ಶೌರ್ಯ ಮತ್ತು ಧೈರ್ಯದ ಪ್ರತೀಕವಾದ ಒನಕೆ ಓಬವ್ವಳ ಹೆಸರನ್ನು ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕು ಹಾಗೂ ಅವಳ ಹೆಸರಿನಲ್ಲಿ ಅಧ್ಯಯನ ಪೀಠ ತೆರೆಯಬೇಕು ಎಂದು ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ರಾಣಿಬೆನ್ನೂರು: ಶೌರ್ಯ ಮತ್ತು ಧೈರ್ಯದ ಪ್ರತೀಕವಾದ ಒನಕೆ ಓಬವ್ವಳ ಹೆಸರನ್ನು ರಾಜ್ಯದ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕು ಹಾಗೂ ಅವಳ ಹೆಸರಿನಲ್ಲಿ ಅಧ್ಯಯನ ಪೀಠ ತೆರೆಯಬೇಕು ಎಂದು ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. ನಗರದ ಯರೇಕುಪ್ಪಿ ರಸ್ತೆಯ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಆವರಣದ ಗಣೇಶೋತ್ಸವ ಮಂಟಪದಲ್ಲಿ ಶನಿವಾರ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಒನಕೆ ಓಬವ್ವ ತನ್ನ ರಾಜ್ಯ, ಕೋಟೆ ಉಳಿವಿಗಾಗಿ ತನ್ನ ಜೀವನ ಬಲಿ ನೀಡಿದ್ದಾಳೆ. ನಾವೆಲ್ಲಾ ಬಾಬಾಸಾಹೇಬ ಅಂಬೇಡ್ಕರ್ ಅನುಯಾಯಿಗಳಾಗಿದ್ದು ನಾವು ಸಾಮಾಜಿಕ, ಶೈಕ್ಞಣಿಕ ಹಾಗೂ ರಾಜಕೀಯವಾಗಿ ಬೆಳೆಯಲು ಅವರು ರಚಿಸಿದ ಸಂವಿಧಾನ ಸಹಕಾರಿಯಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಹೆಸರನ್ನು ಎಟಿಎಂ ಆಗಿ ಬಳಸುವ ಬದಲಿಗೆ ಸಮಾಜದ ಅಭಿವೃದ್ಧಿಗೆ ಉಪಯೋಗಿಸಿಕೊಳ್ಳಬೇಕು. ಸಮಾಜದ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ಹೋರಾಟ ಮಾಡಬೇಕು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಕೈಗಾರಿಕೆ ಸ್ಥಾಪಿಸಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಬೇಕು ಎಂದರು.

ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಒನಕೆ ಓಬವ್ವಳ ಧೈರ್ಯವನ್ನು ಇಂದಿನ ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾವೇರಿಯಲ್ಲಿ ಓಬವ್ವ ಉದ್ಯಾನ ನಿರ್ಮಿಸಲಾಗಿದ್ದು ಮುಂದಿನ ದಿನಗಳಲ್ಲಿ ಅದನ್ನು ಉದ್ಘಾಟಿಸಲಾಗುವುದು ಎಂದರು.ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಒನಕೆ ಓಬವ್ವ ಸಮಸ್ತ ಸ್ತ್ರೀ ಕುಲದ ಹೆಮ್ಮೆ. ತನ್ನ ರಾಜ್ಯ, ಗಂಡ, ಮಕ್ಕಳನ್ನು ಉಳಿಸುವ ನಿಟ್ಟಿನಲ್ಲಿ ಓನಕೆ ತೆಗೆದುಕೊಂಡು ವಿರೋಧಿ ಸೈನಿಕರನ್ನು ಹಿಮ್ಮೆಟ್ಟಿಸಿದ ಧೀರ ಮಹಿಳೆ. ಯಾವುದೇ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣಕ್ಕೆ ಒತ್ತು ನೀಡಬೇಕು. ಇಂದಿನ ತಾಂತ್ರಿಕ ಯುಗದಲ್ಲಿ ಮಹಿಳೆಯರಿಗೆ ಒನಕೆ ಅಗತ್ಯವಿಲ್ಲ, ಅವರ ಕೈಗೆ ಪೆನ್ ಕೊಟ್ಟರೆ ಸಾಕು. ಎಲ್ಲರೂ ತಮ್ಮ ಮಕ್ಕಳಿಗೆ ಓದಿಸುವ ಕೆಲಸ ಮಾಡಬೇಕು. ಮಹಿಳೆಯರ ಸಹನೆ, ತಾಳ್ಮೆ ಗಂಡು ಮಕ್ಕಳಲ್ಲಿ ಇರುವುದಿಲ್ಲ, ಪುರುಷ ಪ್ರಧಾನ ಸಮಾಜವನ್ನು ಎದುರಿಸುವ ನಿಟ್ಟಿನಲ್ಲಿ ಒನಕೆ ಓಬವ್ವಳನ್ನು ಸ್ಮರಿಸಿಕೊಳ್ಳಿ. ಮಹಿಳೆಯರಿಗೆ ಸ್ವಾವಲಂಬಿ ಬದುಕು ರೂಪಿಸಲು ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ನೀಡಲಾಗುತ್ತಿದೆ. ಬೇರೆ ದೇಶಗಳಲ್ಲಿ ಮಹಿಳೆಯರನ್ನು ಸಮಾನತೆಯಿಂದ ಕಾಣುತ್ತಿದ್ದಾರೆ ಇದರಿಂದ ಆ ದೇಶಗಳು ಅಭಿವೃದ್ಧಿ ಹೊಂದಿವೆ. ನಮ್ಮದು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ, ಇಲ್ಲಿಯೂ ಕೂಡ ಮಹಿಳೆಯರಿಗೆ ಸಮಾನತೆ ನೀಡಬೇಕು ಎಂದರು.ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವೀರೇಶ ಮೋಟಗಿ, ಜಿಲ್ಲಾ ಅಬಕಾರಿ ನಿವೃತ್ತ ಅಧಿಕಾರಿ ಬಿ.ಡಿ.ಸಾವಕ್ಕನವರ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ, ನಿವೃತ್ತ ವ್ಯವಸ್ಥಾಪಕ ಮಂಜಪ್ಪ ಮಿನಗಲರ, ಕರಬಸಪ್ಪ ಅಲದಕಟ್ಟಿ, ಅರವಿಂದ ಆಲದಕಟ್ಟಿ, ಡಾ. ಬಸವರಾಜ ಡಿ.ಸಿ., ರಾಮಣ್ಣ ನಾಯಕ, ಎಚ್.ಕೆ. ರುದ್ರಪ್ಪ, ಕುಬೇರಪ್ಪ ಅಟವಾಳಗಿ, ಪ್ರೇಮಾ ಅಟವಾಳಗಿ, ದಾವಣಗೆರೆ ಮಹಾಸಭಾ ಅಧ್ಯಕ್ಷ ರುದ್ರಮುನಿ, ನಿತ್ಯಾನಂದ ಕುಂದಪುರ, ಚಿತ್ರದುರ್ಗ ಒನಕೆ ಓಬವ್ವ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಚಲವಾದಿ ತಿಪ್ಪೇಸ್ವಾಮಿ, ಶಿವಕುಮಾರ ಜಾಧವ, ಹನುಮಂತಪ್ಪ ಚೀಳಂಗಿ ಮತ್ತಿತರರಿದ್ದರು. ಇದಕ್ಕೂ ಪೂರ್ವದಲ್ಲಿ ನಗರದ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್ ಬಳಿ ಒನಕೆ ಓಬವ್ವಳ ಭಾವಚಿತ್ರದ ಮೆರವಣಿಗೆಗೆ ಶಾಸಕ ಪ್ರಕಾಶ ಕೋಳಿವಾಡ ಚಾಲನೆ ನೀಡಿದರು.