ಸಾರಾಂಶ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಮತ್ತು ಪುತ್ತಿಲ ಪರಿವಾರ ಟ್ರಸ್ಟ್ ವತಿಯಿಂದ ಶ್ರೀನಿವಾಸ ಕಲ್ಯಾಣೋತ್ಸವ ನೆರವೇರಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ಗೋವಿನ ರಕ್ಷಣೆ ಹೇಗೆ ಮಾಡಬೇಕು ಎಂಬುದಕ್ಕೆ ಶ್ರೀನಿವಾಸ ದೇವರೇ ಸ್ಫೂರ್ತಿಯಾಗಿದ್ದು, ಶ್ರೀನಿವಾಸ ದೇವರು ಇದ್ದಾರೆಂದು ನಮಗೆ ತೋರಿಸಿಕೊಟ್ಟದ್ದು ಗೋವು. ಧರ್ಮ ರಕ್ಷಣೆಗೆ ಕಟಿಬದ್ದರಾಗಿ ನಾವು ನಿಲ್ಲಬೇಕಾದರೆ ಧರ್ಮದ ಪ್ರತೀಕವಾಗಿರುವಂತಹ ಗೋವಿನ ಸಂರಕ್ಷಣೆಗೆ ನಾವು ನಿಂತರೆ ಶ್ರೀನಿವಾಸ ದೇವರ ಪರಿಪೂರ್ಣ ಅನುಗ್ರಹ ನಮಗೆ ಸಿಗುತ್ತದೆ. ಮುಂದಿನ ಕಲ್ಯಾಣೋತ್ಸವದೊಳಗಾಗಿ ಬೃಹತ್ ಗೋ ಶಾಲೆ ನಿರ್ಮಾಣ ಆಗಬೇಕೆಂದು ಸಂಕಲ್ಪ ಮಾಡೋಣ. ದೇವರು ಅದನ್ನು ನಡೆಸಿಕೊಡುತ್ತಾರೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.ಅವರು ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಮತ್ತು ಪುತ್ತಿಲ ಪರಿವಾರ ಟ್ರಸ್ಟ್ ವತಿಯಿಂದ ನಡೆದ ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಾನುವಾರ ಭಾಗವಹಿಸಿ ಆಶೀರ್ವಚನ ನೀಡಿದರು.ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉಪಸ್ಥಿತರಿದ್ದರು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌರವಾಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಶಶಾಂಕ ಕೊಟೇಚಾ, ಚಂದಪ್ಪ ಮೂಲ್ಯ, ಬೂಡಿಯಾರು ರಾಧಾಕೃಷ್ಣ ರೈ ಸಹಿತ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು, ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪದಾಧಿಕಾರಿಗಳು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬಿಜೆಪಿ ಪ್ರಮುಖರಾದ ಹರಿಪ್ರಸಾದ್ ಯಾದವ್, ಹರೀಶ್ ಬಿಜತ್ರೆ, ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ ಮತ್ತಿತರರು ಉಪಸ್ಥಿತರಿದ್ದರು.ಭಕ್ತಿಭಾವದೊಂದಿಗೆ ನಡೆದ ಕಲ್ಯಾಣೋತ್ಸವ:ತಿರುಪತಿ ಮಾದರಿಯ ಮಂಟಪದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವು ಗೋಧೂಳಿ ಲಗ್ನದಲ್ಲಿ ನಡೆಯಿತು. ಸಂಕಲ್ಪ ಪುಣ್ಯಾಹ, ದೇವನಾಂದಿ, ವರಪೂಜೆ, ವರೋಪಚಾರ ಸಹಿತ ಕಂಕಣಧಾರಣೆ ನಡೆಯಿತು. ಸಹಸ್ರಾರು ಭಕ್ತರ ಗೋವಿಂದನ ಉದ್ಘೋಷದೊಂದಿಗೆ ಮಾಂಗಲ್ಯ ಧಾರಣೆ ನಡೆಯಿತು. ಮಹಾಮಂಗಳಾರತಿ ಎತ್ತಿ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ಈ ಸಂದರ್ಭ ಸಂಜೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಶ್ರೀ ಹರಿಗಾನಾಮೃತ, ಸುಡುಮದ್ದು ಪ್ರದರ್ಶನ ನಡೆಯಿತು.