕಟ್ಟು ಬೇಡರ ಪಡೆ ಸಂಘಟನೆಯ ಅಧ್ಯಕ್ಷರಾದ ಮಾರಣ್ಣ ಪಾಳೇಗಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ನಗರದ ಟೌನ್‌ಹಾಲ್ ವೃತ್ತದಿಂದ ನೂರಾರು ರಾಷ್ಟ್ರೀಯ ಬುಡಕಟ್ಟು ಬೇಡರ ಪಡೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕೆಲ ಕಾಲ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿ, ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಿದರು.ರಾಷ್ಟ್ರೀಯ ಬುಡಕಟ್ಟು ಬೇಡರ ಪಡೆಯ ಅಧ್ಯಕ್ಷ ಮಾರಣ್ಣ ಪಾಳೇಗಾರ ಮಾತನಾಡಿ, ರಾಜ್ಯಾದ್ಯಂತ ಕೇಂದ್ರ ಕಚೇರಿ ಮತ್ತು ಜಿಲ್ಲಾ ಕಚೇರಿಗಳಲ್ಲಿ ಬಹು ದೊಡ್ಡ ಭ್ರಷ್ಟಾಚಾರ ನಡೆದಿದ್ದರೂ ಸಹ ಸರಕಾರ ಮತ್ತು ಇಲಾಖೆ ಸೂಕ್ತ ಕಾನೂನು ಕ್ರಮ ಜರುಗಿಸಿಲ್ಲ. ಇಲಾಖಾ ಅಧಿಕಾರಿಗಳು, ದಲ್ಲಾಳಿಗಳು, ಭ್ರಷ್ಟಾಚಾರ ಮಾಡಿ ಪರಿಶಿಷ್ಟ ಪಂಗಡದ ಫಲಾನುಭವಿಗಳ ಹಣವನ್ನು ದುರುಪಯೋಗ ಮಾಡಿಕೊಂಡಿರುವುದು ಜಗತ್ ಜಾಹಿರಾಗಿದೆ. ಅವಿದ್ಯಾವಂತ ಸಮುದಾಯದವರಿಂದ ರಾಜ್ಯಾದ್ಯಂತ ಜಿಲ್ಲಾ ವ್ಯವಸ್ಥಾಪಕರು ಮತ್ತು ದಲ್ಲಾಳಿಗಳು ಫಲಾನುಭವಿಗಳಿಂದ ಖಾಲಿ ಪೇಪರಿಗೆ ಸಹಿ ಮಾಡಿಸಿಕೊಂಡು ಹಾಗೂ ಸಂಬಂಧಪಟ್ಟವರಿಂದ ಬದಲಾವಣೆ ಮಾಡಿಸಿಕೊಂಡು ಅವಿದ್ಯಾವಂತ ಸಮುದಾಯದ ಫಲಾನುಭವಿಗಳಿಗೆ ಮೋಸ ಮಾಡಿ ಅದರಿಂದ ಹಣ ಮಾಡಿದ್ದಾರೆ ಎಂದು ದೂರಿದರು.ವಾಲ್ಮೀಕಿ ಅಭಿವೃದ್ದಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿಗಳಾದ ಗಂಗರಾಜು ಎಸ್.ಬಿ ಮತ್ತು ಮೋಹನ್ ಎ ಹಾಗೂ ಇತರರು ಸೇರಿಕೊಂಡು ಬಹು ದೊಡ್ಡ ಭ್ರಷ್ಟಾಚಾರ ಮಾಡಿರುವ ಮಾಹಿತಿಯನ್ನು ಫಲಾನುಭವಿಗಳು ನೀಡಿರುತ್ತಾರೆ. ಹಾಗೂ ಅವಿದ್ಯಾವಂತ ಫಲಾನುಭವಿಗಳಿಂದ ತಾಲೂಕು ಅಭಿವೃದ್ಧಿ ಅಧಿಕಾರಿಗಳು ಖಾಲಿ ಹಾಳೆಗಳಿಗೆ ಸಹಿ ಮಾಡಿಸಿಕೊಂಡು ಸಂಬಂಧಪಟ್ಟ ತಾಲೂಕು ಶಾಸಕರ ಬಳಿ ಫಲಾನುಭವಿಯನ್ನು ಬದಲಾವಣೆ ಮಾಡಿಸಿಕೊಂಡು ಲಕ್ಷಾಂತರ ರುಪಾಯಿ ಲಂಚದ ರೂಪದಲ್ಲಿ ಹಣ ಪಡೆದಿರುತ್ತಾರೆ. ಗಂಗರಾಜು ಎಸ್.ಬಿ ಹಾಗೂ ಮೋಹನ್ ಎ ಫಲಾನುಭವಿಗಳಿಂದ 25 ಒಂದು ಬೋವೆಲ್‌ಗೆ ಅಥವಾ ಮತ್ತೊಂದು ಯೋಜನೆಗೆ ಆಯ್ಕೆಯಾದವರಿಂದ ಸುಮಾರು 25 ಸಾವಿರದಿಂದ 1.00 ಲಕ್ಷದವರೆಗೆ ಲಂಚ ಪಡೆದು ಪರಿಶಿಷ್ಟ ಪಂಗಡದ ಸಮುದಾಯದ ಫಲಾನುಭವಿಗಳಿಗೆ ಮೋಸ ಮಾಡಿರುವುದು ಮಾಹಿತಿ ಇರುತ್ತದೆ. ಇಂತಹ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಜರುಗಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.ರಾಷ್ಟ್ರೀಯ ಬುಡಕಟ್ಟು ಬೇಡರ ಪಡೆಯ ಭಾನುಪ್ರಕಾಶ್ ಮಾತನಾಡಿ, ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಈ ಹಿಂದೆ ಸುಮಾರು ೨೦೦ ಕೋಟಿಗಳ ಹಗರಣ ನಡೆದರೂ ಸಹ ತಮ್ಮ ಸರಕಾರದ ಮಟ್ಟದಲ್ಲಿ ನೆಪಮಾತ್ರಕ್ಕೆ ತನಿಖೆ ನಡೆಸಿದೆ. ಇದರಿಂದಾಗಿ ಸರ್ಕಾರದ ಹಣ ವಾಪಸ್ ಪಡೆದಿರುವುದಿಲ್ಲ. ರಾಜ್ಯಾದ್ಯಂತ ರಾಯಚೂರು, ದಾವಣಗೆರೆ, ಬಳ್ಳಾರಿ, ಹಾವೇರಿ, ತುಮಕೂರು. ಚಿತ್ರದುರ್ಗ ಇನ್ನೂ ಅನೇಕ ಜಿಲ್ಲೆಗಳಲ್ಲಿ ಜಿಲ್ಲಾ ವ್ಯವಸ್ಥಾಪಕರು ಒಳಗೊಂಡಂತೆ ಭ್ರಷ್ಟಾಚಾದ ನಡೆದು ಜಿಲ್ಲಾವಾರು ತನಿಖೆ ಮಾಡಿ ತಪ್ಪಿತಸ್ಥ ಜಿಲ್ಲಾ ವ್ಯವಸ್ಥಾಪಕರು ರುಜುವಾತಾದರೂ ಸಹ ಕೇಂದ್ರ ಕಚೇರಿ, ಸರ್ಕಾರ ಮತ್ತು ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಅಧಿಕಾರಿಗಳನ್ನು ಸುಮ್ಮನೆ ಬಿಟ್ಟಿರುವುದು ಕೇಂದ್ರ ಕಚೇರಿಯ ಅಧಿಕಾರಿಗಳು ಸಹ ಭ್ರಷ್ಟಾಚಾರದಲ್ಲಿ ಶಾಮೀಲಾಗಿರುವ ಅನುಮಾನಗಳಿವೆ ಎಂದರು.ಶಿರಾ ತಾಲೂಕು ಕಳ್ಳಂಬೆಳ್ಳ ಹೋಬಳಿ, ಸಲುವರಹಳ್ಳಿ ಗ್ರಾಮದ ಈ ಹಿಂದೆ ಆಯ್ಕೆಯಾದ ಫಲಾನುಭವಿಯನ್ನು ಶಾಸಕರ ಪತ್ರದ ಮುಖಾಂತರ ತಾಲೂಕು ಅಭಿವೃದ್ಧಿ ಬದಲಾವಣೆ ಮಾಡಿಕೊಂಡು ಹೊಸ ಫಲಾನುಭವಿಯಿಂದ 1.50 ಲಕ್ಷರು ಗಂಗರಾಜು.ಎಸ್.ಬಿ ಲಂಚ ಪಡೆದು ಬೋರ್‌ವೆಲ್ ಕೊರೆಸಿರುತ್ತಾನೆ. ಗುಬ್ಬಿ ತಾಲೂಕು, ಹಾಗಲವಾಡಿ ಹೋಬಳಿ, ಮಂಚಲದೊರೆ ಗ್ರಾಮದ ಜಯಮ್ಮನವರಿಂದ ರು. 50 ಸಾವಿರ ಲಂಚ ಪಡೆದು ಜಮೀನಿನಲ್ಲಿ ಗಂಗಾ ಕಲ್ಯಾಣ ಬೋರ್‌ವೆಲ್ ಕರೆಸಿ ವಿಫಲವಾಗಿದ್ದರೂ ಸಹ ತಾಲೂಕು ಅಭಿವೃದ್ಧಿ ಅಧಿಕಾರಿಯಾದ ಮೋಹನ್ ಎ ರವರು ಗುತ್ತಿಗೆದಾರರ ಜೊತೆ ಶಾಮೀಲಾಗಿ ಬಿಲ್ ಮಂಜೂರು ಮಾಡಿರುತ್ತಾನೆ. ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟ ನಡೆಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ರಾಷ್ಟ್ರೀಯ ಬುಡಕಟ್ಟು ಬೇಡರ ಪಡೆಯ ಅಂಜನಾಯಕ್ ಪಾವಗಡ, ಶಿವಣ್ಣ ಚೇಳೂರು, ರಾಜಣ್ಣ, ಗೋಪಿ ಪಾವಗಡ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.