ಭಟ್ಕಳ: ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಂಕವೇ ಮಾನದಂಡವಲ್ಲ. ಕಲೆ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ತಾಲೂಕು ಗಾಣಿಗ ಸಮಾಜ ಸೇವಾ ಟ್ರಸ್ಟಿನ ಅಧ್ಯಕ್ಷ ಸುಭಾಷ ಶೆಟ್ಟಿ ಹೇಳಿದರು.
ಗೋಪಾಲಕೃಷ್ಣ ಸಭಾಭವನದಲ್ಲಿ ನಡೆದ ಭಟ್ಕಳ ಗಾಣಿಗ ಸಮಾಜ ಸೇವಾ ಟ್ರಸ್ಟ್ ವತಿಯಿಂದ ನಡೆದ 2026ನೇ ಸಾಲಿನ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದು, ಸಾಧಕರನ್ನು ಗುರುತಿಸಿ ಗೌರವಿಸುವುದು ಹಾಗೂ ಸಮಾಜದ ಒಗ್ಗಟ್ಟು ಮತ್ತು ಅಭಿವೃದ್ಧಿಗೆ ಶ್ರಮಿಸುವುದು ಇಂತಹ ಕಾರ್ಯಕ್ರಮಗಳ ಪ್ರಮುಖ ಆಶಯವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಸಮಾಜದ ಇತರ ವಿದ್ಯಾರ್ಥಿಗಳಿಗೂ ಉನ್ನತ ಸಾಧನೆ ಮಾಡಲು ಪ್ರೇರಣೆ ನೀಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ, ಉತ್ತರ ಕನ್ನಡದ ಜಿಲ್ಲಾಧ್ಯಕ್ಷ ಗಜಾನನ ಆನಂದ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಭಟ್ಕಳದ ಗಾಣಿಗ ಸಮಾಜ ಸೇವಾ ಟ್ರಸ್ಟ್ ನಡೆಸುವ ಸಮಾಜಮುಖಿ ಕಾರ್ಯವು ಉಳಿದ ಎಲ್ಲ ತಾಲೂಕುಗಳಿಗೂ ಮಾದರಿಯಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಗೋಕರ್ಣದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹೇಶ್ ಶೆಟ್ಟಿ, ಅಗ್ನಿಶಾಮಕ ಇಲಾಖೆಯ ನಿವೃತ್ತ ನೌಕರ ರಮೇಶ್ ಶೆಟ್ಟಿ, ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣಪತಿ ಆನಂದ ಶೆಟ್ಟಿ ಹಾಗೂ ಗೋಪಾಲಕೃಷ್ಣ ಮತ್ತು ಮಣ್ಕುಳಿ ಹನುಮಂತ ಹಾಗೂ ಲಕ್ಷ್ಮೀನಾರಾಯಣ ದೇವಸ್ಥಾನ ಆಡಳಿತ ಮಂಡಳಿಯ ಗೌರವಾಧ್ಯಕ್ಷ ನಾರಾಯಣ ಎನ್. ಶೆಟ್ಟಿ ಉಪಸ್ಥಿತರಿದ್ದರು.
2026ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಗಾಣಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾಜ ಸೇವೆ ಮತ್ತು ತಮ್ಮ ವೃತ್ತಿಯ ಮೂಲಕ ಗುರುತಿಸಿಕೊಂಡಿರುವ ಹರ್ಕೋಡಿನ ಕೃಷಿಕರು ಹಾಗೂ ಸಮಾಜಸೇವಕ ನಾಗೇಂದ್ರ ಶೆಟ್ಟಿ, ಹೆರ್ತಾರದ ಆಟೋ ಚಾಲಕ ಪಾಂಡುರಂಗ ಶೆಟ್ಟಿ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ ಶಿರಾಲಿ, ನಿವೃತ್ತ ಶಿಕ್ಷಕರಾದ ತಾರಾ ಶೆಟ್ಟಿ ಹಾಗೂ ಆಶಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟ್ನ ಕಾರ್ಯದರ್ಶಿ ಮನೋಜ್ ಶೆಟ್ಟಿ ಅವರು ವಾರ್ಷಿಕ ವರದಿಯನ್ನು ವಾಚಿಸಿದರು. ಸತ್ಯವತಿ ಶೆಟ್ಟಿ ಅವರು ಸ್ವಾಗತಿಸಿದರು. ಪೂರ್ಣಿಮಾ ಶೆಟ್ಟಿ, ಉಷಾ ಶೆಟ್ಟಿ ಹಾಗೂ ಗಾಯತ್ರಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ರಾಧಾ ರವೀಂದ್ರ ಶೆಟ್ಟಿ, ವಿಶಾಲಾಕ್ಷಿ ಶೆಟ್ಟಿ ಹಾಗೂ ಸುರೇಖಾ ಶೆಟ್ಟಿ ಪ್ರಾರ್ಥಿಸಿದರು. ಪ್ರಕಾಶ್ ಶಿರಾಲಿ ವಂದಿಸಿದರು.