ಹುಬ್ಬಳ್ಳಿ:

ತ್ಯಾಜ್ಯ ಶ್ರಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಪ್ರತಿಯೊಬ್ಬರೂ ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮಕ್ಕಳ ರಕ್ಷಣಾ ಘಟಕದ ಜಿಲ್ಲಾಧಿಕಾರಿ ದೀಪಾ ಜಾವೂರ ಹೇಳಿದರು.

ಇಲ್ಲಿನ ಅಶೋಕನಗರದ ಡಿ.ಎಸ್‌. ಕರ್ಕಿ ಕನ್ನಡ ಭವನದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಹಸಿರು ದಳ, ಫಿನೋಲೆಕ್ಸ್‌ ಪೈಫ್ಸ್‌ ಆ್ಯಂಡ್‌ ಫಿಟಿಂಗ್ಸ್‌ ಮತ್ತು ಮುಕುಲ್‌ ಮಾಧವ ಫೌಂಡೇಶನ್‌ ನೇತೃತ್ವದಲ್ಲಿ ಹು-ಧಾ 510 ತ್ಯಾಜ್ಯ ಶ್ರಮಿಕರಿಗೆ ರೇಷನ್‌ ಕಿಟ್‌ ವಿತರಿಸಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ರೋಟರಿ ಕ್ಲಬ್‌ ಆಫ್‌ ಸೆಂಟ್ರಲ್‌ ಅಧ್ಯಕ್ಷೆ ಡಾ. ನಾಗರೇಖಾ ಹೆಬಸೂರ, ಎಲ್ಲ ದಾನಗಳಿಗಿಂತ ಅನ್ನದಾನ ಶ್ರೇಷ್ಠ. ತ್ಯಾಜ್ಯ ಶ್ರಮಿಕರಿಗೆ ರೇಷನ್‌ ಕಿಟ್‌ ವಿತರಿಸುತ್ತಿರುವುದು ಶ್ಲಾಘನೀಯ. ನಮ್ಮ ಕ್ಲಬ್‌ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಅಕ್ಬರ್‌ ಮುಲ್ಲಾ, ಫಿನೋಲೆಕ್ಸ್‌ ಪೈಫ್ಸ್‌ ಆ್ಯಂಡ್‌ ಫಿಟಿಂಗ್ಸ್‌ನ ರಾಜ್ಯ ಘಟಕದ ಮುಖ್ಯಸ್ಥ ಪ್ರವೀಣ ಉರಾಳ ಮಾತನಾಡಿದರು. ಹು-ಧಾ ಮಹಾನಗರ ಪಾಲಿಕೆಯಿಂದ "ನಮಸ್ತೆ " ಯೋಜನೆಯಡಿ ತ್ಯಾಜ್ಯ ಶ್ರಮಿಕರಿಗೆ ವೈಯಕ್ತಿಕ ಸುರಕ್ಷತಾ ಸಾಧನ ವಿತರಿಸಿ ಜಾಗೃತಿ ಮೂಡಿಸಲಾಯಿತು.


ಹಿರಿಯ ಕಾರ್ಮಿಕ ನಿರೀಕ್ಷಕಿ ರಜನಿ ಹಿರೇಮಠ, ಪಾಲಿಕೆಯ ಆರೋಗ್ಯ ನಿರೀಕ್ಷಕರಾದ ಫಝಲ್ ಬಗಲಿ, ಸುರೇಶ ರಾಥೋಡ, ಫಿನೋಲೆಕ್ಸ್‌ ಪೈಫ್ಸ್‌ ಆ್ಯಂಡ್‌ ಫಿಟಿಂಗ್ಸ್‌ ಉತ್ತರ ಕರ್ನಾಟಕ ವಿಭಾಗದ ಮುಖ್ಯಸ್ಥ ಪ್ರಕಾಶ ಬಿಳಗಿ, ನವೀನ ಜಾಲಿಹಾಳ, ರಾಮಕೃಷ್ಣ ಜಿ.ಎಸ್‌, ಡಿ.ಕೆ. ದೊಡಮನಿ, ನಿಂಗನಗೌಡ ಸತ್ತಿಗೌಡ್ರ ಸೇರಿ ಹಲವರಿದ್ದರು. ಹಸಿರು ದಳದ ವ್ಯವಸ್ಥಾಪಕ ಮಂಜುನಾಥ ಬಾರಕೇರ ಸ್ವಾಗತಿಸಿ ನಿರೂಪಿಸಿದರು.