ಕನ್ನಡಪ್ರಭ ವಾರ್ತೆ, ಬೀರೂರು ಸದನದ ಪ್ರತಿಯೊಂದು ನಿಮಿಷವೂ ರಾಜ್ಯದ ಜನರ ಹಿತಾಸಕ್ತಿ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಬಳಕೆಯಾಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಹೇಳಿದರು.ಸೋಮವಾರ ಬೀರೂರಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇತ್ತೀಚೆಗೆ ನಡೆದ ವಿಶೇಷ ಅಧಿವೇಶನ ದಲ್ಲಿ ಕಸ್ತೂರಿ ರಂಗನ್ ವರದಿ, ರಾಜ್ಯದ ಬರ ಪರಿಸ್ಥಿತಿ ಹಾಗೂ ರೈತರ ಸಮಸ್ಯೆಗಳ ಕುರಿತು ಸುಮಾರು 18.5 ಗಂಟೆಗಳ ಕಾಲ ಅರ್ಥಪೂರ್ಣ ಚರ್ಚೆ ನಡೆದಿದೆ. ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಮುಖ್ಯಮಂತ್ರಿ ನೇತೃತ್ವದಲ್ಲಿ ಸರ್ವಪಕ್ಷ ನಿಯೋಗ ದೆಹಲಿಗೆ ತೆರಳಿ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ನಿರ್ಧರಿಸಲಾಗಿದೆ ಎಂದರು.ಸದನದಲ್ಲಿ ಸಮಯದ ಅವಕಾಶ ಕಡಿಮೆ ಇರುವುದರಿಂದ ಸದಸ್ಯರು ಅದನ್ನು ಸದುಪಯೋಗಪಡಿಸಿಕೊಂಡು ಜನರಿಗೆ ಸಂಬಂಧಿಸಿದ ವಿಷಯಗಳ ಕುರಿತು ವಿಷಯಾಧಾರಿತ ಚರ್ಚೆ ನಡೆಸಬೇಕು. ಸರ್ಕಾರದ ಲೋಪದೋಷ ಎತ್ತಿ ತೋರಿಸು ವುದು ವಿರೋಧ ಪಕ್ಷದ ಜವಾಬ್ದಾರಿಯಾದಂತೆ ಉತ್ತಮ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದೂ ಅಗತ್ಯ. ವಿರೋಧ ಪಕ್ಷದ ಸದಸ್ಯರಿಗೆ ಚರ್ಚೆಯಲ್ಲಿ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.ರೈತರ ಪರಿಹಾರ ಹೆಚ್ಚಳಕ್ಕೆ ಒತ್ತಾಯ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಘೋಷಿಸಿರುವ ಪರಿಹಾರದ ಮೊತ್ತ ಸಾಕಾಗುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಈ ಕುರಿತು ಸರ್ಕಾರ ಮತ್ತು ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು. ಮುಖ್ಯಮಂತ್ರಿ ದೆಹಲಿಯಲ್ಲಿ ಈ ವಿಚಾರ ಪ್ರಸ್ತಾಪಿಸಲಿದ್ದು, ವಿರೋಧ ಪಕ್ಷವೂ ಸಹಕಾರ ನೀಡಲಿದೆ. ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯುವ ವಿಶ್ವಾಸವಿದೆ ಎಂದರು.ಕಾಗದರಹಿತ ಸದನ, ಕಾನ್‌ಸ್ಟಿಟ್ಯೂಷನ್ ಕ್ಲಬ್:ವಿಧಾನಸಭೆ ಮತ್ತು ವಿಧಾನ ಪರಿಷತ್‌ಗಳನ್ನು ‘ನೇವಾ’ ತಂತ್ರಜ್ಞಾನದ ಮೂಲಕ ಕಾಗದರಹಿತ ಸದನಗಳನ್ನಾಗಿ ಪರಿ ವರ್ತಿಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಸಭೆ ನಡೆದಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ದೆಹಲಿಯ ಮಾದರಿಯಲ್ಲಿ ಬೆಂಗಳೂರಿನ ಬಾಲಬ್ರೂಯಿ ಕಟ್ಟಡದಲ್ಲಿ ಅತ್ಯಾಧುನಿಕ ಗ್ರಂಥಾಲಯ ಮತ್ತು ಚರ್ಚಾ ಕೇಂದ್ರ ಒಳಗೊಂಡ ‘ಕಾನ್‌ಸ್ಟಿಟ್ಯೂಷನ್ ಕ್ಲಬ್’ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ₹20 ಕೋಟಿ ಮೀಸಲಿಡಲಾಗಿದೆ. ಓದು ಮತ್ತು ವಿಚಾರ ವಿನಿಮಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.ಸಭಾಪತಿಯಾಗಿ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದು, ರಾಜಕೀಯ ಹೇಳಿಕೆಗಳು ಹಾಗೂ ಹನಿ ಟ್ರ್ಯಾಪ್‌ನಂತಹ ವಿವಾದಗಳ ಕುರಿತು ಪ್ರತಿಕ್ರಿಯಿಸಲ್ಲ ಎಂದು ಸ್ಪಷ್ಟಪಡಿಸಿದರು.ರಾಜ್ಯದ ಏಳು ಕೋಟಿ ಜನರಲ್ಲಿ ಕೇವಲ 300 ಜನರಿಗೆ ಮಾತ್ರ ಜನಪ್ರತಿನಿಧಿಗಳಾಗಿ ಸದನ ಪ್ರವೇಶಿಸುವ ಅವಕಾಶ ಸಿಗುತ್ತದೆ. ಈ ಜವಾಬ್ದಾರಿ ಮಹತ್ವ ಅರಿತು ಪ್ರತಿಯೊಬ್ಬ ಸದಸ್ಯರೂ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಅವುಗಳಿಗೆ ಪರಿಹಾರ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜೇಗೌಡ, ಬೀರೂರಿನ ಎನ್. ದೇವರಾಜ್, ಕಡೂರು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಅಲ್ಪಸಂಖ್ಯಾತರ ಮುಖಂಡ ಆರೀಫ್, ಕಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಪುರಸಭೆ ಮಾಜಿ ಸದಸ್ಯ ಮಾನಿಕ್ ಭಾಷ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಫೋಟೊ-- ಬೀರೂರಿನ ಪ್ರವಾಸಿ ಮಂದಿರದಲ್ಲಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ರನ್ನು ಕಾಂಗ್ರೆಸ್ ಕಾರ್ಯಕರ್ತರು ಗೌರವಿಸಿದರು. ಬೀರೂರು ದೇವರಾಜ್, ಭಂಡಾರಿ ಶ್ರೀನಿವಾಸ್, ಆರೀಫ್, ಜಯರಾಂ ಸೇರಿದಂತೆ ಮತ್ತಿತರಿದ್ದರು.