ಶಾಸಕಾಂಗ ಸಭೆ ಪ್ರಜಾಪ್ರಭುತ್ವದ ಹೃದಯ: ಗೆಹ್ಲೋಟ್‌

| Published : Sep 14 2025, 01:04 AM IST

ಸಾರಾಂಶ

ನಗರದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಮೂರು ದಿನಗಳ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (ಸಿಪಿಎ) ಭಾರತ ವಲಯ ಸಮ್ಮೇಳನದ ಸಮಾರೋಪದಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ವಿಧಾನಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಜಾಪ್ರಭುತ್ವದ ಹೃದಯದಂತೆ ಶಾಸಕಾಂಗ ಸಭೆಯ ಚರ್ಚೆಗಳು ಕಾರ್ಯನಿರ್ವಹಿಸಬೇಕು. ಸದನದ ಚರ್ಚೆಗಳು ಕೇವಲ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಲ್ಲ, ಅದನ್ನು ಪರಿಹಾರದತ್ತ ಕೊಂಡೊಯ್ಯಬೇಕು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಮೂರು ದಿನಗಳ ಕಾಮನ್‌ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (ಸಿಪಿಎ) ಭಾರತ ವಲಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ವಿಧಾನಮಂಡಲವು ಈ ಪ್ರಜಾಪ್ರಭುತ್ವದ ಆತ್ಮವಾಗಿದೆ. ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಗಳು ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾಗಿದ್ದು, ಇವುಗಳೇ ಅದರ ಅಸ್ತಿತ್ವವನ್ನು ಬಲಪಡಿಸುತ್ತವೆ ಎಂದು ಡಾ.ಅಂಬೇಡ್ಕರ್ ನಂಬಿದ್ದರು ಎಂದರು.

ಸಭಾಧ್ಯಕ್ಷರು ಮತ್ತು ಸಭಾಪತಿ ಹುದ್ದೆಯು ಸಾಂವಿಧಾನಿಕ ದೃಷ್ಟಿಕೋನದಿಂದ ಹಾಗೂ ಪ್ರಜಾಪ್ರಭುತ್ವದ ನಡವಳಿಕೆಯ ದೃಷ್ಟಿಕೋನದಿಂದ ಬಹಳ ಮುಖ್ಯವಾಗಿದೆ. ಶಾಸಕಾಂಗ ಸಂಸ್ಥೆಗಳನ್ನು ನಡೆಸುವುದು, ಸದಸ್ಯರಲ್ಲಿ ಶಿಸ್ತು ಕಾಯ್ದುಕೊಳ್ಳುವುದು ಸೇರಿದಂತೆ ವಿವಿಧ ಅವರ ಜವಾಬ್ದಾರಿಗಳು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತವೆ. ಆದ್ದರಿಂದ, ಸಭಾಧ್ಯಕ್ಷರು, ಸಭಾಪತಿಗಳು ಸಂಸತ್ತು ಅಥವಾ ಶಾಸಕಾಂಗ ಸಭೆಯ ರಕ್ಷಕರೆಂದು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು. ಸದನಗಳಲ್ಲಿ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷವು ಅರ್ಥಪೂರ್ಣ ವಾದಗಳ ಆಧಾರದ ಮೇಲೆ ಚರ್ಚಿಸಿದಾಗ, ಅದು ನೀತಿ ನಿರೂಪಣೆಯನ್ನು ಬಲವಾದ, ಹೆಚ್ಚು ನ್ಯಾಯಯುತ ಮತ್ತು ದೂರದೃಷ್ಟಿಯತ್ತ ಕೊಂಡೊಯ್ಯುತ್ತದೆ. ಈ ಪ್ರಕ್ರಿಯೆಯು ಸಾರ್ವಜನಿಕ ವಿಶ್ವಾಸವನ್ನು ಬೆಳೆಸುತ್ತದೆ. ತಮ್ಮ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕ ಹಿತಾಸಕ್ತಿ, ರಾಷ್ಟ್ರೀಯ ಹಿತಾಸಕ್ತಿ, ವೈಯಕ್ತಿಕ ಅಥವಾ ಪಕ್ಷದ ಹಿತಾಸಕ್ತಿಗಳಿಗಿಂತ ಹೆಚ್ಚಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ನಂಬಿಕೆ ಸಾರ್ವಜನಿಕರಲ್ಲಿ ಇದೆ ಎಂದರು. ಶಿಕ್ಷಣ, ಆರೋಗ್ಯ, ಉದ್ಯೋಗ, ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ, ಯುವಜನರ ಉನ್ನತಿ, ಪರಿಸರ ಸಂರಕ್ಷಣೆ ಮತ್ತು ಗ್ರಾಮೀಣಾಭಿವೃದ್ಧಿ ವ್ಯವಸ್ಥೆಗಳು ಬಲಗೊಳ್ಳಬೇಕೆಂದು ಸಾರ್ವಜನಿಕರು ನಿರೀಕ್ಷಿಸುತ್ತಾರೆ. ಹೊಸ ತಂತ್ರಜ್ಞಾನ, ಜಾಗತೀಕರಣ, ಶಿಕ್ಷಣದ ಹರಡುವಿಕೆ ಮತ್ತು ಸಾಮಾಜಿಕ ಬದಲಾವಣೆಯು ಆಕಾಂಕ್ಷೆಗಳನ್ನು ಇನ್ನಷ್ಟು ವ್ಯಾಪಕಗೊಳಿಸಿದೆ. ಶಾಸಕಾಂಗದಲ್ಲಿ ಸುಸಂಘಟಿತ ಗಂಭೀರತೆ, ಸಭ್ಯತೆ ಮತ್ತು ತಾಳ್ಮೆಯೊಂದಿಗೆ ಅರ್ಥಪೂರ್ಣ ಚರ್ಚೆಗಳ ಮೂಲಕ ಮಾತ್ರ ಈ ಆಕಾಂಕ್ಷೆಗಳ ಈಡೇರಲು ಸಾಧ್ಯ ಎಂದು ತಿಳಿಸಿದರು.

ಜನರ ಧ್ವನಿಯನ್ನು ವ್ಯಕ್ತಪಡಿಸಲು ಸದನವು ಅತ್ಯುನ್ನತ ವೇದಿಕೆಯಾಗಿದೆ. ಇಲ್ಲಿ, ದೇಶ ಮತ್ತು ಸಮಾಜಕ್ಕೆ ಸಂಬಂಧಿಸಿದ ಗಂಭೀರ ವಿಷಯಗಳ ಕುರಿತು ಆಳವಾದ ಚರ್ಚೆ ನಡೆಯಬೇಕು, ಇದರಿಂದ ಪರಿಹಾರಗಳನ್ನು ಕಂಡುಹಿಡಿಯಬಹುದು. ಆದರೆ ಪ್ರಸ್ತುತ ಪರಿಸ್ಥಿತಿ ಸ್ವಲ್ಪ ವಿಭಿನ್ನವಾಗಿದೆ. ಸದನಗಳಲ್ಲಿ, ಚರ್ಚೆಯ ಬದಲು ಗದ್ದಲ, ಘೋಷಣೆಗಳು ಮತ್ತು ಅವ್ಯವಸ್ಥೆ ಹೆಚ್ಚಿರುವುದನ್ನು ಹೆಚ್ಚಾಗಿ ಕಾಣಬಹುದು. ಸಾರ್ವಜನಿಕರ ಸಮಸ್ಯೆಗಳು, ಪ್ರಶ್ನೋತ್ತರ ಅವಧಿಗಳು ಗದ್ದಲಕ್ಕೆ ಬಲಿಯಾಗುತ್ತದೆ. ಹಲವು ಬಾರಿ ಸ್ಪೀಕರ್, ಅಧ್ಯಕ್ಷರು ಕಲಾಪವನ್ನು ಮುಂದೂಡಬೇಕಾಗುತ್ತದೆ. ನಿಯಮಗಳು ಮತ್ತು ಶಿಸ್ತಿನ ಅನುಸರಣೆ ಕಡಿಮೆಯಾಗುತ್ತಿದೆ. ಇದು ಸದನದ ಘನತೆಗೆ ಧಕ್ಕೆ ತರುತ್ತದೆ ಮತ್ತು ಸಾರ್ವಜನಿಕರ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ, ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್, ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್, ವಿಧಾನಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಇತರರಿದ್ದರು.