ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮುಚ್ಚಿ ಹೋಗಿರುವ ನಾಲೆಯಲ್ಲಿ ಹೂಳು ತೆಗೆಸಿ ರೈತರ ಜಮೀನುಗಳಿಗೆ ಸಮರ್ಪಕ ನೀರು ಹರಿಸುವಂತೆ ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಎಚ್.ಎಲ್.ಬಿ.ಸಿ ನಂ. 13 ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಆಗಮಿಸಿದ ರೈತರು, ಸುಮಾರು 2 ಗಂಟೆಗಳ ಕಾಲ ಕಚೇರಿಗೆ ಬೀಗ ಹಾಕಿ ಬಾಗಿಲಿನಲ್ಲಿ ಕುಳಿತು ನೀರಾವರಿ ಇಲಾಖೆ ಕಾರ್ಯವೈಖರಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಯಾವುದೇ ಇಂಜಿನಿಯರ್ ಗಳು ಇರಲಿಲ್ಲ. ಕಚೇರಿ ಬಾಗಿಲು ಬಂದ್ ಆಗಿತ್ತು. ಸಮಸ್ಯೆಗಳನ್ನು ಕೇಳುವವರಿಲ್ಲದೆ ನೀರಾವರಿ ಇಲಾಖೆ ಕಚೇರಿ ಅನಾಥವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಾಲೂಕು ರೈತಸಂಘದ ಅಧ್ಯಕ್ಷ ಪುಟ್ಟೇಗೌಡ ಮಾತನಾಡಿ, ಹೇಮಾವತಿ ಜಲಾಶಯದ ಸಾಹುಕಾರ್ ಚನ್ನಯ್ಯ ನಾಲಾ ವ್ಯಾಪ್ತಿಗೆ ಸೇರಿದ 54 ನೇ ವಿತರಣಾ ನಾಲೆ ಸಂಪೂರ್ಣ ಮುಚ್ಚಿ ಹೋಗಿದೆ. ಇದರಿಂದ ಗಾಂಧಿ ನಗರದಿಂದ ಕೃಷ್ಣಾಪುರ, ಲಿಂಗಾಪುರ ಮತ್ತು ಚೌಡೇನಹಳ್ಳಿ ಭಾಗದ ನೂರಾರು ಎಕರೆ ಪ್ರದೇಶದ ರೈತರು ಹೇಮೆಯ ನೀರಿನಿಂದ ವಂಚಿತರಾಗಿದ್ದಾರೆ ಎಂದು ಹೇಳಿದರು.
ನಾಲೆಯಲ್ಲಿ ನೀರು ಹರಿಯದೇ ರೈತರು ಬೆಳೆದಿರುವ ಅಪಾರ ಪ್ರಮಾಣದ ತೆಂಗು, ಅಡಿಕೆ, ಕಬ್ಬು ಮುಂತಾದ ಬೆಳೆಗಳು ಒಣಗುತ್ತಿವೆ. ವಿತರಣಾ ನಾಲೆಯಲ್ಲಿ ಗಿಡ- ಗಂಟೆಗಳು ಬೆಳೆದು ಮುಚ್ಚಿಹೋಗಿದ್ದು, ನೀರು ಹರಿಸಿದರೂ ಅದು ಕಾಲುವೆ ಮೂಲಕ ರೈತರ ಹೊಲಗದ್ದೆಗಳಿಗೆ ತಲುಪುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.ನಾಲೆ ದುರಸ್ತಿಗೊಳಿಸಿ ನೀರು ಕೊಡುವಂತೆ ಹತ್ತು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ತಾಲೂಕಿನ ಬೂಕನಕೆರೆಯಲ್ಲಿ ಜಿಲ್ಲಾಧಿಕಾರಿಗಳು ನಡೆಸಿದ ಜನಸ್ಪಂದನಾ ಸಭೆಯಲ್ಲಿಯೂ ನಾಲೆ ಸಮಸ್ಯೆ ಪ್ರಸ್ತಾಪಿಸಿದ್ದರು. ಈ ಬಗ್ಗೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ ನೀರಾವರಿ ಇಲಾಖೆ ಜಿಲ್ಲಾಧಿಕಾರಿಗಳ ಆದೇಶವನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ ಎಂದು ದೂರಿದರು.
ಕೆಲಸ ಮಾಡದ ಇಂಜಿನಿಯರುಗಳ ಅವಶ್ಯಕತೆ ನಮಗಿಲ್ಲ. ನಾಲೆ ದುರಸ್ತಿಗೊಳಿಸಿ ನೀರು ಹರಿಸದಿದ್ದರೆ ಇಲಾಖೆ ಎದುರು ಅನಿರ್ಧಿಷ್ಟ ಕಾಲ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕೃಷ್ಣಾಪುರ ರಾಜಣ್ಣ, ರಾಮಯ್ಯ, ಲಿಂಗಾಪುರ ರೇವಣ್ಣ, ಚೌಡೇನಹಳ್ಳಿ ಕೃಷ್ಣೇಗೌಡ ಸೇರಿದಂತೆ ಹಲವರಿದ್ದರು.