ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನದ ಹಣತೆ ಹಚ್ಚಿದವರು: ಸಿ.ಟಿ.ರವಿ

| Published : Sep 09 2025, 01:00 AM IST

ಸಾರಾಂಶ

ಚಿಕ್ಕಮಗಳೂರು, ಬ್ರಹ್ಮಶ್ರೀ ನಾರಾಯಣ ಗುರುಗಳು ಜಾತೀಯತೆ ವಿರುದ್ಧ ಖಡ್ಗವನ್ನು ಹಿಡಿಯಲಿಲ್ಲ. ಬದಲಾಗಿ ಜನರ ಹೃದಯದಲ್ಲಿ ಜ್ಞಾನದ ಹಣತೆ ಹಚ್ಚಿದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

- ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಮಹೋತ್ಸವ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬ್ರಹ್ಮಶ್ರೀ ನಾರಾಯಣ ಗುರುಗಳು ಜಾತೀಯತೆ ವಿರುದ್ಧ ಖಡ್ಗವನ್ನು ಹಿಡಿಯಲಿಲ್ಲ. ಬದಲಾಗಿ ಜನರ ಹೃದಯದಲ್ಲಿ ಜ್ಞಾನದ ಹಣತೆ ಹಚ್ಚಿದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ವಸ್ತುಗಳು ಪಂಚಭೂತ ಗಳಿಂದಾಗಿವೆ. ಮನುಷ್ಯ ದೇವರ ಸೃಷ್ಟಿಯಾಗಿದ್ದು, ದೇವರು ಜಾತಿ ಸೃಷ್ಟಿಸಲಿಲ್ಲ. ಜನ್ಮದಿಂದ ಬ್ರಾಹ್ಮಣನಾಗಿದ್ದರೂ ಗುಣಗ್ರಾಹಿಯಾಗಿರದಿದ್ದರೆ ಆತ ಶೂದ್ರನೇ ಆಗುತ್ತಾನೆ. ಶೂದ್ರನಾಗಿದ್ದು, ವಿದ್ವತ್ತನ್ನು ಗಳಿಸಿದ್ದರೆ ಆತ ಶ್ರೇಷ್ಠ ವಿದ್ವಾಂಸ ನಾಗುತ್ತಾನೆ ಎಂದು ಹೇಳಿದರು.

ನಾರಾಯಣ ಗುರುಗಳು ಕೆಳ ಜಾತಿಯಲ್ಲಿ ಹುಟ್ಟಿದ್ದರೂ ಸಂಸ್ಕೃತ, ಮಲಯಾಳಂ, ತಮಿಳು ಮೂಲಕ ಅಪಾರ ಜ್ಞಾನವನ್ನು ಸಂಪಾದಿಸಿ ಬ್ರಹ್ಮ ಶ್ರೀಗಳಾದರು. ಯಾವುದೇ ಮಹಾನುಭಾವರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು. ಹಾಗೆ ಸೀಮಿತಗೊಳಿಸಿದರೆ ಆ ಜಾತಿಗೆ ಅಪಚಾರ ಮಾಡಿದಂತಾಗುತ್ತದೆ. ದೇವರನಾಡು ಎಂದೇ ಹೆಸರಾದ ಕೇರಳದಲ್ಲಿ ಮತಾಂತರ ಮಾಯಾಜಾಲವಾಗಿ ಹಬ್ಬಿಕೊಂಡಿದ್ದ ಸಂದರ್ಭದಲ್ಲಿ ಕೆಳ ವರ್ಗದವರು ಮತಾಂತರಗೊಳ್ಳದಂತೆ ಪಾರು ಮಾಡಿದವರೇ ನಾರಾಯಣ ಗುರುಗಳು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆ ಕಂಡ ಸಂಸ್ಕಾರ ವಂತ ದೇಶ ನಮ್ಮದು. ಶೋಷಿತ ಸಮಾಜದ ಗುರುಗಳು ಬುದ್ಧ, ಬಸವ, ಅಂಬೇಡ್ಕರರಂತೆ ವಿಶ್ವ ಕ್ರಾಂತಿ ಮಾಡಿದರು. ವಿವಿಧತೆಯಲ್ಲಿ ಏಕತೆ, ಸಂಸ್ಕಾರವಿರುವ ದೇಶವೆಂದರೆ ಅದು ಭಾರತ. ಒಟ್ಟು ಕುಟುಂಬದಲ್ಲಿ ಒಗ್ಗಟ್ಟು, ಸಾಮರಸ್ಯವಿರುತ್ತದೆ ಎಂದು ಕೂಡು ಕುಟುಂಬದ ಬಗ್ಗೆ ತಿಳಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಸಾಹಿತಿ ಬಿ.ತಿಪ್ಪೇರುದ್ರಪ್ಪ ಉಪನ್ಯಾಸ ನೀಡಿ, ಮಹನೀಯರ ಜೀವನ, ಸಾಧನೆ ಮೆಲುಕು ಹಾಕುವ ಮೂಲಕ ನಮ್ಮ ಬದುಕನ್ನು ಉನ್ನತೀಕರಿಸಿಕೊಳ್ಳುವುದೇ ಆಗಿದೆ. ಭರತ ಭೂಮಿಯಲ್ಲಿ ಸಮಾಜದ ಅನಿಷ್ಠ, ಅಂಟು ಜಾಢ್ಯಗಳಾದ ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆ, ಸಾಮಾಜಿಕ ಅನ್ಯಾಯ ಹೆಚ್ಚಾಗಿದ್ದಾಗ ಬಸವ, ಬುದ್ಧ, ಅಂಬೇಡ್ಕರ್ ಅವುಗಳನ್ನು ನಿವಾರಿಸಲು ಶ್ರಮಿಸಿದರು. ಅದೇ ಸಾಲಿನಲ್ಲಿ ನಿಲ್ಲುವವರು ನಾರಾಯಣ ಗುರುಗಳು ಎಂದು ಹೇಳಿದರು. ಬ್ರಹ್ಮಶ್ರೀ ಎಂದರೆ ಬ್ರಹ್ಮಜ್ಞಾನ ಪಡೆದವರು ಎಂದು ಅರ್ಥ. ಯಾವಾಗ ಜಗತ್ತಿನಲ್ಲಿ ಅಧರ್ಮ, ಅಶಾಂತಿ ತಾಂಡವವಾಡುತ್ತೊ ಆಗ ಜಗತ್ತನ್ನು ಉದ್ಧರಿಸಲು ಮಹಾತ್ಮರು ಜನಿಸುತ್ತಾರೆ. ನಾರಾಯಣ ಗುರುಗಳು ಜನರ ಮನಸ್ಸಿನಲ್ಲಿ ಉತ್ಪತ್ತಿಯಾದ ಜಾತೀಯತೆ ಕಸವನ್ನು ಗುಡಿಸುವ ಕೆಲಸ ಮಾಡಿದರು. ವಿಧವೆಯ ಕಣ್ಣೀರನ್ನು ಒರೆಸದ, ಹಸಿದವರಿಗೆ ಅನ್ನವನ್ನು ನೀಡದ ಧರ್ಮ ಧರ್ಮವಲ್ಲ, ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂದು ಪ್ರತಿಪಾದಿಸಿ ಶೋಷಿತ ವರ್ಗದವರಿಗೂ ದೇವರಿದ್ದಾನೆ ಎಂದು ತೋರಿಸಿಕೊಡುವ ಮೂಲಕ ಅನೇಕ ದೇವಾಲಯಗಳನ್ನು ನಿರ್ಮಿಸಿದರು. ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಅನುಸರಿಸಿ ಅದ್ವೈತ ಗುರು ಎಂದೆನಿಸಿದ್ದಾರೆ. ಯೋಗದಲ್ಲಿ ಪತಂಜಲಿ, ಜ್ಞಾನದಲ್ಲಿ ಶಂಕರ, ಅಹಿಂಸೆಯಲ್ಲಿ ಬುದ್ಧ, ಮಾನವೀಯತೆಯಲ್ಲೂ ಏಸುವಿನಂತಿದ್ದವರು ನಾರಾಯಣ ಗುರುಗಳು ಎಂದು ಹೇಳಿದರು. ಶ್ರೀ ನಾರಾಯಣ ಗುರು ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಜಿಲ್ಲಾ ಆರ್ಯ ಈಡಿಗ ಸಂಘದ ಅಧ್ಯಕ್ಷ ಕೆ.ಚಂದ್ರಶೇಖರ್, ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಗುಣಶೇಖರ್, ಜಿಲ್ಲಾ ಬಿಲ್ಲವ ಸಂಘದ ಮಹಿಳಾ ಅಧ್ಯಕ್ಷೆ ಪ್ರಮಿಳಾ ವಿಜಯ, ಜಿಲ್ಲಾ ನಾರಾಯಣ ಗುರು ಸಮಿತಿ ಮಹಿಳಾ ಅಧ್ಯಕ್ಷೆ ಶಶಿಕಲಾ ಅಶೋಕ್, ಕೆ.ಸಿ.ಶಾಂತಕುಮಾರ್, ವಾಸು ಪೂಜಾರಿ, ರಾಜಣ್ಣ ಉಪಸ್ಥಿತರಿದ್ದರು. 8 ಕೆಸಿಕೆಎಂ 2ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಉದ್ಘಾಟಿಸಿದರು. ಶಾಸಕ ಎಚ್‌.ಡಿ. ತಮ್ಮಯ್ಯ, ಕೃಷ್ಣಪ್ಪ, ಚಂದ್ರಶೇಖರ್‌, ತಿಪ್ಪೇರುದ್ರಪ್ಪ ಇದ್ದರು.