ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುದೋಷಪೂರಿತ ದತ್ತಾಂಶ ಪರಿಗಣಿಸಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ರಾಜ್ಯ ಸರ್ಕಾರ ಅವೈಜ್ಙಾನಿಕವಾಗಿ ವರ್ಗೀಕರಣ ಮಾಡಿದೆ ಎಂದು ಆಪಾದಿಸಿ, ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸೆ.10 ರಂದು ಭೋವಿ, ಬಂಜಾರ, ಕೊರಚ, ಕೊರಮ ಹಾಗೂ ಅಲೆಮಾರಿ ಸಮುದಾಯಗಳಿಂದ ಬೆಂಗಳೂರು ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಹಾಗೂ ಭೋವಿ ಸಂಘದ ಜಿಲ್ಲಾಧ್ಯಕ್ಷ ಓಂಕಾರ್ ತಿಳಿಸಿದರು.ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ ಶೇ.17ಕ್ಕೆ ಏರಿಕೆ ಮಾಡಿ ಐತಿಹಾಸಿಕ ತೀರ್ಮಾನಕೈಗೊಂಡಿತ್ತು. ಈ ತೀರ್ಮಾನದಿಂದ ಇಂದು ಸಾವಿರಾರು ವಿದ್ಯಾರ್ಥಿಗಳು ಎಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಅನೇಕ ಕೋರ್ಸ್ ಗಳಿಗೆ ಪ್ರವೇಶ ಪಡೆದಿದ್ದಾರೆ. ದಲಿತರ ಕಲ್ಯಾಣಕ್ಕಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ ಬಿಜೆಪಿ ಸರ್ಕಾರದ ವಿರುದ್ಧ ಅಂದಿನ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಇದು ಕೇವಲ ಆಶ್ವಾಸನೆ ಜಾರಿಗೆ ಬರುವುದಿಲ್ಲ ಎಂದು ಟೀಕೆ ಮಾಡಿತ್ತು. ಆದರೆ ಇಂದು ಅದೇ ಮೀಸಲಾತಿ ಪ್ರಮಾಣದಲ್ಲಿ ತಮ್ಮ ಪಕ್ಷದ ನಾಯಕರನ್ನು ಮೆಚ್ಚಿಸಲು ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಿಗೊಂದಲ ಸೃಷ್ಠಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಎಲ್ಲಾ ಸಮುದಾಯಗಳಲ್ಲಿ ಶಿಕ್ಷಣ, ಉದ್ಯೋಗ, ಅಂತರ್ ಹಿಂದುಳಿದಿರುವಿಕೆಯ ವಾಸ್ತವ ದತ್ತಾಂಶಗಳ ಆಧಾರದಲ್ಲಿ, ಪ್ರಾತಿನಿಧ್ಯ ಕೊರತೆ ಆಗದಂತೆ ಮೀಸಲಾತಿ ಪ್ರಮಾಣ ಹಂಚಿಕೆ ಮಾಡಬೇಕು ಎಂಬುದು ಸುಪ್ರೀಂಕೋರ್ಟ್ ಆದೇಶವಾಗಿದೆ. ಎಲ್ಲಾ ಸಮಾಜಗಳಿಗೂ ಸಮಾನ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬ ಇಚ್ಛಾಶಕ್ತಿಯನ್ನು ಸರ್ಕಾರ ತೋರಬೇಕು ಎಂದು ಹೇಳಿದರು. ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಈಗ ತೀರ್ಮಾನ ಮಾಡಿರುವ ಒಳಮೀಸಲಾತಿ ವರ್ಗೀಕರಣದಲ್ಲಿ ಅನ್ಯಾಯ ಮಾಡಿದೆ. ಬಂಜಾರ, ಭೋವಿ, ಕೊರಚ, ಕೊರಮ ಈ ನಾಲ್ಕು ಸಮುದಾಯಗಳಿಗೆ ಶೇಕಡ 4.5ಹಾಗೂ ಅಲೆಮಾರಿ ಸಮುದಾಯಗಳಿಗೆ ಶೇಕಡ 1 ರಷ್ಟು ಒಳಮೀಸಲಾತಿ ನೀಡಬೇಕು ಎಂದು ಹಿಂದಿನ ಬಿಜೆಪಿ ಸರ್ಕಾರ ಶಿಫಾರಸ್ಸು ಮಾಡಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ 63 ಸಮುದಾಯಗಳನ್ನು ಒಟ್ಟಿಗೆ ಸೇರಿಸಿ ಶೇಕಡ 5 ರಷ್ಟು ಮೀಸಲಾತಿ ಹಂಚಿಕೆ ಮಾಡಿದ್ರೋಹ ಮಾಡಿದೆ. ಒಳಮೀಸಲಾತಿ ಪ್ರಮಾಣವನ್ನು ಮರುಪರಿಶೀಲನೆ ಮಾಡಿ ಅವಕಾಶ ವಂಚಿತ, ಧ್ವನಿ ಇಲ್ಲದ ಸಮುದಾಯಗಳಿಗೆ ನ್ಯಾಯಒದಗಿಸಬೇಕು ಎಂದು ಓಂಕಾರ್ ಒತ್ತಾಯಿಸಿದರು.ಸೆ.10 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತುಮಕೂರುಜಿಲ್ಲೆಯ ಎಲ್ಲಾ ತಾಲ್ಲೂಕಿನ ಭೋವಿ, ಬಂಜಾರ, ಕೊರಚ, ಕೊರಮ ಹಾಗೂ ಅಲೆಮಾರಿ ಸಮುದಾಯದವರು ಸ್ವಯಂ ಪ್ರೇರಿತವಾಗಿ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಜಿಲ್ಲಾ ಬಂಜಾರ ಸಂಘದಕಾರ್ಯಾಧ್ಯಕ್ಷ ಬಾಂಬೆ ಕುಮಾರ ನಾಯಕ್, ಜಿಲ್ಲಾ ಭೋವಿ ಸಂಘದಉಪಾಧ್ಯಕ್ಷ ಶಿರಾ ಗೋವಿಂದರಾಜು, ಮುಖಂಡರಾದ ಸತೀಶ್, ಮಂಜುನಾಥ್ ಹಾಜರಿದ್ದರು.