ಕಳಪೆ ಪಂಪ್‌ಸಂಟ್‌ ಪಡೆಯಲು ರೈತರ ನಿರಾಕರಣೆ

| Published : Aug 09 2025, 12:00 AM IST

ಸಾರಾಂಶ

ಗಂಗ ಕಲ್ಯಾಣ ಯೋಜನೆಯಡಿ ಕೊರೆಸಿರುವ ಕೊಳವೆಬಾವಿಗಳಿಗೆ ಪರಿಕರಗಳನ್ನು ವಿತರಣೆ ಮಾಡಲು ಬಂದ ಶಾಸಕಿಗೆ ನಾವು ಕಳಪೆ ಗುಣಮಟ್ಟದ ಪರಿಕರಗಳನ್ನು ಪಡೆಯುವುದಿಲ್ಲ, ನಾವು ಬರೆದುಕೊಟ್ಟಿರುವ ಗುಣಮಟ್ಟದ ಪರಿಕರಗಳು ಅಲ್ಲ, ಕೊಳವೆ ಬಾವಿಯ ಒಳಗೆ ಪೈಪ್‌ಗಳು ಇಳಿಸಲು ೧೦ ಸಾವಿರ ನೀಡಬೇಕು, ಕೇಬಲ್ ಸಹ ಕಳಪೆ ಗುಣಮಟ್ಟದ್ದಾಗಿದೆ ಎಂಬುದು ರೈತರ ದೂರು.

ಕನ್ನಡಪ್ರಭ ವಾರ್ತೆ ಕೆಜಿಎಫ್ಗಂಗ ಕಲ್ಯಾಣ ಯೋಜನೆಯಲ್ಲಿ ವಿತರಿಸಲು ತಂದಿದ್ದ ಪಂಪು, ಮೋಟಾರ್, ಪ್ಯಾನಲ್ ಬೋರ್ಡ್, ಕೇಬಲ್ ವೈರು ಸೇರಿದಂತೆ ಪರಿಕರಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಆರೋಪಿಸಿರುವ ರೈತರು, ಅವುಗಳನ್ನು ಪಡೆಯಲು ನಿರಾಕರಿಸಿದ್ದಾರೆ.ಪರಿಶಿಷ್ಟ ಪಂಗಡ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನಿಗಳಿಗೆ ಉಚಿತವಾಗಿ ಕೊಳವೆಬಾವಿ ಸೌಲಭ್ಯ ಒದಗಿಸುವ ಗಂಗ ಕಲ್ಯಾಣ ಯೋಜನೆಯಡಿ ಸಬ್ ಮರ್ಸಿಬಲ್ ಪಂಪ್‌ಸೆಟ್‌ ಪೂರೈಕೆ, ಅಳವಡಿಕೆ ಮತ್ತು ವಿದ್ಯುದ್ದೀಕರಣ, ಅಲ್ಪ ಕಾಲ ಬಾಳಿಕೆ ಬರುವ ಮತ್ತು ಕಡಿಮೆ ಬೆಲೆಯ ಉಪಕರಣ ಅಳವಡಿಸಿರುವ ಪಂಪ್‌ಸೆಟ್‌ಗಳನ್ನು ಪೂರೈಸಲು ಮುಂದಾಗಿದ್ದು ಅಧಿಕಾರಿಗಳಿಗೆ ರೈತರು ತರಾಟೆಗೆ ತೆಗೆದುಕೊಂಡರು.ಕಳಪೆ ಗುಣಮಟ್ಟದ ಉಪಕರಣ ಗುರುವಾರ ಸಂಜೆ ಕೆಜಿಎಫ್ ತಾಲೂಕಿನಲ್ಲಿ ಇ.ಒ ಕಚೇರಿ ಮುಂಬಾಗ ೧೩ ರೈತರಿಗೆ ವಿತರಿಸಲು ತಂದಿದ್ದ ಪಂಪ್, ಮೋಟಾರ್, ಕೇಬಲ್ ವೈರ್, ಪೈಪ್‌ಗಳು, ಪ್ಯಾನಲ್ ಬೋರ್ಡ್ ಸೇರಿದಂತೆ ಎಲ್ಲ ಉಪಕರಣಗಳು ಕಳಪೆ ಗುಣಮಟ್ಟದಿಂದ ಕೂಡಿರುವ ಹಿನ್ನಲೆಯಲ್ಲಿ ರೈತರು ಪಡೆದುಕೊಳ್ಳಲು ನಿರಾಕರಿಸಿದರು.ಕಳೆದ ಆರು ವರ್ಷಗಳಿಂದ ಹಿಂದೆ ಕೆಜಿಎಫ್ ತಾಲೂಕಿನ ರೈತರು ಗಂಗ ಕಲ್ಯಾಣ ಯೋಜನೆಯಡಿ ತಾಲೂಕಿನ ೧೩ ರೈತರು ಅರ್ಜಿಗಳನ್ನು ಸಲ್ಲಿಸಿದ್ದರು. ಇದು ಸಬ್ಸಿಡಿ ಯೋಜನೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಅಲ್ಪಸಂಖ್ಯಾತರು ಮತ್ತು ಸಣ್ಣ ರೈತರಿಗೆ ಕೊಳವೆ ಬಾವಿಗೆ ಪಂಪು ಮತ್ತು ವಿದ್ಯುದ್ದೀಕರಣವನ್ನು ಒದಗಿಸುವ ಮೂಲಕ ಕೃಷಿಗೆ ನೀರೊದಗಿಸುವ ಯೋಜನೆ ಇದಾಗಿದೆ.

ಶಾಸಕರ ಮುಂದೆ ದೂರುಗಂಗ ಕಲ್ಯಾಣ ಯೋಜನೆಯಡಿ ಕೊರೆಸಿರುವ ಕೊಳವೆಬಾವಿಗಳಿಗೆ ಪರಿಕರಗಳನ್ನು ವಿತರಣೆ ಮಾಡಲು ಬಂದ ಶಾಸಕಿಗೆ ನಾವು ಕಳಪೆ ಗುಣಮಟ್ಟದ ಪರಿಕರಗಳನ್ನು ಪಡೆಯುವುದಿಲ್ಲ, ನಾವು ಬರೆದುಕೊಟ್ಟಿರುವ ಗುಣಮಟ್ಟದ ಪರಿಕರಗಳು ಅಲ್ಲ, ಕೊಳವೆ ಬಾವಿಯ ಒಳಗೆ ಪೈಪ್‌ಗಳು ಇಳಿಸಲು ೧೦ ಸಾವಿರ ನೀಡಬೇಕು, ಕೇಬಲ್ ಸಹ ಕಳಪೆ ಗುಣಮಟ್ಟದ್ದಾಗಿದೆ ಎಂದು ರೈತರು ಶಾಸಕರ ಬಳಿ ದೂರಿದರು.

ಶಾಸಕಿ ರೂಪಕಲಾಶಶಿಧರ್ ಮಾತನಾಡಿ, ಅಂಬೇಡ್ಕರ್ ನಿಗಮದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸುತ್ತೆನೆ, ರೈತರು ಪಟ್ಟಿಕೊಟ್ಟಿರುವ ಪ್ರಕಾರ ಗುಣಮಟ್ಟದ ಪರಿಕರಗಳನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ರೈತರಿಗೆ ಶಾಸಕರು ಭರವಸೆ ನೀಡಿದರು.

ನಾಮ್‌ ಕೆ ವಾಸ್ತೆ ಯೋಜನೆ: ಟೀಕೆ

ಜೆಡಿಎಸ್‌ನ ತಾಲೂಕು ಅಧ್ಯಕ್ಷ ಪಿ.ದಯಾನಂದ್ ಮಾತನಾಡಿ, ಕೊಳವೆ ಬಾವಿ ಕೊರೆಯಲು ೨೦೧೯ ರಲ್ಲಿ ಅರ್ಜಿ ಹಾಕಿದ್ದ ರೈತರಿಗೆ ೨೦೨೫ ರಲ್ಲಿ ಪಂಪು ಮೋಟಾರ್ ವಿತರಿಸುತ್ತಾರೆ ಅಂದರೆ ಸರ್ಕಾರಕ್ಕೆ ಪರಿಸಿಷ್ಟರ ಮೇಲೆ ಎಷ್ಟು ಕಾಳಿಜಿ ಇದೆ ಎನ್ನುವುದು ತಿಳಿಯುತ್ತದೆ, ಅದರಲ್ಲೂ ಅವರಿಗೆ ವಿತರಿಸುವ ಕಳಪೆ ಗುಣಮಟ್ಟದ ಪರಿಕರಗಳನ್ನು ನೋಡಿದರೆ ನಾಮ್‌ ಕೆ ವಾಸ್ತೆ ಯೋಜನೆಯಾಗಿದೆ ಎಂದು ಟೀಕಿಸಿದರು.