ಸಾರಾಂಶ
ಹೊಸದುರ್ಗ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಯುವ ರೆಡ್ ಕ್ರಾಸ್ ಘಟಕಗಳ ಕಾರ್ಯಕ್ರಮವನ್ನು ಶಾಸಕ ಬಿ.ಜಿ.ಗೋವಿಂದಪ್ಪ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಹೊಸದುರ್ಗ
ವಿದ್ಯಾರ್ಥಿಗಳು ಪ್ರತಿನಿತ್ಯ ಅಧ್ಯಯನ ಶೀಲರಾಗುವ ಮೂಲಕ ಒಳ್ಳೆಯ ಶಿಕ್ಷಣವಂತರಾಗಿ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 2025-26ನೇ ಸಾಲಿನ, ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿದರು.
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಮಾನಸಿಕವಾಗಿ ಸದೃಡರಾಗಲು ಸಾಧ್ಯ. ಶೈಕ್ಷಣಿಕ ಕಾರ್ಯಕ್ರಮಗಳು ಹಿನ್ನಡೆಯಾಗದಂತೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಎಚ್ಚರ ವಹಿಸಬೇಕು. 18 ವರ್ಷ ತುಂಬಿದ ಕೂಡಲೇ ದೊಡ್ಡವರಾಗುತ್ತೇವೆ. ನಂತರ ತಂದೆ ತಾಯಿ ಅಗತ್ಯವಿಲ್ಲ ಎನ್ನುವ ಮನೋಭಾವನೆಯನ್ನು ಹೊಂದುತ್ತೇವೆ. ಜೀವನ ಪರ್ಯಂತ ಪೋಷಕರ ಅವಶ್ಯಕತೆ ಇರುತ್ತದೆ. ಕಾಲೇಜುಗಳಲ್ಲಿ ನೀಡುವ ಅಂಕಗಳಿಗಿಂತ ಸಮಾಜ ನೀಡುವ ಅಂಕಗಳು ಮುಖ್ಯ. ಪೋಷಕರನ್ನು ಕಡೆಗಣಿಸಬೇಡಿ ಎಂದರು.ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸಲಾಗುತ್ತಿದೆ. ಮೂಲ ಸೌಕರ್ಯಗಳ ಅಭಿವೃದ್ಧಿಗೂ ಗಮನಹರಿಸಲಾಗಿದೆ. ಮುಂದಿನ
ಶೈಕ್ಷಣಿಕ ವರ್ಷದೊಳಗೆ ಕಾಲೇಜಿನಲ್ಲಿ ಶೀಟ್ ಅಳವಡಿಸಲಾಗುವುದು. ಶೌಚಾಲಯದ ವ್ಯವಸ್ಥೆ ಕಲ್ಪಿಸಲಾಗುವುದು. ಇನ್ನೂ ಯಾವುದಾದರೂ ಸೌಲಭ್ಯಗಳ ಅಗತ್ಯವಿದ್ದಲ್ಲಿ ಕೇಳಿ ಪಡೆಯಿರಿ ಎಂದರು.ಈ ವೇಳೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಶ್ವಥ್ ಯಾದವ್, ಐಕ್ಯೂಎಸಿ ಸಂಚಾಲಕ ಸತೀಶ್ ಎಂ.ಇ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಜಯಪ್ರಕಾಶ್, ಕ್ರೀಡಾ ಸಮಿತಿ ಸಂಚಾಲಕ ಶೈಲೇಂದ್ರ, ರಾ.ಸೆ.ಯೋಜನೆಯ ಕಾರ್ಯಕ್ರಮಾಕಾರಿ ಸುಬ್ರಹ್ಮಣ್ಯಶೆಟ್ಟಿ, ಧನಂಜಯ, ರೋವರ್ಸ್ ಸಂಚಾಲಕ ಮಂಜುನಾಥ, ರೇಂಜರ್ಸ್ ಸಂಚಾಲಕಿ ಶೋಭ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿದ್ದರು.