ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ನಗರ ಮತಕ್ಷೇತ್ರ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆ ಮತ್ತು ಮನೆಗಳಿಗೆ ನೀರು ನುಗ್ಗಿ ಹಾನಿಯಾದ ಪ್ರದೇಶಗಳಿಗೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಹಾಗೂ ನಗರ ಶಾಸಕರ ಪುತ್ರ ರಾಮನಗೌಡ ಪಾಟೀಲ ಯತ್ನಾಳ ಬುಧವಾರ ಭೇಟಿ ನೀಡಿ, ಸಾರ್ವಜನಿಕರಿಂದ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಲ್ಪಿಸುವ ಭರವಸೆ ನೀಡಿದರು.ವಾರ್ಡ್ ನಂ.6 ರಲ್ಲಿ ಬರುವ ಕೆ.ಸಿ.ನಗರ ಹಾಗೂ ಬ್ಯಾಂಕರ್ಸ್ ಕಾಲೋನಿಗೆ ಭೇಟಿ ನೀಡಿ ಪರಿಶೀಲಿಸಿದ ಅವರಿಗೆ, ಕಾಲೋನಿಯಲ್ಲಿ ಹಳೆಯ ಚರಂಡಿ ಇರುವುದರಿಂದ ನೀರು ಸರಾಗವಾಗಿ ಹೋಗದೆ ತೊಂದರೆ ಉಂಟಾಗುತ್ತಿದ್ದು, ಹೊಸ ಚರಂಡಿ ನಿರ್ಮಿಸಬೇಕು, ಉದ್ಯಾನ ಅಭಿವೃದ್ಧಿ ಪಡಿಸಿ ವಾಕಿಂಗ್ ಟ್ರ್ಯಾಕ್ ನಿರ್ಮಿಸಬೇಕು ಹಾಗೂ ಹಾಳಾದ ಬೀದಿ ದೀಪಗಳ ಅಳವಡಿಕೆ ಮಾಡಲು ಅಲ್ಲಿನ ನಿವಾಸಿಗಳು ಮನವಿ ಮಾಡಿಕೊಂಡರು.ನಂತರ ವಾರ್ಡ್ 29ರ ರಾಮನಗರ, ರಾಜಾಜಿನಗರಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮನೆಗಳಲ್ಲಿ ಮಳೆ ನೀರು ನುಗ್ಗಿ ಹಾನಿಯಾದ ಕುರಿತಂತೆ ಮಾಹಿತಿ ಪಡೆದುಕೊಂಡರು. ಈ ವೇಳೆ ಅಲ್ಲಿನ ನಿವಾಸಿಗಳು ಚರಂಡಿ ಸಮಸ್ಯೆಯಿಂದ ಮಳೆ ಬಂದಾಗ ತೊಂದರೆ ಆಗುತ್ತಿದ್ದು, ಸರಿಪಡಿಸಬೇಕು ಎಂದು ಮನವಿ ಮಾಡಿಕೊಂಡರು.ಸಾರ್ವಜನಿಕರ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿ, ನಗರ ಶಾಸಕರಾದ ನಮ್ಮ ತಂದೆಯವರ ಗಮನಕ್ಕೆ ತಂದು, ಆದಷ್ಟು ಶೀಘ್ರವಾಗಿ ತಮ್ಮ ಸಮಸ್ಯೆ ಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.ಈ ವೇಳೆ ಮಹಾನಗರ ಪಾಲಿಕೆ ಸದಸ್ಯರಾದ ಮಳುಗೌಡ ಪಾಟೀಲ, ಪ್ರೇಮಾನಂದ ಬಿರಾದಾರ, ಮುಖಂಡ ಗಿರೀಶ ಬಿರಾದಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.