ಕನ್ನಡಪ್ರಭ ವಾರ್ತೆ ವಿಜಯಪುರ

ತಮಿಳುನಾಡಿನವರಿಗೆ ಕರ್ನಾಟಕ ರೈತರ ಬಗ್ಗೆ ಕಾಳಜಿ ಇಲ್ಲ. ಸುಪ್ರೀಂಕೋರ್ಟ್ ನಲ್ಲಿ ಸರಿಯಾಗಿ ವಾದ ಮಾಡಲು ಕರ್ನಾಟಕ ಸರ್ಕಾರ ವಿಫಲವಾಗುತ್ತಿದೆ. ದೊಡ್ಡ ದೊಡ್ಡ ಮಾತನಾಡುವ ಸಿಎಂ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಲಿ. ತಮಿಳುನಾಡಿಗೆ ನೀರು ಬಿಡದೇ ಕರ್ನಾಟಕದ ಜನರಿಗಾಗಿ ಜೈಲಿಗೆ ಹೋಗಲಿ ನೋಡೋಣ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂ ಡಿ.ಕೆ. ಶಿವಕುಮಾರ್‌ಗೆ ಸವಾಲು ಹಾಕಿದರು.

ಕರ್ನಾಟಕ ರಾಜ್ಯದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುವ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಹಿಂದೆ ಬಂಗಾರಪ್ಪನವರು ಸಿಎಂ ಆಗಿದ್ದಾಗ ಕಾವೇರಿ ನೀರು ತಮಿಳುನಾಡಿಗೆ ಬಿಡುವುದಿಲ್ಲ ಎಂದಿದ್ದರು. ನಮ್ಮ ರಾಜ್ಯದ ರೈತರ ಸಮಸ್ಯೆ ನೋಡಬೇಕಲ್ಲ. ಕಾವೇರಿ ಕೊಳ್ಳದ ನೀರಿನ ಲಭ್ಯತೆ ಕುರಿತು ಅಧ್ಯಯನ ಸಮಿತಿ ಮಾಡಲಿ. ಎಷ್ಟು ನೀರಿದೆ, ಕರ್ನಾಟಕ್ಕೆ ಎಷ್ಟು ಬೇಕು, ಕುಡಿಯುವ ನೀರಿನ ಯೋಜನೆಗೆ ಎಷ್ಟು ಬೇಕು ಎಂದು ಲೆಕ್ಕ ಹಾಕಬೇಕೆಂದು ಒತ್ತಾಯಿಸಿದರು.

ಉತ್ತಮ ಮಳೆಯಾದರೆ ಸಮಸ್ಯೆಯಿಲ್ಲ, ಮಳೆ ಕಡಿಮೆಯಾದಾಗ ಲೆಕ್ಕ ಹಾಕಬೇಕು. ನ್ಯಾಯಾಧೀಕರಣವೇ ಒಂದು ಸಮಿತಿ ಮಾಡಬೇಕು, ನೀರಿನ ಲಭ್ಯತೆ ಆಧಾರದ ಮೇಲೆ ಎಷ್ಟು ನೀರು ಬಿಡಬೇಕೆಂದು ತಿಳಿಸಬೇಕು. ನೀರಿನ ಲಭ್ಯತೆ ಮೇಲೆ ತಮಿಳುನಾಡಿಗೆ ನೀಡು ಬಿಡಬೇಕು. ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ಸರ್ಕಾರ ಸರಿಯಾದ ಸಂವಹನ, ವಾದ ಮಂಡನೆ ಆಗುತ್ತಿಲ್ಲ. ಈ ಕಾರಣದಿಂದ ರಾಜ್ಯಕ್ಕೆ ವ್ಯತರಿಕ್ತ ತೀರ್ಪು ಬರುತ್ತಿದೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಬಿಟ್ಟು ಎಲ್ಲ ಹೋಗಿದ್ದಾರೆ.ಹಾಗಾಗಿ ಈಗಿರುವ ಸಿಎಂ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆಂದು ಶಾಸಕ ಯತ್ನಾಳ ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎರಡೂ ಸತ್ತಂತಾಗಿವೆ. ಬಿಡದಿ ಟೌನ್‌ಶಿಪ್ ಯೋಜನೆಯಲ್ಲಿ ರಾಜಕಾರಣಿಗಳ ಬೇನಾಮಿ ಜಮೀನುಗಳಿವೆ. ಬ್ಲಾಕ್ ಮನಿಯನ್ನು ವೈಟ್ ಮನಿಯನ್ನಾಗಿ ಮಾಡಲು ಜಮೀನುಗಳನ್ನು ಕೆಐಎಡಿಬಿಗೆ ನೀಡಲಾಗುತ್ತಿದೆ. ಬಿಡದಿ ರೈತರು ಹೈನುಗಾರಿಕೆ, ತೋಟಗಾರಿಕೆಯಿಂದ ಸ್ವಾವಲಂಬಿಗಳಾಗಿದ್ದಾರೆ. ಬಲವಂತವಾಗಿ ರೈತರ ಜಮೀನುಗಳನ್ನು ಸರ್ಕಾರ ಪಡೆದುಕೊಳ್ಳುತ್ತಿದೆ. ಬಿಡದಿ ಟೌನ್‌ಶಿಪ್ ಯೋಜನೆ ರಾಬರ್ಟ್ ವಾದ್ರಾಗೆ ಲಾಭವಾಗುವ ಯೋಜನೆ ಎಂದು ಆರೋಪಿಸಿದ ಅವರು, ಸಿದ್ದರಾಮಯ್ಯ ಬದಲಾಗಿ ಡಿ.ಕೆ.ಶಿವಕುಮಾರ್‌ ಸಿಎಂ ಆದ ಕಾರಣ ಆಸ್ತಿ ಒಪ್ಪಂದ ನಡೆದಿದೆ ಎಂಬ ಮಾಹಿತಿಯಿದೆ ಎಂದು ಯತ್ನಾಳ ಹೇಳಿದರು.


ಕನಕಪುರದಲ್ಲಿ ಜಮೀನು ನೀಡಬೇಡಿ ಎನ್ನುವ ಸಿಎಂ ಡಿ.ಕೆ. ಶಿವಕುಮಾರ್‌ ಬಿಡದಿಯಲ್ಲಿ ಜಮೀನು ಕಬಳಿಸುತ್ತಿದ್ದಾರೆ. ಬಿಡದಿ ಯೋಜನೆ ವಿರೋಧಿಸಿ ದೇವೇಗೌಡರು ಉಪವಾಸ ಸತ್ಯಾಗ್ರಹ ಮಾಡಿದರೆ ನಾನೂ ಕೂಡ ಅವರೊಂದಿಗೆ ಭಾಗಿಯಾಗುತ್ತೇನೆ ಎಂದು ಹೇಳಿದರು.

ವಿಜಯ ದಶಮಿಯೊಳಗೆ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ:

ವಿಜಯೇಂದ್ರ-ಮಧು ಬಂಗಾರಪ್ಪ ಮಾತುಕತೆ ಹೊಂದಾಣಿಕೆ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಬಿಜೆಪಿ ನಾಯಕತ್ವ ಹೋರಾಟ ಮಾಡುತ್ತಿಲ್ಲ. ವಿಜಯೇಂದ್ರ ಮತ್ತು ಆರ್‌.ಅಶೋಕ ಸರ್ಕಾರದ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುತ್ತಿಲ್ಲ. ಮುಡಾ ಹಗರಣದಲ್ಲೂ ಬಿಜೆಪಿ ನಾಯಕತ್ವ ವಿಫಲವಾಗಿದೆ, ಸಚಿವ ನಾಗೇಂದ್ರ ರಾಜೀನಾಮೆ ಪಡೆಯುವವರೆಗೆ ಸದನ ನಡೆಯಲು ಬಿಡುವುದಿಲ್ಲ ಎಂಬ ಮಾತಿಗೆ ಬಿಜೆಪಿ ನಾಯಕತ್ವ ಬದ್ಧವಾಗಿದೆಯೇ ನೋಡಬೇಕು. ಬಿಜೆಪಿ ಅಧ್ಯಕ್ಷನಾಗಿ ವಿಜಯೇಂದ್ರ ಒಂದು ನಿಮಿಷವೂ ಮುಂದುವರಿಯಬಾರದು. ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕುವ ವಾತಾವರಣ ದೆಹಲಿಯಲ್ಲಿದೆ. ವಿಜಯ ದಶಮಿಯೊಳಗೆ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ಆಗಲಿದೆ. ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮಾಹಿತಿ ನನಗೆ ಬರುತ್ತದೆ ಎಂದು ಯತ್ನಾಳ ಹೇಳಿದರು.