ಎಲ್ಲರಿಗೂ ಸಂಸ್ಕೃತಿ- ಪರಂಪರೆಯ ಪರಿಚಯವಿರಲಿ: ಹಾರಿಕಾ ಮಂಜುನಾಥ

| Published : Apr 09 2024, 12:49 AM IST

ಎಲ್ಲರಿಗೂ ಸಂಸ್ಕೃತಿ- ಪರಂಪರೆಯ ಪರಿಚಯವಿರಲಿ: ಹಾರಿಕಾ ಮಂಜುನಾಥ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರೂ ಇತಿಹಾಸವನ್ನು ಅರಿಯುವ, ಪರಂಪರೆಯನ್ನು ತಿಳಿಯುವ ಮೂಲಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಿದೆ ಎಂದು ಹಾರಿಕಾ ಮಂಜುನಾಥ ತಿಳಿಸಿದರು.

ಕುಮಟಾ: ಸಾವಿರಾರು ವರ್ಷಗಳ ಕಾಲ ಪರಕೀಯರ ದಾಳಿ ನಡೆದರೂ ಭಾರತ ಇಂದಿಗೂ ಭಾರತವಾಗಿಯೇ ಉಳಿದಿದೆ. ನಮ್ಮ ರಕ್ತದಲ್ಲಿ ಹರಿಯುತ್ತಿರುವ ಸಂಸ್ಕೃತಿ- ಪರಂಪರೆಯ ಸಾಮರ್ಥ್ಯದ ಪರಿಚಯವನ್ನು ಪ್ರತಿಯೊಬ್ಬರೂ ತಿಳಿಯಬೇಕಿದೆ ಎಂದು ಪ್ರಸಿದ್ಧ ವಾಗ್ಮಿ ಹಾರಿಕಾ ಮಂಜುನಾಥ ಬೆಂಗಳೂರು ತಿಳಿಸಿದರು.

ಪಟ್ಟಣದ ಹವ್ಯಕ ಸಭಾಭವನದಲ್ಲಿ ಯುಗಾದಿ ಉತ್ಸವ ಸಮಿತಿಯಿಂದ ಸೋಮವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿ ಕುರಿತು ಮಾತನಾಡಿದರು.

ಸಂಸ್ಕೃತಿಯ ಉಳಿವೇ ಸನಾತನ ಧರ್ಮದ ಗುರಿ. ವಿಶ್ವದಲ್ಲಿ ಎಷ್ಟೋ ಸಂಸ್ಕೃತಿಗಳು ನಾಮಾವಶೇಷವಾಗಿದೆ. ಆದರೆ ಸನಾತನ ಹಿಂದು ಸಂಸ್ಕೃತಿ ಮಾತ್ರ ಯಾವತ್ತೂ ಉಳಿದು ಬೆಳೆದಿದೆ. ೧೭ ಬಾರಿ ಧ್ವಂಸವಾದರೂ ೧೮ ಬಾರಿಗೆ ಮತ್ತೆ ತಲೆ ಎತ್ತಿನಿಂತ ಸೋಮನಾಥ ಮಂದಿರ, ೫೦೦ ವರ್ಷಗಳ ಹೋರಾಟದ ಬಳಿಕ ರಾಷ್ಟ್ರ ಮಂದಿರವಾಗಿ ತಲೆ ಎತ್ತಿದ ಅಯೋಧ್ಯಾ ಶ್ರೀರಾಮಮಂದಿರ ಮುಂತಾದವು ಜ್ವಲಂತ ಸಾಕ್ಷಿಯಾಗಿದೆ ಎಂದರು.ನಾವಿಂದು ಬದಲಾದ ಕಾಲಘಟ್ಟದಲ್ಲಿ ಸಂಸ್ಕೃತಿಯ ಜಾಗೃತಿಯೆಡೆಗೆ ಸಾಗುತ್ತಿದ್ದೇವೆ. ನಮ್ಮ ಹೊಸ ವರುಷ ಯುಗಾದಿಯೆಂಬ ಪ್ರಜ್ಞೆ ಬೆಳೆಯುತ್ತಿದೆ. ಕ್ಷಾತ್ರ ತೇಜಸ್ಸು ಮತ್ತೆ ಬೆಳಗುತ್ತಿದೆ. ಇದನ್ನು ಭಾರತೀಯತೆಯ ಪುನರುತ್ಥಾನದ ಕಾಲವಾಗಿ ಪರಿಗಣಿಸಬಹುದಾಗಿದೆ. ಪ್ರತಿಯೊಬ್ಬರೂ ಇತಿಹಾಸವನ್ನು ಅರಿಯುವ, ಪರಂಪರೆಯನ್ನು ತಿಳಿಯುವ ಮೂಲಕ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯುಗಾದಿ ಉತ್ಸವ ಸಮಿತಿಯ ಸಂಚಾಲಕ ಮುರಲೀಧರ ಪ್ರಭು ಮಾತನಾಡಿ, ಯುವಜನತೆಗೆ ಸಂಸ್ಕೃತಿಯ ಪರಿಚಯ ಮಾಡುವ ಉದ್ದೇಶದಿಂದ ೧೫ ವರ್ಷಗಳ ಹಿಂದೆ ಆರಂಭಿಸಿದ ಯುಗಾದಿ ಉತ್ಸವ ಇಂದು ಮನೆಮನೆಯಲ್ಲಿ ನಮ್ಮ ಹೊಸ ವರ್ಷದ ಹಿರಿಮೆಯನ್ನು ದಾಖಲಿಸುವಲ್ಲಿ ಸಫಲವಾಗಿದೆ. ಕ್ಯಾಲೆಂಡರ್‌ಗಳಿಂದ ವಿಭಿನ್ನವಾಗಿ ಹೊಸವರ್ಷವಾಗಿ ಯುಗಾದಿಯನ್ನು ಜನ ಪರಿಗಣಿಸುತ್ತಿದ್ದಾರೆ. ಕುಮಟಾದ ೩೫ ಸಮುದಾಯಗಳು ಒಂದಾಗಿ ನಾವೆಲ್ಲ ಹಿಂದು- ಒಂದು ಎಂಬ ಭಾವನೆಯಿಂದ ಯುಗಾದಿ ಉತ್ಸವ ಆಚರಿಸುತ್ತಿದ್ದಾರೆ. ಇದು ಸಾರ್ಥಕತೆ ತಂದಿದೆ ಎಂದರು.

ಕು. ನಿಶಾ ಸಂದೀಪ ಗಣೇಶ ಸ್ತುತಿ ಪ್ರಸ್ತುತಪಡಿಸಿದಳು. ಖಜಾಂಚಿ ಜಿ.ಎಸ್. ಹೆಗಡೆ ವಂದಿಸಿದರು. ಎಂ.ಟಿ. ಗೌಡ, ಎಸ್.ಜಿ. ನಾಯ್ಕ, ಆನಂದು ವೈ. ನಾಯ್ಕ, ಎಸ್.ವಿ. ಹೆಗಡೆ ಭದ್ರನ್, ನವ್ಯ ಹೆಬ್ಬಾರ ಇತರರು ಇದ್ದರು.