ಸಾರಾಂಶ
ಗುರು ಪುಟ್ಟರಾಜರಿಗೆ ಭಾರತ ರತ್ನ ಪ್ರಶಸ್ತಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಮತ್ತು ಅವಶ್ಯಕತೆ ಬಿದ್ದರೇ ನಿಯೋಗ ತೆಗೆದುಕೊಂಡು ಹೋಗಬೇಕು.
ಧಾರವಾಡ:
ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳ ಸಮಗ್ರ ಸಾಹಿತ್ಯ ಸಂಪುಟವನ್ನು ರಾಜ್ಯ ಸರ್ಕಾರ ಪ್ರಕಟಿಸಿ ಅವರ ಸಾಹಿತ್ಯವನ್ನು ಜನಸಾಮಾನ್ಯರಿಗೆ ಉಣಬಡಿಸಬೇಕೆಂದು ಗದಗ ಜಿಲ್ಲೆಯ ಕಡಣಿ ಸಂಸ್ಥಾನ ಹಿರೇಮಠದ ಚನ್ನವೀರ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.ಇಲ್ಲಿಯ ರಂಗಾಯಣದಲ್ಲಿ ಪಂ. ಪುಟ್ಟರಾಜ ಸಾಹಿತ್ಯೋತ್ಸವಕ್ಕೆ ಚಾಲನೆ ನೀಡಿದ ಅವರು, ಗವಾಯಿಗಳವರು ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ ವಿವಿಧ ಪ್ರಕಾರದ ಸಾಹಿತ್ಯ ರಚಿಸಿದ್ದಾರೆ. ನಾಡಿಗೆ ಶ್ರೀಮಂತ ಸಾಹಿತ್ಯ ನೀಡಿದ್ದು, ಅವರ ಜನ್ಮದಿನವನ್ನು ಸಹ ಸರ್ಕಾರದಿಂದ ಆಚರಿಸಬೇಕು ಎಂದು ಸೇವಾ ಸಮಿತಿಯಿಂದ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಸರ್ಕಾರ ಸ್ಪಂದಿಸಿ ಪೂಜ್ಯರ ಜನ್ಮದಿನ ಆಚರಣೆಗೆ ಚಾಲನೆ ನೀಡಬೇಕು ಎಂದರು.
ಸಾಹಿತಿ ಡಾ. ಎ.ಎಲ್. ದೇಸಾಯಿ ಮಾತನಾಡಿ, ಪಂ. ಪಂಚಾಕ್ಷರಿ ಗವಾಯಿಗಳವರ ನಾಟಕ ರಂಗಾಯಣದ ಮೂಲಕ ಪ್ರಯೋಗವಾಗಬೇಕು. ಈ ಕೆಲಸ ರಂಗಾಯಣದ ನಿರ್ದೇಶಕರರಾದ ರಾಜು ತಾಳಿಕೋಟಿ ಅವರಿಂದಾಗಬೇಕು ಎಂದು ಮನವಿ ಮಾಡಿದರು.ಸಾನ್ನಿಧ್ಯ ವಹಿಸಿದ್ದ ಮನಸೂರಿನ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು, ಗುರು ಪುಟ್ಟರಾಜರಿಗೆ ಭಾರತ ರತ್ನ ಪ್ರಶಸ್ತಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಮತ್ತು ಅವಶ್ಯಕತೆ ಬಿದ್ದರೇ ಡಾ. ರಾಜು ತಾಳಿಕೋಟಿ ಮತ್ತು ನಾವೆಲ್ಲರು ಸೇರಿ ಮುಖ್ಯಮಂತ್ರಿಗೆ ಭೇಟಿ ಆಗೋಣ ಎಂದರು.
ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಗೌರವ ಅಧ್ಯಕ್ಷರಾದ ಕೆಂಬಾವಿ ಸಂಸ್ಥಾನ ಹಿರೇಮಠದ ಚನ್ನಬಸವ ಶಿವಾಚಾರ್ಯರು ಮಾತನಾಡಿದರು. ರಂಗಾಯಣದ ನೂತನ ನಿರ್ದೇಶಕ ರಾಜು ತಾಳಿಕೋಟಿ ಅವರನ್ನು ಸನ್ಮಾನಿಸಲಾಯಿತು. ಡಾ. ಸುರೇಶ ಕಳಸನ್ನವರ ಸ್ವಾಗತಿಸಿದರು, ಬಸವರಾಜ ಹಡಪದ ನಿರೂಪಿಸಿದರು. ನಂತರ ಕವಿಗೋಷ್ಠಿ ನಡೆಯಿತು.