ಮಂಗಳೂರು: ರಾಷ್ಟ್ರ ಮೊದಲು ಎಂಬ ಪರಿಕಲ್ಪನೆ ನಮ್ಮದಾಗಿರಬೇಕು. ಅದು ಆದಾಗ ಮಾತ್ರ ನಾವೆಲ್ಲ ಬದುಕಬಹುದು. ಜಗತ್ತಿಗೆ ದಾರಿ ತೋರಿಸಬಹುದು ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದರು.ನಗರದ ಕದ್ರಿಹಿಲ್ಸ್‌ ಯುದ್ಧ ಸ್ಮಾರಕದಲ್ಲಿ ಭಾನುವಾರ ಕಾರ್ಗಿಲ್‌ ವಿಜಯ ದಿವಸ ಕಾರ್ಯಕ್ರಮ ಹಾಗೂ ಟಿ 55 ಟ್ಯಾಂಕ್‌ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಟಿ 55 ಟ್ಯಾಂಕ್‌ ಲೋಕಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು.

ಕಾರ್ಗಿಲ್‌ನಲ್ಲಿ ಸೈನಿಕರ ಎದೆಗೆ ಗುಂಡು ಬಿದ್ದಿದೆ. ದೇಶದ ಒಂದಿಂಚು ನೆಲ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದ ಸೈನಿಕರಿಗಾಗಿ ನಾವು ಬದುಕುವ ಅನಿವಾರ್ಯ ಇದೆ. ಭಾರತೀಯರಾದ ನಾವೆಲ್ಲ ಒಟ್ಟಾಗಿ ದೇಶದ ವ್ಯವಸ್ಥೆ, ಸನಾತನ ಸಂಸ್ಕೃತಿಗಳ, ರಾಷ್ಟ್ರ ನಿರ್ಮಾಣದ ಜವಬ್ದಾರಿ ನಮ್ಮ ಮೇಲಿದೆ ಎಂದರು.ಮಂಗಳೂರಿಗೆ ಯುದ್ಧ ವಿಮಾನ: ಇಲ್ಲಿನ ಯುದ್ಧ ಸ್ಮಾರಕದಲ್ಲಿ ಲೋಕಾರ್ಪಣೆ ಮಾಡಲಾಗಿರುವ ಟಿ 55 ಟ್ಯಾಂಕ್‌ನ್ನು ಜಿಲ್ಲೆಯ ಸೈನಿಕರಿಗೆ ಸಮರ್ಪಣೆ ಮಾಡಿದ್ದೇವೆ. ಅದು ಕೇವಲ ಉಕ್ಕಿನ ವಸ್ತುವಲ್ಲ. ಅದು ಅಸಂಖ್ಯಾತ ಸೈನಿಕರ ತ್ಯಾಗ, ದೈರ್ಯ, ದೇಶದ ಭವಿಷ್ಯಕ್ಕೆ ಸಾಹಸದ ಸಾಕ್ಷಿ. ಈ ಸ್ಥಳ ಪೂಜನೀಯ ಸ್ಥಳ ಆಗಭೆಕು. ಪೂಜನೀಯ ಭಾವನೆಯಿಂದ ಕಾಣಬೇಕು. ಇಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಆಗಿ, ಇದು ಪ್ರತಿ ದಿನ ತೆರೆದಿಡಬೇಕು. ಮಂಗಳೂರಿಗೆ ಯುದ್ಧ ವಿಮಾನ (ಮಿಗ್‌) ತರುವ ಕೆಲಸ ಮಾಡುತ್ತೇನೆ ಎಂದರು.

ಶಾಸಕ ಡಿ.ವೇದವ್ಯಾಸ ಕಾಮತ್‌ ಮಾತನಾಡಿ, ಇಲ್ಲಿನ ಯುದ್ಧ ಸ್ಮಾರಕ ಪರಿಸರ ಅಭಿವೃದ್ಧಿ ಮಾಡಬೇಕು ಎಂಬ ಸಂಕಲ್ಪದೊಂದಿಗೆ ಟಿ 55 ಟ್ಯಾಂಕ್‌ ಲೋಕಾರ್ಪಣೆ ಮಾಡಲಾಗಿದೆ. ಇಲ್ಲಿ. ಶೇ.75ರಷ್ಟು ಕೆಲಸ ಆಗಿದೆ. ಮುಂದೆ ಶೀಘ್ರ ಉಳಿಕೆ ಅಭಿವೃದ್ಧಿ ಕೆಲಸ ಮಾಡಲಾಗುವುದು. ಯುದ್ಧ ವಿಮಾನ ತರಬೇಕೆಂಬ ಸಂಸದರ ಕನಸು ಶೀಘ್ರ ನನಸಾಗಲಿ ಎಂದರು.

ಟಿ 55 ಟ್ಯಾಂಕ್‌ ಲೋಕಾರ್ಪಣೆ: ಕದ್ರಿಹಿಲ್ಸ್‌ನ ಯುದ್ಧ ಸ್ಮಾರಕದ ಬಳಿ ರಸ್ತೆ ಬದಿಯಲ್ಲಿ ಟಿ 55 ಟ್ಯಾಂಕ್‌ನ್ನು ಗಣ್ಯರು ಲೋಕಾರ್ಪಣೆ ಮಾಡಿದರು. ನಾಲ್ಕು ದಶಕಗಳಿಗೂ ಹೆಚ್ಚ ಕಾಲ ಭಾರತೀಯ ಸೇನೆಯಲ್ಲಿ ಟಿ 55 ಟ್ಯಾಂಕ್‌ ಕಾರ್ಯನಿರ್ವಹಿಸಿದ್ದು, ಸೈನಿಕರ ಹಲವು ಗೆಲುವಿನಲ್ಲಿ ಪಾತ್ರ ವಹಿಸಿತ್ತು. 2011 ರಲ್ಲಿ ಇದರ ಸೇವೆ ಕೊನೆಗೊಂಡಿತ್ತು.ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಕುಮಾರ್‌ ಪುತ್ತೂರು, ಮಾಜಿ ವಿಧಾನ ಪರಿಷತ್‌ ಸದಸ್ಯ ಕ್ಯಾ.ಗಣೇಶ್‌ ಕಾರ್ಣಿಕ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಅನಿಲ್‌ ಭೂಮರೆಡ್ಡಿ, ಮಾಜಿ ಸಚಿವ ನಾಗರಾಜ್‌ ಶೆಟ್ಟಿ, ಶ್ರೀಶಾ ಸೌಹಾರ್ದ ಸೊಸೈಟಿ ಅಧ್ಯಕ್ಷ ಗುರುರಾಜ್‌ ಎಂ., ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರು, ರೋಟರಿ ಜಿಲ್ಲಾ ಗವರ್ನರ್‌ ಸತೀಶ್‌ ಬೋಳಾರ್‌, ರೆಡ್‌ ಕ್ರಾಸ್‌ ಅಧ್ಯಕ್ಷ ಶಾಂತರಾಮ ಶೆಟ್ಟಿ, ಮಾಜಿ ಸೈನಿಕರಾದ ಶರತ್‌ ಭಂಡಾರಿ, ಬ್ರಿಗೆಡಿಯರ್‌ ಐ.ಎನ್‌.ರೈ, ಪ್ರಮುಖರಾದ ಸುಜಯ್‌ ಲೋಬೋ, ಸಂದೀಪ್‌ ಬಂಟ್ವಾಳ, ಸತ್ಯಜಿತ್‌ ಸುರತ್ಕಲ್‌, ಮಾಜಿ ಸೈನಿಕರ ಸಂಘದ ಸದಸ್ಯರು, ಪದಾಧಿಕಾರಿ, ಸಾರ್ವಜನಿಕರು, ಮತ್ತಿತರರು ಇದ್ದರು.

ದ.ಕ.ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಕಾಂತ್‌ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ದೀಪಕ್‌ ವಂದಿಸಿದರು.