ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಸೋಮವಾರ ಬಿದ್ದ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು.ಮೈಸೂರು, ನಂಜನಗೂಡು, ನರಸೀಪುರ, ಎಚ್.ಡಿ. ಕೋಟೆ, ಹುಣಸೂರು ಸೇರಿದಂತೆ ಹಲವೆಡೆ ವ್ಯಾಪಕ ಮಳೆ ಬಿದ್ದಿದೆ. ಮೈಸೂರಿನಲ್ಲಿ ಬೆಳಗ್ಗೆ ಮತ್ತು ಸಂಜೆ ಬಿದ್ದ ಭಾರಿ ಮಳೆಯಿಂದಾಗಿ ನಗರದ ಅನೇಕ ರಸ್ತೆಗಳು ನದಿಯಂತಾದವು.ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದರೆ, ಅನೇಕ ಕಡೆಗಳಲ್ಲಿ ಮರದ ಕೊಂಬೆಗಳು ಮುರಿದು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಯಿತು. ಬೆಳಗ್ಗೆ 10.30ರ ಸುಮಾರಿಗೆ ಆರಂಭವಾದ ಧಾರಾಕಾರ ಮಳೆಯು ಮಧ್ಯಾಹ್ನ 12 ಗಂಟೆಯಾದರೂ ಕಡಿಮೆ ಆಗಲಿಲ್ಲ.ನಗರದ ಹೃದಯಭಾಗ, ಅಗ್ರಹಾರ, ಮಂಡಿ ಮೊಹಲ್ಲಾ, ಇರ್ವಿನ್ರಸ್ತೆ, ಕೆ.ಆರ್. ಮೊಹಲ್ಲಾ, ದೇವರಾಜ ಮೊಹಲ್ಲಾ ಭಾಗದಲ್ಲಿ ವೇಳೆ ಧಾರಾಕಾರ ಮಳೆ ಆಗುತ್ತಿದ್ದರೆ, ನಜರಬಾದ್ ನಿಂದ ಪೂರ್ವದ ಸಿದ್ಧಾರ್ಥನಗರ, ಜೆ.ಸಿ. ನಗರ, ಕುರುಬಾರಹಳ್ಳಿ ಭಾಗದಲ್ಲಿ ಮೋಡ ಕವಿದ ವಾತಾವರಣ ಇತ್ತಷ್ಟೇ.ಮತ್ತೆ ಸಂಜೆ 4.30ರ ಸುಮಾರಿಗೆ ಆರಂಭವಾದ ಭಾರಿ ಮಳೆಯು ವಾಹನ ಸವಾರರು, ರಸ್ತೆ ಬದಿ ವ್ಯಾಪಾರಿಗಳು ಮತ್ತು ಶಾಲಾ, ಕಾಲೇಜು ಮಕ್ಕಳಿಗೆ ತೊಂದರೆಯನ್ನುಂಟು ಮಾಡಿತು.ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿ ತೋಯ್ದು ಹೋದರು. ಮಳೆಯಿಂದ ಆಶ್ರಯ ಪಡೆಯಲು ಅಂಗಡಿ, ಮುಂಗಟ್ಟುಗಳ ಆಯಕಟ್ಟಿನ ಸ್ಥಳ ಹುಡುಕಾಡಿದರು.ನಗರದ ಕೆ.ಆರ್. ವೃತ್ತ, ದೊಡ್ಡಗಡಿಯಾರ, ಸಯ್ಯಾಜಿರಾವ್ ರಸ್ತೆ, ಚಿಕ್ಕಗಡಿಯಾರ, ಸೀತಾವಿಲಾಸ ರಸ್ತೆ, ಡಿ. ಸುಬ್ಬಯ್ಯ ರಸ್ತೆ ಮುಂತಾದ ಕಡೆಗಳಲ್ಲಿ ಮಳೆಯ ನೀರು ಹೊಳೆಯಂತೆ ಹರಿಯಿತು. ಸುಮಾರು 45 ನಿಮಿಷಕ್ಕೂ ಹೆಚ್ಚು ಕಾಲ ಬಿದ್ದ ಮಳೆಯು ನಗರದಲ್ಲಿ ಪ್ರವಾಹ ವಾತಾವರಣ ಸೃಷ್ಟಿಸಿತು.ಬೆಳಗ್ಗೆಯಿಂದ ಬಹುತೇಕ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಕೆಲಕಾಲ ಮಾತ್ರ ಬಿಸಿಲು ಬಂದಿತ್ತು. ಮಳೆ, ಶೀತಗಾಳಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ.