ಸರ್ಕಾರಿ ನೇಮಕಾತಿಯಲ್ಲಿ ಸುಧಾರಣೆ ಅಗತ್ಯ: ಷಡಾಕ್ಷರಿ

| Published : Feb 10 2024, 01:45 AM IST / Updated: Feb 10 2024, 03:32 PM IST

ಸಾರಾಂಶ

ಸರ್ಕಾರಿ ನೇಮಕಾತಿ ಮತ್ತು ಸೇವಾ ನಿಯಮಗಳಲ್ಲಿ ಇನ್ನೂ ಬ್ರಿಟಿಷ್ ಕಾಲದ ಪದ್ಧತಿಗಳನ್ನೇ ಅನುಸರಿಸುತ್ತಿದ್ದು, ಅವುಗಳ ಮಾರ್ಪಾಡುಗೊಳಿಸಿ ಸುಧಾರಣೆ ತರಬೇಕಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹರಿಹರ

ಸರ್ಕಾರಿ ನೇಮಕಾತಿ ಮತ್ತು ಸೇವಾ ನಿಯಮಗಳಲ್ಲಿ ಇನ್ನೂ ಬ್ರಿಟಿಷ್ ಕಾಲದ ಪದ್ಧತಿಗಳನ್ನೇ ಅನುಸರಿಸುತ್ತಿದ್ದು, ಅವುಗಳ ಮಾರ್ಪಾಡುಗೊಳಿಸಿ ಸುಧಾರಣೆ ತರಬೇಕಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅಭಿಪ್ರಾಯಪಟ್ಟರು.

ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ವಾಲ್ಮೀಕಿ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ನೇಮಕಾತಿ ಸರಳ ಮೆರಿಟ್ ಆಧಾರಿತವಾಗಿ ನಡೆಯುತ್ತಿಲ್ಲ, ಸೇವಾ ಸವಲತ್ತುಗಳ, ಸೇವಾ ಸೌಲಭ್ಯಗಳ ನಿಯಮಗಳ ಸರಳೀಕರಣಗೊಳಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕಿದೆ ಎಂದರು.

ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ನೌಕರರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳದೆ ನೌಕರರಿಂದ ಉತ್ತಮ ಆಡಳಿತ ನಿರೀಕ್ಷಿಸುವುದು ಸರಿಯಲ್ಲ. ರಾಜ್ಯದಲ್ಲಿ ೭.೫೦,೦೦೦ ಲಕ್ಷ ಅನುಮೋದಿತ ಹುದ್ದೆಗಳಿದ್ದು, ಅವುಗಳಲ್ಲಿ ೫.೧೦ ಲಕ್ಷ ಮಾತ್ರ ಭರ್ತಿಯಾಗಿವೆ, ೨.೬೦.೦೦೦ಲಕ್ಷ ಹುದ್ದೆಗಳು ಇಂದಿಗೂ ಖಾಲಿ ಇವೆ. ಈ ಹುದ್ದೆಗಳ ಭರ್ತಿ ಮಾಡಿಕೊಂಡರೆ ಮಾತ್ರ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಸಾಧ್ಯ. 

ಇಷ್ಟೊಂದು ಖಾಲಿ ಹುದ್ದೆಗಳಿದ್ದರೂ, ಸರ್ಕಾರಿ ನೌಕರರ ಮೇಲೆ ಅತೀವ ಕಾರ್ಯಭಾರ, ಮಾನಸಿಕ ಒತ್ತಡ ಇದ್ದರೂ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ದೇಶದಲ್ಲಿಯೇ ಕರ್ನಾಟಕ ಅಭಿವೃದ್ಧಿಯಲ್ಲಿ ೬ನೇ ಸ್ಥಾನ ಪಡೆದಿರುವುದು, ತೆರಿಗೆ ಸಂಗ್ರಹದಲ್ಲಿ ೨ ಸ್ಥಾನ ಪಡೆದಿರುವುದೇ ಇದಕ್ಕೆ ಸಾಕ್ಷಿ ಎಂದರು.

ಶಿಕ್ಷಣದಿಂದ ಸಮಾಜದಲ್ಲಿ ಕ್ರಾಂತಿ: ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಐಜಿ ರವಿ ಡಿ. ಚೆನ್ನಣ್ಣನವರ್ ಮಾತನಾಡಿ, ಬಡತನ ಎನ್ನುವುದು ಸಮಾಜದ ನಿಜವಾದ ರೋಗವಲ್ಲ ಅದು ರೋಗ ಲಕ್ಷಣ ಮಾತ್ರ ನಿಜವಾದ ರೋಗವೆಂದರೆ ಅಧಿಕಾರದಾಹ, ಅಸಮಾನತೆ, ಕುತಂತ್ರ, ಷಡ್ಯಂತ್ರ ಇವು ನಿಜವಾದ ರೋಗವಾಗಿವೆ ಎಂದರು.

ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಕ್ರಾಂತಿ ತರಲು ಸಾಧ್ಯ. ನಮ್ಮ ಪೂರ್ವಜರ ಆದರ್ಶಗಳು ಪುಸ್ತಕಕ್ಕೆ ಮಾತ್ರ ಸೀಮಿತವಾಗಿರದೇ ಬದುಕಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಜಾತ್ರೆಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದರು.

ಸಮಾಜ ಆರ್ಥಿಕವಾಗಿ ಸದೃಢವಾಗದ ಹೊರತು ಅಭಿವೃದ್ಧಿ ಸಾಧ್ಯವಿಲ್ಲ, ಮೀಸಲಾತಿ ಸೌಲಭ್ಯದಲ್ಲಿ ಸರ್ಕಾರಿ ಸೇವೆ ಪಡೆದ ವ್ಯಕ್ತಿ ಕೇವಲ ಮನೆಗೆ ಸೀಮಿತವಾಗಿರದೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಮನೆಯ ಬೆಳಕದಾಗ ಮಾತ್ರ ಅಂಬೇಡ್ಕರ್ ಕಂಡ ಕನಸು ನನಸಾಗುತ್ತದೆ ಎಂದರು.

ದಾವಣಗೆರೆ ವಾಣಿಜ್ಯ ತೆರಿಗೆ ಉಪ ಅಯುಕ್ತ ಮಂಜುನಾಥ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು, ಪೀಠಾಧಿಪತಿ ಪ್ರಸನ್ನಾನಂದ ಶ್ರೀಗಳು ಸಾನಿಧ್ಯ ವಹಿಸಿದ್ದರು. 

ಎಸ್‌ಟಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎ.ಸಿ ತಿಪ್ಪೇಸ್ವಾಮಿ, ಬೆಳಗಾವಿ ಆಬಕಾರಿ ಆಯುಕ್ತಡಾ.ವೈ.ಮಂಜುನಾಥ್, ಉದಯ್‌ಕುಮಾರ್, ರಾಜಶೇಖರ್, ನಿವೃತ್ತ ಡಿವೈಎಸ್‌ಪಿ ಪಂಪಾಪತಿ ಶಂಕರ ಜಾಲಿವಾಳ, ತಾರನಾಥ ಇತರರಿದ್ದರು.

ಸರ್ಕಾರಗಳು ಕಾಲಕಾಲಕ್ಕೆ ಖಾಲಿ ಹುದ್ದೆಗಳ ನೇಮಕಾತಿ ಮಾಡದ ಪರಿಣಾಮ ನೌಕರರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು ಅನೇಕ ಅನಾಹುತಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ನೇಮಕವಾಗುವ ನೌಕರರಿಗೆ ಕನಿಷ್ಠ ಉತ್ತಮ ತರಬೇತಿಯೂ ಸಿಗುತ್ತಿಲ್ಲ. ಇದರಿಂದ ಗುಣಮಟ್ಟದ ತರಬೇತಿ ನಿಯಮಗಳ ಜಾರಿಗೊಳಿಸಬೇಕು. ಷಡಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ