ಮಹದೇವಪುರ ಮತಗಳವು ತನಿಖೆ ನಡೆಸಲಿ : ರಾಹುಲ್‌

| N/A | Published : Aug 09 2025, 12:00 AM IST / Updated: Aug 09 2025, 11:01 AM IST

ಸಾರಾಂಶ

 ಮತಗಳ್ಳತನ ನಡೆದ ರೀತಿಯನ್ನು ಸಾಕ್ಷ್ಯ ಸಮೇತ ಸವಿವರವಾಗಿ ಬಿಚ್ಚಿಟ್ಟಿರುವ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಈ ಕ್ರಿಮಿನಲ್‌ ಅಪರಾಧದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸುವಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

  ಬೆಂಗಳೂರು :  ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದ ರೀತಿಯನ್ನು ಸಾಕ್ಷ್ಯ ಸಮೇತ ಸವಿವರವಾಗಿ ಬಿಚ್ಚಿಟ್ಟಿರುವ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಈ ಕ್ರಿಮಿನಲ್‌ ಅಪರಾಧದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸುವಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ಮತಗಳ್ಳತನ ವಿರುದ್ಧ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿ, ಈ ಹಿಂದೆಯೂ ಬಿಜೆಪಿ ಸರ್ಕಾರವಿದ್ದಾಗ ಕರ್ನಾಟಕದಲ್ಲಿ ಮತಗಳ್ಳತನ ನಡೆದಿತ್ತು. ಇದೀಗ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆಸಿದ್ದು, ಸಾಕ್ಷ್ಯಾಧಾರ ಸಮೇತ ಬಹಿರಂಗಗೊಂಡಿದೆ. ಹೀಗಾಗಿ ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು ಎಂದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿನ 1 ಲಕ್ಷಕ್ಕೂ ಹೆಚ್ಚಿನ ಮತಗಳನ್ನು ಕಳ್ಳತನ ಮಾಡಿದ ಪರಿಣಾಮ ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸುವಂತಾಗಿದೆ. ಬಿಜೆಪಿ ಮತ್ತು ಚುನಾವಣಾ ಆಯೋಗ ಜಂಟಿಯಾಗಿ ನಡೆಸಿದ ಅಕ್ರಮವನ್ನು ನಾವು ಬಹಿರಂಗಪಡಿಸಿದ್ದೇವೆ ಎಂದರು.

16ರ ನಿರೀಕ್ಷೆಯಲ್ಲಿದೆವು, 9ರಲ್ಲಿ ಗೆದ್ದೆವು:

ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಪೈಕಿ 16ರಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ವಿಶ್ವಾಸವಿತ್ತು. ಆದರೆ, ಬಿಜೆಪಿ ಮತ್ತು ಚುನಾವಣಾ ಆಯೋಗದ ಅಕ್ರಮದಿಂದಾಗಿ 9ರಲ್ಲಿ ಗೆಲ್ಲುವಂತಾಯಿತು. ಅದರಲ್ಲೂ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಆರಂಭದಲ್ಲಿ ಭಾರೀ ಮುನ್ನಡೆಯಲಿದ್ದ ನಮ್ಮ ಅಭ್ಯರ್ಥಿ ಅಂತಿಮವಾಗಿ ಸೋಲನ್ನನುಭವಿಸಿದರು. ಅದರ ಬಗ್ಗೆ ಅನುಮಾನಗೊಂಡು ಪರಿಶೀಲಿಸಿದಾಗ ನಕಲಿ ಮತದಾರರಿರುವುದು ಪತ್ತೆಯಾಗಿದೆ ಎಂದು ರಾಹುಲ್‌ ಗಾಂಧಿ ತಿಳಿಸಿದರು.

ಅಫಿಡವಿಟ್‌ ನೀಡಲ್ಲ: ಚುನಾವಣಾ ಅಕ್ರಮ ಬಯಲಿಗೆಳೆದಿದ್ದಕ್ಕೆ ಚುನಾವಣಾ ಆಯೋಗ ನನ್ನಿಂದ ಅಫಿಡವಿಟ್‌ ಕೇಳುತ್ತಿದೆ ಮತ್ತು ಪ್ರತಿಜ್ಞೆ ಮಾಡುವಂತೆ ಕೇಳುತ್ತಿದೆ. ಆದರೆ, ನಾನು ಸಂವಿಧಾನದ ಮೇಲೆ ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದವನು. ನಾನು ಹೇಳುವುದೆಲ್ಲವೂ ಸತ್ಯ. ನಾವು ಅನುಮಾನ ವ್ಯಕ್ತಪಡಿಸಿದ್ದೇವೆ, ಅದರ ಹಿಂದಿನ ಸತ್ಯಾಸತ್ಯತೆಯನ್ನು ಜನರ ಮುಂದಿಡುವುದು ಚುನಾವಣಾ ಆಯೋಗದ ಕೆಲಸ ಎಂದು ರಾಹುಲ್‌ ಗಾಂಧಿ ತಿಳಿಸಿದರು.

ಅಲ್ಲದೆ ಜನ ಪ್ರಶ್ನೆ ಕೇಳುತ್ತಾರೆ ಎಂಬ ಕಾರಣಕ್ಕೆ ಬಿಹಾರ, ರಾಜಸ್ಥಾನ ಸೇರಿ ಇನ್ನಿತರ ರಾಜ್ಯಗಳ ಚುನಾವಣಾ ಆಯೋಗದ ವೆಬ್‌ಸೈಟ್‌ ಅನ್ನೇ ಸ್ಥಗಿತಗೊಳಿಸಲಾಗಿದೆ. ಆ ಮೂಲಕ ಆಯೋಗ ಮತ್ತೊಂದು ನಾಟಕ ಆರಂಭಿಸಲಾಗಿದೆ ಎಂದು ರಾಹುಲ್‌ ಆರೋಪಿಸಿದರು.

ಬಿಜೆಪಿ ಮತ್ತು ಚುನಾವಣಾ ಆಯೋಗ ಸಂವಿಧಾನದ ಅಡಿಪಾಯವನ್ನೇ ಬುಡಮೇಲು ಮಾಡುತ್ತಿವೆ. ಒಬ್ಬರಿಗೆ ಒಂದೇ ಮತ ಎಂಬುದು ಸಂವಿಧಾನದಲ್ಲಿರುವ ಅಂಶ. ಆ ಮತದ ಹಕ್ಕನ್ನೇ ಕಸಿಯಲು ಬಿಜೆಪಿ-ಚುನಾವಣಾ ಆಯೋಗ ಮುಂದಾಗಿವೆ. ಈ ಅಕ್ರಮವನ್ನು ಬಯಲಿಗೆಳೆಯಲು ಸಮಯ ಬೇಕಾಗುತ್ತದೆ. ಆದರೂ ನಾವು ಅದನ್ನು ಜನರಿಗೆ ತಿಳಿಸುತ್ತೇವೆ. ಇನ್ನು, ಸಂವಿಧಾನದ ಮೇಲೆ ಯಾರೇ ದಾಳಿ ಮಾಡಿದರೂ ಅವರ ಮೇಲೆ ನಾವು ದಾಳಿ ಮಾಡುತ್ತೇವೆ ಎಂಬುದನ್ನು ಎಲ್ಲರೂ ಅರಿಯಬೇಕು. ಕಾಂಗ್ರೆಸ್‌ ಕಾರ್ಯಕರ್ತರ ಡಿಎನ್‌ಎನಲ್ಲಿ ಸಂವಿಧಾನ ಇದೆ ಎಂಬುದನ್ನು ದೇಶಕ್ಕೇ ತಿಳಿಸಬೇಕಿದೆ ಎಂದರು.

25 ಸೀಟಿನ ಪ್ರಧಾನಿ: ಪ್ರಧಾನಿ ಮೋದಿ ಅವರು ಸದ್ಯ 25 ಸೀಟುಗಳನ್ನೇ ಆಧಾರವಾಗಿಟ್ಟುಕೊಂಡು ಅಧಿಕಾರದಲ್ಲಿದ್ದಾರೆ. ಆ 25 ಕ್ಷೇತ್ರಗಳಲ್ಲಾಗಿರುವ ಕಳ್ಳತನವನ್ನೂ ಪತ್ತೆ ಮಾಡಿ, ಬಹಿರಂಗಪಡಿಸುತ್ತೇವೆ. ಅವರ ಕಳ್ಳತನವನ್ನು ಮತ್ತಷ್ಟು ತಿಳಿಸುತ್ತೇವೆ. ಇನ್ನು, ಚುನಾವಣಾ ಆಯೋಗ ನಾವು ಕೇಳುತ್ತಿರುವ ದಾಖಲೆಗಳನ್ನು ನೀಡುವಂತೆ ಕೋರಿದರೂ ಕೊಡುತ್ತಿಲ್ಲ. ಆ ದಾಖಲೆಗಳನ್ನು ಬಚ್ಚಿಡಲಾಗದು ಮತ್ತು ಅಕ್ರಮ ಮಾಡಿದವರು ಬಚ್ಚಿಟ್ಟುಕೊಳ್ಳಲಾಗದು. ವಿರೋಧ ಪಕ್ಷಗಳನ್ನು ಅವರು ಎದುರಿಸಬೇಕಾಗುತ್ತದೆ. ಇನ್ನು, ಈ ರೀತಿಯ ಕ್ರಿಮಿನಲ್‌ ಅಪರಾಧ ಎಸಗಿದ ಅಧಿಕಾರಿಗಳನ್ನೂ ಪತ್ತೆ ಮಾಡುತ್ತೇವೆ ಎಂದು ರಾಹುಲ್‌ ಗಾಂಧಿ ಗುಡುಗಿದರು.

ಚುನಾವಣಾ ಆಯೋಗಕ್ಕೆ ರಾಹುಲ್‌ ಗಾಂಧಿ ಐದು ಪ್ರಶ್ನೆ:

1. ಡಿಜಿಟಲ್‌ ರೀಡೆಬಲ್‌ ಫಾರ್ಮ್ಯಾಟ್‌ನಲ್ಲಿ ಮತದಾರರ ಪಟ್ಟಿ ನೀಡಲು ಹಿಂದೇಟು ಹಾಕುತ್ತಿರುವುದೇಕೆ?

2. ಮತದಾನಕ್ಕೆ ಸಂಬಂಧಿಸಿದ ವೀಡಿಯೋ ಸಾಕ್ಷ್ಯಗಳನ್ನು ನಾಶ ಮಾಡಿದ್ದೇಕೆ?

3. ಚುನಾವಣಾ ಆಯೋಗ ಮತದಾರರ ಪಟ್ಟಿಯಲ್ಲಿ ಭಾರೀ ಅಕ್ರಮ ಎಸಗಲು ಕಾರಣವೇನು?

4. ಮತಗಳ್ಳತನದ ಪ್ರಶ್ನೆ ಕೇಳುವ ವಿಪಕ್ಷಗಳನ್ನು ಬೆದರಿಸುತ್ತಿರುವುದೇಕೆ?

5. ಚುನಾವಾಣಾ ಆಯೋಗ ಬಿಜೆಪಿ ಏಜೆಂಟ್‌ ರೀತಿ ವರ್ತಿಸುತ್ತಿರುವುದೇಕೆ?

ಮತಗಳ್ಳತನದಿಂದ ಮೋದಿ ಪ್ರಧಾನಿ; ಸಿಎಂ:

ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ಮೂಲಕ ಗೆಲುವು ಸಾಧಿಸಿ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಪ್ರತಿಭಟನಾ ಸಮಾವೇಶದಲ್ಲಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಚುನಾವಣಾ ಆಯೋಗ ಬಿಜೆಪಿಯ ಶಾಖಾ ಕಚೇರಿಯಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಜತೆಗೆ ರಾಹುಲ್‌ ಗಾಂಧಿ ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗೆ ಚಳವಳಿ ಆರಂಭಿಸಿದ್ದು, ಅದಕ್ಕೆ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಘೋಷಿಸಿದರು.

ಮತಗಳ್ಳತನ ವಿರುದ್ಧ ಕರ್ನಾಟಕದಿಂದ ಆರಂಭವಾಗಿರುವ ಪ್ರತಿಭಟನಾ ಅಭಿಯಾನ ದೇಶದೆಲ್ಲೆಡೆ ವ್ಯಾಪಿಸಲಿದೆ. ಮತಗಳ್ಳತನದ ಕುರಿತು ರಾಹುಲ್‌ ಗಾಂಧಿ ಅವರು ಸಂಪೂರ್ಣ ಅಧ್ಯಯನ ಮಾಡಿ, ದಾಖಲೆಗಳನ್ನು ಜನರ ಮುಂದಿಟ್ಟಿದ್ದಾರೆ. ಸಂವಿಧಾನ ಕೊಟ್ಟಿರುವ ಮತದಾನದ ಹಕ್ಕನ್ನು ಯಾರೂ ಕಿತ್ತುಕೊಳ್ಳಲಾಗದು. ಅದಕ್ಕೆ ದೇಶದ ಜನ ಅವಕಾಶ ಕೊಡುವುದಿಲ್ಲ. ಆದರೂ, ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿ ಆ ಕೆಲಸಕ್ಕಿಳಿದಿದೆ ಎಂದು ಆರೋಪಿಸಿದರು.ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತಗಳ್ಳತನದ ಮೂಲಕ ಅಧಿಕಾರಕ್ಕೆ ಬಂದಿದೆ. ಅಲ್ಲದೆ, ನರೇಂದ್ರ ಮೋದಿ ಅವರು ಅದರ ಭಾಗವಾಗಿದ್ದು, ಪ್ರಧಾನಿಯಾಗಿದ್ದಾರೆ. ಅವರಿಗೆ ಪ್ರಧಾನಿಯಾಗಿ ಮುಂದುವರಿಯಲು ಯಾವುದೇ ನೈತಿಕತೆಯಿಲ್ಲ. ಈ ಕೂಡಲೇ ಅವರು ರಾಜೀನಾಮೆ ನೀಡಬೇಕು. ಮತ್ತೊಮ್ಮೆ ನ್ಯಾಯಯುತ ಚುನಾವಣೆ ಎದುರಿಸಬೇಕು ಎಂದು ಆಗ್ರಹಿಸಿದರು.

ಮನುವಾದಿಗಳು ಸಂವಿಧಾನದ ಪ್ರಕ್ರಿಯೆಯನ್ನೇ ತಪ್ಪು ದಾರಿಗೆಳೆಯುತ್ತಿದ್ದಾರೆ. ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿರುವ ವಂಚನೆ ಕಾರಣದಿಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲುವಂತಾಗಿದೆ. ಅಲ್ಲದೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ ಕನಿಷ್ಠ 14 ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯಿತ್ತು. ಆದರೆ, ಮತಗಳ್ಳತದಿಂದ ನಾವು ಸೋತಿದ್ದೇವೆ. ಇದು ಈಗ ದಾಖಲೆ ಸಹಿತ ದೃಢಪಟ್ಟಿದೆ ಎಂದರು.

ಪ್ರತಿ ಕ್ಷೇತ್ರದಲ್ಲಿ ಲೀಗಲ್‌ ಬ್ಯಾಂಕ್‌ ಸ್ಥಾಪನೆ; ಡಿಕೆಶಿ:

ಸಂವಿಧಾನ, ಮತ ಹಕ್ಕನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಆ ಮತ ಹಕ್ಕನ್ನು ಉಳಿಸಲು ಮತ್ತು ನಕಲಿ ಮತದಾರರನ್ನು ಪಟ್ಟಿಯಲ್ಲಿ ಸೇರಿಸುವುದನ್ನು ತಡೆಯಲು ಆಸ್ಪತ್ರೆಗಳಲ್ಲಿ ಬ್ಲಡ್‌ ಬ್ಯಾಂಕ್‌ ಇರುವಂತೆ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಲೀಗಲ್‌ ಬ್ಯಾಂಕ್‌ ಮಾಡುತ್ತೇವೆ. ಅದರ ಮೂಲಕ ಸಂವಿಧಾನ ರಕ್ಷಣೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.ಮತಗಳ್ಳತನಕ್ಕೆ 2019ರಲ್ಲಿ ನಾ ಬಲಿ ಆಗಿದ್ದೇನೆ; ಖರ್ಗೆ:ನನ್ನ ಜೀವನದಲ್ಲಿ 12 ಲೋಕಸಭಾ ಚುನಾವಣೆಗಳಲ್ಲಿ ಜಯಗಳಿಸಿದ್ದು, ಒಂದೇ ಒಂದು ಬಾರಿ ಸೋಲುಂಡಿದ್ದೇನೆ. 2019ರಲ್ಲಿ ಎದುರಾದ ಈ ಸೋಲು ಬಿಜೆಪಿ ಹಾಗೂ ಚುನಾವಣಾ ಆಯೋಗ ನಡೆಸಿದ ಮತಗಳ್ಳತನದಿಂದ ಆಗಿದ್ದು ಎಂಬ ಅನುಮಾನ ನನಗಿದೆ.

ಹೀಗಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇರ ಆರೋಪ ಮಾಡಿದ್ದಾರೆ. ಅಲ್ಲದೆ, ಈ ರೀತಿಯ ಮತಗಳ್ಳತನ ನಡೆಸಿ ಕಳ್ಳತನದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಈ ಷಡ್ಯಂತ್ರದ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಡ ನಡೆಸಬೇಕು ಎಂದು ಅವರು ಕರೆ ನೀಡಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಕೆಪಿಸಿಸಿಯಿಂದ ಆಯೋಜಿಸಲಾಗಿದ್ದ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಪ್ರತಿಭಟನಾ ಸಮಾವೇಶದಲ್ಲಿ, ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಹಲವು ಆರೋಪಗಳನ್ನು ಮಾಡಿದರು.ನರೇಂದ್ರ ಮೋದಿ ಅವರು 2024ರಲ್ಲಿ ಕಳ್ಳತನ ಮಾಡಿ ಪ್ರಧಾನಿಯಾಗಿದ್ದಾರೆ. ನರೇಂದ್ರ ಮೋದಿ-ಅಮಿತ್‌ ಶಾ ಚುನಾವಣಾ ಆಯೋಗದ ನೆರವಿನೊಂದಿಗೆ ಚುನಾವಣೆ ಗೆದ್ದಿದ್ದಾರೆ. ಹೀಗಾಗಿ ಕೇಂದ್ರದಲ್ಲಿರುವುದು ಕಳ್ಳತನದ ಸರ್ಕಾರ. ನೈತಿಕ ಬಲವಿಲ್ಲದ ಸರ್ಕಾರ. ಜನ ಬೆಂಬಲವಿಲ್ಲದ ಸರ್ಕಾರ. ಅದನ್ನು ಕೆಳಗಿಸಲೇಬೇಕು. ದೇಶದಲ್ಲಾಗಿರುವ ಮತ್ತಷ್ಟು ಚುನಾವಣಾ ಅಕ್ರಮವನ್ನು ಬಯಲಿಗೆಳೆದು ಜನರಿಂದ ಛೀಮಾರಿ ಹಾಕಿಸಿ, ಸರ್ಕಾರ ಕೆಳಗಿಳಿಯುವಂತೆ ಮಾಡುತ್ತೇವೆ ಎಂದು ಠೇಂಕರಿಸಿದರು.

ಮತಗಳ್ಳತನದಿಂದ ನನಗೆ ಸೋಲು:2019ರಲ್ಲಿ ಕಲಬುರಗಿಯಲ್ಲಿ ನಾನು ಸೋಲಲು ಮತಗಳ್ಳತನವೇ ಕಾರಣ ಎಂದು ನೇರ ಆರೋಪ ಮಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ 13 ಚುನಾವಣೆಗಳನ್ನು ಎದುರಿಸಿದ್ದೇನೆ. ಅದರಲ್ಲಿ 1 ಲೋಕಸಭಾ ಚುನಾವಣೆಯಲ್ಲಿ ಮಾತ್ರ ಸೋಲುಂಡಿದ್ದೇನೆ. ಇದಕ್ಕೆ ಮತಗಳ್ಳತನ ಕಾರಣ ಎಂಬ ಬಲವಾದ ಅನುಮಾನವಿದೆ.

ಕಲಬುರಗಿ ಕ್ಷೇತ್ರ ವ್ಯಾಪ್ತಿಯಲ್ಲೇ 1 ಲಕ್ಷಕ್ಕೂ ಹೆಚ್ಚಿನ ನಕಲಿ ಮತದಾನ ನಡೆದಿದೆ ಎಂಬುದು ನನ್ನ ಗುಮಾನಿ. ಆಗ ನಮಗೆಲ್ಲ ಅದರ ಬಗ್ಗೆ ಸರಿಯಾಗಿ ತಿಳಿಯಲಿಲ್ಲ. ಈಗಿನ ಚುನಾವಣೆಯ ನಂತರ ಮತಗಳ್ಳತನದ ಮಾಹಿತಿ ಬಂದಿದೆ. ಇದನ್ನು ಇಲ್ಲಿಗೆ ಬಿಡದೆ ದೇಶದೆಲ್ಲೆಡೆ ಮತದಾನದ ಹಕ್ಕಿಗೆ ಚ್ಯುತಿ ತಂದಿರುವುದನ್ನು ಬಹಿರಂಗ ಮಾಡುತ್ತೇವೆ ಎಂದು ಹೇಳಿದರು.ಸೋಮವಾರ ಕೇಂದ್ರ ಆಯೋಗಕ್ಕೆ ದೂರು:

ಮತಗಳ್ಳತನ ವಿರುದ್ಧ ಹೋರಾಟದ ಭಾಗವಾಗಿ ಸೋಮವಾರ ಇಂಡಿಯಾ ಮೈತ್ರಿಕೂಟದ ಎಲ್ಲ ಸಂಸದರಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಅದರ ಜತೆಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರನ್ನೂ ನೀಡುತ್ತೇವೆ. ನಮಗೆ ಬೇಕಿರುವ ದಾಖಲೆಗಳನ್ನು ನೀಡುವಂತೆ ಕೋರುತ್ತೇವೆ. 1942ರ ಆ.9ರಂದು ಮಹಾತ್ಮ ಗಾಂಧಿ ಅವರು ಕ್ವಿಟ್‌ ಇಂಡಿಯಾ ಚಳವಳಿ ಆರಂಭಿಸಿದರು. ಅದೇ ರೀತಿ ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ಮಾಡು ಇಲ್ಲವೇ ಮಡಿ ಎಂಬ ಧ್ಯೇಯದೊಂದಿಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

Read more Articles on