ಸಾರಾಂಶ
ಬಳ್ಳಾರಿ: ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದಾಗ ಮಾತ್ರ ಸಮಾಜದಲ್ಲಿ ಸಾಧನೆಯ ಶಿಖರವೇರಲು ಸಾಧ್ಯ ಎಂದು ಎಸ್ಪಿ ಡಾ.ಶೋಭಾರಾಣಿ ಹೇಳಿದರು.
ರೀಡ್ಸ್ ಸಂಸ್ಥೆ, ಮಕ್ಕಳ ವಿಶೇಷ ಪೊಲೀಸ್ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅವರ ಸಂಯುಕ್ತಾಶ್ರಯದಲ್ಲಿ ನಗರದ ಬಿಡಿಎಎ ಸಭಾಗಂಣದಲ್ಲಿ ಏರ್ಪಡಿಸಿದ್ದ ಬಾಲ್ಯ ವಿವಾಹ ನಿಷೇಧ, ಲಿಂಗ ತಾರತಮ್ಯ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ಹದಿಹರೆಯದ ಹೆಣ್ಣುಮಕ್ಕಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಆರ್‌ಟಿಇ-2009 ಕಾಯ್ದೆ ಪ್ರಕಾರ ಶಿಕ್ಷಣ ಆಯ್ಕೆಯಲ್ಲ; ಅದು ನಮ್ಮ ಹಕ್ಕು. ಪ್ರತಿಯೊಬ್ಬ ಮಹಿಳೆಯೂ ಶಿಕ್ಷಣ ಪಡೆದು ಆರ್ಥಿಕ, ಸಾಮಾಜಿಕವಾಗಿ ಸಬಲೀಕರಣವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಯೌವನ ಸಮಯದಲ್ಲಿ ಹೆಣ್ಣು ಮಕ್ಕಳು ಯಾವುದೇ ತರಹದ ಆಕರ್ಷಣೆಗೆ ಒಳಗಾಗಿ ತಪ್ಪು ಹಾದಿ ಹಿಡಿಯದೇ ಜೀವನದ ತಾತ್ಪರ್ಯ ಅರಿತುಕೊಂಡು ಮನೆಗೆ-ಊರಿಗೆ, ಮುಖ್ಯವಾಗಿ ಪೋಷಕರಿಗೆ ಕೀರ್ತಿ ತರುವ ಹಾಗೆ ಉತ್ತಮ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಾಲ್ಯ ವಿವಾಹ, ಲಿಂಗ ತಾರತಮ್ಯ, ಮಕ್ಕಳ ಮೇಲಿನ ದೌರ್ಜನ್ಯಗಳನ್ನು ನಿರ್ಮೂಲನೆ ಮಾಡಲು ಶಿಕ್ಷಣವು ಮಾರ್ಗವಾಗಿದ್ದು, ಉತ್ತಮ ವಿದ್ಯಾಭ್ಯಾಸದಿಂದ ಮಾತ್ರ ಸಾಧ್ಯ ಎಂದರು.ಮಕ್ಕಳ ರಕ್ಷಣೆಗಾಗಿ ಪ್ರತಿ ಜಿಲ್ಲೆಯಲ್ಲಿಯೂ ಡಿವೈಎಸ್‌ಪಿ, ಪಿಎಸ್‌ಐ, ಮಹಿಳಾ ಪೊಲೀಸ್ ಪೇದೆ ಒಳಗೊಂಡಂತೆ ವಿಶೇಷ ಮಕ್ಕಳ ಪೊಲೀಸ್ ಘಟಕವಿದ್ದು, ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಕಂಡುಬಂದಲ್ಲಿ ಮಾಹಿತಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣ ಹೆಚ್ಚಾಗುತ್ತಿದ್ದು, ಬಾಲ್ಯ ವಿವಾಹವು ಕಾನೂನು ಬಾಹಿರವಾಗಿದೆ. ಈ ಕುರಿತು ತಮ್ಮ ಮನೆ-ಕುಟುಂಬಗಳಲ್ಲಿ ಮನವರಿಕೆ ಮಾಡಬೇಕು ಎಂದರು.ಮಕ್ಕಳ ಮೇಲೆ ದೌರ್ಜನ್ಯ, ಬಾಲ್ಯವಿವಾಹ ಹಾಗೂ ಇತರೆ ಸಮಸ್ಯೆ ಇದ್ದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098, ಮಹಿಳಾ ಸಹಾಯವಾಣಿ ಸಂಖ್ಯೆ 181 ಹಾಗೂ ತುರ್ತು ಸಹಾಯವಾಣಿ ಸಂಖ್ಯೆ 112 ಗೆ ಕರೆಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ಎಲ್ಲಾ ರಂಗಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಎಲ್ಲ ರಂಗಗಳಲ್ಲಿ ಹೆಚ್ಚು ಸ್ಥಾನಮಾನ ಹೊಂದುತ್ತಿದ್ದಾರೆ. ಹಾಗಾಗಿ ಸಾಧನೆ ಮಾಡುವ ಹಂಬಲ ಎಲ್ಲರಲ್ಲೂ ಮೂಡಬೇಕು ಎಂದು ಹೇಳಿದರು.ಪ್ರಸ್ತುತದಲ್ಲಿ ಪ್ರೇಮ-ವಿವಾಹ ಪ್ರಕರಣಗಳಿಂದ ಹದಿ-ಹರೆಯದವರ ಜೀವನ ಹಾಳಾಗುತ್ತಿದೆ. ಹಾಗಾಗಿ ಹೆಣ್ಣುಮಕ್ಕಳು ಜಾಗೃತರಾಗಬೇಕು. ಶಿಕ್ಷಣದಿಂದ ನಿರ್ದಿಷ್ಠ ಗುರಿ ಹೊಂದಿ, ಸಮಾಜದಲ್ಲಿ ಉನ್ನತ ಸ್ಥಾನ-ಮಾನ ಹೊಂದಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ವಕೀಲರಾದ ಶಿವಲೀಲಾ, ನಿವೃತ್ತ ತಾಲೂಕು ವೈದ್ಯಾಧಿಕಾರಿ ಡಾ.ಮೋಹನ ಕುಮಾರಿ, ಕೌಲ್‌ಬಜಾರ್ ಪೊಲೀಸ್ ಠಾಣೆಯ ಸಿಪಿಐ ಸುಭಾಷ್ ಚಂದ್ರ, ಗಾಂಧಿನಗರ ಪೊಲೀಸ್ ಠಾಣೆಯ ಸಿಪಿಐ ಸಿದ್ದರಾಮೇಶ್ವರ ಗಡೇದ, ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಸಿಪಿಐ ಅಯ್ಯನಗೌಡ ಪಾಟೀಲ್ ಅವರು ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.ಎಎಸ್ಪಿ ನವೀನ ಕುಮಾರ್, ಡಿವೈಎಸ್‌ಪಿ, ಮಕ್ಕಳ ಕಲ್ಯಾಣಾಧಿಕಾರಿ ಚಂದ್ರಕಾಂತ ನಂದಾ ರೆಡ್ಡಿ, ರೈಲ್ವೇ ಪೊಲೀಸ್ ಅಧಿಕಾರಿ ವಿಜಯಲಕ್ಷ್ಮಿ , ಜಿಲ್ಲಾಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಳೆ ನಾಗಪ್ಪ, ರೀಡ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ತಿಪ್ಪೇಶಪ್ಪ, ರೀಡ್ಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕಿ ಕೆ.ಸೀತಾಮಹಾಲಕ್ಷ್ಮಿ, ಶಿಲ್ಪಾ ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು, ಯುವಕ-ಯುವತಿಯರು ಮತ್ತು ಸ್ವ-ಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು.
ಕಾರ್ಯಕ್ರಮ ಮುನ್ನ ಜರುಗಿದ ಬಾಲ್ಯ ವಿವಾಹ ನಿಷೇಧ, ಲಿಂಗ ತಾರತಮ್ಯ, ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತ ಜಾಗೃತಿ ಜಾಥಾಕ್ಕೆ ಎಸ್ಪಿ ಡಾ.ಶೋಭರಾಣಿ ಚಾಲನೆ ನೀಡಿದರು.ಜಾಥಾದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.