ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ೨೦೧೯ರಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಅಂದಿನ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಆಪ್ತ ಸಹಾಯಕ ಮೋಹನ್ ಕುಮಾರ್ ಬಳಿ ಪೊಲೀಸರು ಹಣ ವಶಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಕೋರ್ಟ್ ಮರು ತನಿಖೆಗೆ ಆದೇಶಿಸಿದೆ. ಆದ್ದರಿಂದ ಸಿ.ಪುಟ್ಟರಂಗಶೆಟ್ಟಿ ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಬಿಜೆಪಿ ಮುಖಂಡ, ಕಾಡಾ ಮಾಜಿ ಅಧ್ಯಕ್ಷ ಜಿ.ನಿಜಗುಣರಾಜು ಆಗ್ರಹಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರ ಅವರು, ೨೦೧೯ರ ಜ.೪ ರಂದು ವಿಧಾನಸೌಧ ಪೊಲೀಸರು ಮೋಹನ್‌ಕುಮಾರ್ ಬಳಿ ೨೭.೭೬ ಲಕ್ಷ ವಶಪಡಿಸಿಕೊಂಡಿದ್ದರು. ಅಂದು ಹಿಂದುಳಿದ ವರ್ಗಗಳ ಸಚಿವರಾಗಿದ್ದ ಶಾಸಕ ಸಿ.ಪುಟ್ಟರಂಗಶೆಟ್ಟರು ಹಣ ಸೀಜ್ ಮಾಡಿದ ವೇಳೆ ಈ ಹಣಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿ ಭಂಡತನ ಪ್ರದರ್ಶಿಸಿ ತನ್ನದಲ್ಲಾ ಎಂದು ಹೇಳಿದ್ದರು. ಈಗ ಈ ಪ್ರಕರಣದ ತನಿಖೆ ಸಂಬಂಧ ಲೋಪದೋಷಗಳಿವೆ ಎಂದು ಹೇಳಿ ಲೋಕಾಯುಕ್ತ ನ್ಯಾಯಾಲಯ ಮರು ತನಿಖೆಗೆ ಆದೇಶಿಸಿದೆ. ಆದ್ದರಿಂದ ಪುಟ್ಟರಂಗಶೆಟ್ಟರು, ರಾಜೀನಾಮೆ ನೀಡಿ ಅಧಿಕಾರ ದುರ್ಬಳಕೆ ತಪ್ಪಿಸಬೇಕು. ಸಿಎಂ ಸಿದ್ದರಾಮಯ್ಯ ಅವರು ಕೂಡ ಸಿ.ಪುಟ್ಟರಂಗಶೆಟ್ಟಿ ಅವರನ್ನು ಎಂಎಸ್‌ಐಎಲ್ ಹಾಗೂ ಶಾಸಕರ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ತಕ್ಷಣವೇ ಶಾಸಕ ಸ್ಥಾನಕ್ಕೆ ಮತ್ತು ಎಂಎಸ್‌ಐಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ರಾಜಿನಾಮೆ ಪಡೆಯಬೇಕು. ಒಂದು ವೇಳೆ ರಾಜಿನಾಮೆ ಪಡೆಯದಿದ್ದರೆ ಇಡೀ ರಾಜ್ಯ ಸರ್ಕಾರವೇ ಭಾಗಿಯಾಗಿದೆ ಎಂದರ್ಥ ಎಂದರು. ಸಿ.ಪುಟ್ಟರಂಗಶೆಟ್ಟಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಅಭಿವೃದ್ಧಿ ಕುಂಠಿತ:
ಪುಟ್ಟರಂಗಶೆಟ್ಟಿ ಅವರು ಕ್ಷೇತ್ರಕ್ಕೆ ಅನುದಾನ ತರುವಲ್ಲಿ ವಿಫಲರಾಗಿದ್ದು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಗ್ಯಾರಂಟಿಗಳಿಗೆ ಜನ ಸಾಮಾನ್ಯರ ಮೂಲಭೂತ ಸೌಕರ್ಯಗನ್ನು ಕಸಿದು ಉಚಿತ ಸೌಲಭ್ಯ ನೀಡಲಾಗುತ್ತಿದೆ ಎಂದರು. ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾದ ಬಳಿಕ ಯಾವುದೇ ಅಭಿವೃದ್ಧಿ ಕೆಲಸ ಕೈಗೊಂಡಿಲ್ಲ. ಕನಿಷ್ಠ ಗುಂಡಿಗಳಿಗೆ ಮಣ್ಣು ಹಾಕಿಸುವ ಕೆಲಸವನ್ನು ಮಾಡಿಲ್ಲ ಎಂದು ಆರೋಪಿಸಿದರು. ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಮುಖಂಡರಾದ ಸಿ.ಎನ್.ಬಾಲರಾಜ್, ವೇಣುಗೋಪಾಲ್, ಶಿವಣ್ಣ ಇದ್ದರು.