ಕಾಂಗ್ರೆಸ್, ಬಿಜೆಪಿ ರೈತರ ಕ್ಷಮೆ ಕೇಳಿ ಪರಿಹಾರ ನೀಡಲಿ: ಮಲ್ಲಿಕಾರ್ಜುನ ಬಳ್ಳಾರಿ

| Published : Feb 10 2024, 01:45 AM IST

ಕಾಂಗ್ರೆಸ್, ಬಿಜೆಪಿ ರೈತರ ಕ್ಷಮೆ ಕೇಳಿ ಪರಿಹಾರ ನೀಡಲಿ: ಮಲ್ಲಿಕಾರ್ಜುನ ಬಳ್ಳಾರಿ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ ಸಮಸ್ಯೆಯನ್ನು ಪರಿಹರಿಸದಿರುವ ಎರಡೂ ಪಕ್ಷಗಳು ಪರಸ್ಪರ ಕಚ್ಚಾಟಕ್ಕೆ ಇಳಿದಿವೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆರೋಪಿಸಿದ್ದಾರೆ. ಕೂಡಲೇ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಬ್ಯಾಡಗಿ: ರೈತರಿಗೆ ಪರಿಹಾರ ನೀಡುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಬ್ಬರಿಗೊಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದು, ನಾಡಿನ ಎಲ್ಲ ರೈತರ ಕ್ಷಮೆ ಕೇಳಬೇಕು. ಕೂಡಲೇ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ಪರಿಹಾರ ನೀಡಬೇಕು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.ಶುಕ್ರವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಹಣವನ್ನು ರೈತರ ಖಾತೆಗೆ ನೀಡಬೇಕು. ಆದರೆ ಈ ವರೆಗೂ ರೈತರ ಖಾತೆಗೆ ಹಣ ಬಂದಿಲ್ಲ. ಅಷ್ಟಕ್ಕೂ ಈ ಮೊದಲು ಹಾಕಿದ್ದ ₹2 ಸಾವಿರವನ್ನು ಮುಖ್ಯಮಂತ್ರಿಗೆ ಮರಳಿಸಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಂಡು ಕೂಡಲೇ ಪ್ರತಿ ಹೆಕ್ಟೇರ್‌ಗೆ ₹25 ಸಾವಿರ ನೀಡುವಂತೆ ಆಗ್ರಹಿಸಿದರು.ತಪ್ಪು ಮುಚ್ಚಿಕೊಳ್ಳಲು ಪ್ರತಿಭಟನೆ: ರೈತರ ಸಮಸ್ಯೆಯನ್ನು ಪರಿಹರಿಸದಿರುವ ಎರಡೂ ಪಕ್ಷಗಳು ಪರಸ್ಪರ ಕಚ್ಚಾಟಕ್ಕೆ ಇಳಿದಿವೆ. ಬಿಜೆಪಿ ಕಚೇರಿ ಎದುರು ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕಚೇರಿ ಎದುರು ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಒಬ್ಬರು ಶ್ವೇತಪತ್ರ ಇನ್ನೊಬ್ಬರು ಕಪ್ಪುಪತ್ರ ಎಂದೆಲ್ಲ ಬಿಡುಗಡೆ ಮಾಡುತ್ತಿದ್ದಾರೆ, ಇದು ಹಾಸ್ಯಾಸ್ಪದ ಸಂಗತಿ ಎಂದರು.ಮಾತನಾಡದ ಜನಪ್ರತಿನಿಧಿಗಳು: ಹಸಿರುಸೇನೆ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ರಾಜ್ಯದ 28 ಸಂಸದರು, ರಾಜ್ಯದ 224 ಶಾಸಕರು ರೈತರ ಪರವಾಗಿ ಮಾತನಾಡುತ್ತಿಲ್ಲ. ರೈತರ ಸಮಸ್ಯೆ ಅವರಿಗೆ ಸಮಸ್ಯೆ ಅಲ್ಲವೇ ಎಂದು ಪ್ರಶ್ನಿಸಿದ ಅವರು, ಇತ್ತೀಚೆಗೆ ಬ್ಯಾಡಗಿ ಪಟ್ಟಣಕ್ಕೆ ಆಗಮಿಸಿದ್ದ ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ ಅವರು ಕೇಂದ್ರದಿಂದ ಬರ ಪರಿಹಾರವನ್ನು ಬಿಡುಗಡೆ ಮಾಡಿದ್ದಾಗಿ ಹೇಳಿದ್ದಾರೆ. ಆದರೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎನ್ನುತ್ತಿದ್ದಾರೆ ಎಂದರು. ರೈತ ಮುಖಂಡರಾದ ಚಿಕ್ಕಪ್ಪ ಛತ್ರದ, ಶಂಕ್ರಪ್ಪ ಮರಗಲ್ಲ ಇನ್ನಿತರರಿದ್ದರು.ಫೆ. 5ರಂದು ಬ್ಯಾಡಗಿಯ ಪಶು ಆಸ್ಪತ್ರೆಯ ವಾಹನಕ್ಕೆ ಸಗಣಿ ಎರಚಿದ ಘಟನೆಗೂ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಗೂ ಯಾವುದೇ ಸಂಬಂಧವಿಲ್ಲ. ನಮ್ಮದೇನಿದ್ದರೂ ವಿಷಯಾಧಾರಿತ ಹೋರಾಟವಾಗಿದ್ದು, ಇಂತಹ ಕ್ಷುಲ್ಲಕ ವಿಚಾರಗಳನ್ನಿಕೊಂಡು ಬೀದಿಗಿಳಿಯವ ಪ್ರಮೇಯವಿಲ್ಲ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದ್ದಾರೆ.