ಕೃಷಿ ವಿಜ್ಞಾನ ಕೇಂದ್ರದ ಲೋಪಗಳ ಬಗ್ಗೆ ಮುಖ್ಯಮಂತ್ರಿ ಗಮನಹರಿಸಲಿ
KannadaprabhaNewsNetwork | Published : Oct 06 2023, 01:09 AM IST
ಕೃಷಿ ವಿಜ್ಞಾನ ಕೇಂದ್ರದ ಲೋಪಗಳ ಬಗ್ಗೆ ಮುಖ್ಯಮಂತ್ರಿ ಗಮನಹರಿಸಲಿ
ಸಾರಾಂಶ
ರೈತ ಸಂಘದ ಮಾಸಿಕ ಸಭೆಯಲ್ಲಿ ಅಧ್ಯಕ್ಷ ಕೆ.ಟಿ ತಿಪ್ಪೇಸ್ವಾಮಿ ಆರೋಪ
ರೈತ ಸಂಘದ ಮಾಸಿಕ ಸಭೆಯಲ್ಲಿ ಅಧ್ಯಕ್ಷ ಕೆ.ಟಿ ತಿಪ್ಪೇಸ್ವಾಮಿ ಆರೋಪ ಕನ್ನಡಪ್ರಭ ವಾರ್ತೆ ಹಿರಿಯೂರು ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರದಿಂದ ನಿರೀಕ್ಷಿತ ಮಟ್ಟದಲ್ಲಿ ರೈತರಿಗೆ ಅನುಕೂಲವಾಗಿಲ್ಲ. ಇದೀಗ ಕೃಷಿ ವಿಜ್ಞಾನ ಕೇಂದ್ರದ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸುತ್ತಿರುವುದು ಸಂತೋಷದ ವಿಷಯ. ಅಲ್ಲಿರುವ ನೂರಾರು ಲೋಪಗಳ ಬಗ್ಗೆ ಸಿಎಂ ಗಮನಹರಿಸಲಿ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಆರೋಪಿಸಿದರು. ನಗರದ ರೈತ ಸಂಘದ ಕಚೇರಿಯಲ್ಲಿ ನಡೆದ ಮಾಸಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ದೂರದೃಷ್ಟಿಯ ಫಲವಾಗಿ 85 ಹೆಕ್ಟರ್ ನಲ್ಲಿ ಜನ್ಮ ತಾಳಿದ ಕೃಷಿವಿಜ್ಞಾನ ಕೇಂದ್ರ ಹೊಸ ಹೊಸ ಬೀಜಗಳನ್ನು ಸಂಸ್ಕರಿಸಿ ರೈತರಿಗೆ ಬೀಜ ಮಾರಾಟ ಮಾಡಬೇಕಾಗಿತ್ತು. ಆದರೆ ರೈತರಿಗೆ ಆ ರೀತಿಯ ಉಪಯೋಗಗಳು ಆಗಿದ್ದೇ ಕಡಿಮೆ ಎಂದರು. ಕೃಷಿ ವಿಜ್ಞಾನಿಗಳು ಲಕ್ಷಾನುಗಟ್ಟಲೆ ಸಂಬಳ ತೆಗೆದುಕೊಂಡು, ಐಷಾರಾಮಿ ಕಟ್ಟಡಗಳಲ್ಲಿ ಕುಳಿತು ಕಾಲ ಹರಣ ಮಾಡುತ್ತಾರೆ. ಸಾವಯವ ಉತ್ಪನ್ನಗಳ ಪರೀಕ್ಷಾ ಕೇಂದ್ರದ ಕಟ್ಟಡ ಕಟ್ಟಿ ಮೂರು ವರ್ಷವಾದರೂ ಯಾವುದೇ ಲ್ಯಾಬ್ ಪ್ರಾರಂಭವಾಗಿರುವುದಿಲ್ಲ. ರೈತರ ತರಬೇತಿ ಕೇಂದ್ರಗಳು ನೆಪ ಮಾತ್ರಕ್ಕೆ ಸೀಮಿತವಾಗಿವೆ. ನಾಟಿ ಹಸುಗಳಾಗಲಿ, ನಾಟಿ ಬೀಜಗಳಾಗಲಿ ಸಂಸ್ಕರಣ ಕೇಂದ್ರಗಳಲ್ಲಿ ಇರುವುದಿಲ್ಲ. ಯಂತ್ರೋಪಕರಣಗಳನ್ನು ತಯಾರಿಸಿ ಬಾಡಿಗೆ ಕೊಡುವುದಕ್ಕೆ ಮಾತ್ರ ಸೀಮಿತವಾಗಿವೆ. ಮಣ್ಣು ನೀರು ಪರೀಕ್ಷೆಗೆ ರೈತರ ಹತ್ತಿರ 500 ರು ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದರು. ಬರಗಾಲ ಘೋಷಣೆಯಾಗಿದ್ದು ಇದುವರೆಗೂ ಯಾವುದೇ ಗೋಶಾಲೆ, ಬೆಳೆ ಪರಿಹಾರ, ಬೆಳೆವಿಮೆ ಬಂದಿಲ್ಲ. ಈ ಬಗ್ಗೆ ಸರ್ಕಾರ ಕೂಡಲೇ ಕಾರ್ಯ ಪ್ರವೃತ್ತವಾಗಬೇಕು .ಬೆಸ್ಕಾಂ ಇಲಾಖೆಯಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ನಾಲ್ಕು ವರ್ಷವಾದರೂ ಪರಿವರ್ತಕಗಳನ್ನು ಅಳವಡಿಸಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಇದೇ ತಿಂಗಳು 10 ನೇ ತಾರೀಕು ಬೆಸ್ಕಾಂ ಎಂಡಿ ಕಚೇರಿಗೆ ಮುತ್ತಿಗೆ ಹಾಕಲು ಸಭೆ ತೀರ್ಮಾನಿಸಿತು. ರೈತ ಸಂಘದ ಕಾರ್ಯದರ್ಶಿ ಆಲೂರು ಸಿದ್ದರಾಮಣ್ಣ, ತಿಮ್ಮಾರೆಡ್ಡಿ,ಬಬ್ಬೂರು ಶಿವಣ್ಣ, ರಂಗಸ್ವಾಮಿ, ಹಳ್ಳಿಕೆರೆ ತಿಪ್ಪೇಸ್ವಾಮಿ, ರಂಗೇನಹಳ್ಳಿ ಜಗದೀಶ್, ಜಯಣ್ಣ ಹೊಸಕೆರೆ, ನಾರಾಯಣಪ್ಪ,ಜಗದೀಶ್, ರಾಮಣ್ಣ, ಶ್ರೀರಂಗಮ್ಮ, ಲೋಕೇಶ್, ವಿರೂಪಾಕ್ಷಪ್ಪ, ರಾಮಕೃಷ್ಣ,ಚಂದ್ರಶೇಖರ್ ಹಾಜರಿದ್ದರು.