ನ್ಯಾಯಾಂಗ ವ್ಯವಸ್ಥೆ ಜನರಿಗೆ ಹತ್ತಿರವಾಗಲಿ

| Published : Oct 09 2023, 12:45 AM IST

ನ್ಯಾಯಾಂಗ ವ್ಯವಸ್ಥೆ ಜನರಿಗೆ ಹತ್ತಿರವಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾನ್ಯರು ಸೇರಿದಂತೆ ಪ್ರತಿಯೊಬ್ಬರಿಗೂ ನ್ಯಾಯಾಂಗ ವ್ಯವಸ್ಥೆ ಹತ್ತಿರವಾಗಬೇಕು. ನ್ಯಾಯ ಸಿಗುವ ವಿಶ್ವಾಸ ಮೂಡಿಸಬೇಕು ಎಂದು ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅಭಿಪ್ರಾಯಪಟ್ಟಿದ್ದಾರೆ.

ಕೊಪ್ಪಳ: ಸಾಮಾನ್ಯರು ಸೇರಿದಂತೆ ಪ್ರತಿಯೊಬ್ಬರಿಗೂ ನ್ಯಾಯಾಂಗ ವ್ಯವಸ್ಥೆ ಹತ್ತಿರವಾಗಬೇಕು. ನ್ಯಾಯ ಸಿಗುವ ವಿಶ್ವಾಸ ಮೂಡಿಸಬೇಕು ಎಂದು ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅಭಿಪ್ರಾಯಪಟ್ಟಿದ್ದಾರೆ.ಸಾರ್ವಜನಿಕ ಆಡಳಿತದಲ್ಲಿ ಲೋಕಾಯುಕ್ತ ಸಂಸ್ಥೆ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಪಾತ್ರ ವಿಷಯದ ಕುರಿತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಲೋಕಾಯುಕ್ತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆಗಳ ಆಶ್ರಯದಲ್ಲಿ ಜಿಲ್ಲೆಯ ನ್ಯಾಯಾಧೀಶರಿಗೆ ಕಾನೂನು ಸಾಕ್ಷರತಾ ಕಾರ್ಯಕ್ರಮ ಭಾಗವಹಿಸಿ ಅವರು ಮಾತನಾಡಿದರು.ನ್ಯಾಯಾಧೀಶ ಪಾತ್ರ, ಕರ್ತವ್ಯ ಏನು? ಎಂಬುದರ ಬಗ್ಗೆ ನ್ಯಾಯಾಧೀಶರು ಅರಿಯಬೇಕು. ಈಗ ಹೋಬಳಿಯಲ್ಲಿ ಸಹ ನ್ಯಾಯಾಲಯಗಳು ಸ್ಥಾಪನೆಯಾಗಿವೆ. ನ್ಯಾಯಾಲಯಗಳ ಸಂಖ್ಯೆ ಹೆಚ್ಚುತ್ತಿವೆ. ನ್ಯಾಯಾಂಗ ವ್ಯವಸ್ಥೆ ಜನರಿಗೆ ಹತ್ತಿರವಾಗಬೇಕು. ನಮ್ಮ ಸಮಸ್ಯೆ ನ್ಯಾಯಾಲಯ ಕೇಳುತ್ತದೆ ಎನ್ನುವ ನಂಬಿಕೆ ಜನರಲ್ಲಿ ಬರುವ ಹಾಗೆ ಕೆಲಸ ಮಾಡಬೇಕು. ತಪ್ಪಿತಸ್ಥರನ್ನು ವಾಚ್ ಮಾಡುವ ಸಂಸ್ಥೆಯಿದೆ ಎನ್ನುವ ಭಾವ ಜನರಲ್ಲಿ ಬರುವ ಹಾಗೆ ನ್ಯಾಯಾಂಗ ಇಲಾಖೆಯು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಉಚ್ಚ ನ್ಯಾಯಾಲಯವು ಲೋಕಾಯುಕ್ತ ಸಂಸ್ಥೆ ಜೊತೆಗೆ ಇದೆ ಎಂಬುದು ಹೆಮ್ಮೆಯ ಸಂಗತಿ. ಲೋಕಾಯುಕ್ತ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಈ ಎರಡೂ ಸಂಸ್ಥೆಗಳ ವಿಚಾರಗಳು ಸಮ್ಮಿಳಿತವಾಗಿವೆ. ಹೀಗಾಗಿ ಎರಡೂ ಸಂಸ್ಥೆಗಳು ಸೇರಿ ಕೆಲಸ ಮಾಡಿದಲ್ಲಿ ಇನ್ನೂ ಹೆಚ್ಚಿನ ಜನಸೇವೆ ಮಾಡಲು ಸಾಧ್ಯವಾಗಲಿದೆ ಎಂದರು.ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು. ಎಲ್ಲರೂ ಗೌರವಯುತವಾಗಿ ಬದುಕಬೇಕು ಎಂಬುದನ್ನು ಸಂವಿಧಾನವು ಹೇಳುತ್ತದೆ. ರಾಷ್ಟ್ರದಲ್ಲಿರುವ ವ್ಯಕ್ತಿಗಳ ಉತ್ತಮ ಜೀವನ ಮಾಡಬೇಕು ಎಂದು ಸರ್ಕಾರಗಳು ಹಲವಾರು ಯೋಜನೆಗಳನ್ನ ಜಾರಿ ಮಾಡುತ್ತವೆ. ಸಂವಿಧಾನದ ಆಶೋತ್ತರಗಳನುಸಾರ ರೂಪಿಸಿರುವ ಕಾನೂನುಗಳ ಅನುಸಾರ ನ್ಯಾಯಾಧೀಶರು ಕಾರ್ಯತತ್ಪರರಾಗಿ ಜನರಿಗೆ ಸಹಾಯ ಮಾಡಬೇಕು ಎಂದು ಸಲಹೆ ಮಾಡಿದರು.ಹಳ್ಳಿ-ಹಳ್ಳಿಗಳಲ್ಲಿರುವ ಜನರಿಗೆ ಲೋಕಾಯುಕ್ತ ಕಾಯ್ದೆಯ ಬಗ್ಗೆ ತಿಳಿಸಬೇಕು. ಈ ಬಗ್ಗೆ ಆಯಾ ತಾಲೂಕುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಲೋಕಾಯುಕ್ತ ಕಾಯ್ದೆಯಡಿ ಏನು ಸಹಾಯ ಪಡೆಬಹುದು ಎಂಬುದರ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕು. ಲಂಚ ನಿಷೇಧ ಕಾಯಿದೆ ಮತ್ತು ಲೋಕಾಯುಕ್ತ ಕಾಯಿದೆ ಬಗ್ಗೆ ಜಿಲ್ಲೆಯ ಪ್ರತಿಯೊಂದು ಕಾಲೇಜುಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಉಪ ಲೋಕಾಯುಕ್ತರು ಆಯಾ ತಾಲೂಕುಗಳ ನ್ಯಾಯಾಧೀಶರಿಗೆ ಸಲಹೆ ನೀಡಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಸ್ವಾಗತಿಸಿದರು.ಸಮಾರಂಭದಲ್ಲಿ ಹೈಕೋರ್ಟಿನ ನ್ಯಾ.ವಿ.ಶ್ರೀಶಾನಂದ, ಲೋಕಾಯುಕ್ತ ಬೆಂಗಳೂರಿನ ವಿಚಾರಣೆಯ ಉಪ ನಿಬಂಧಕ ಎಂ.ವಿ. ಚೆನ್ನಕೇಶವ ರೆಡ್ಡಿ, ಹೆಚ್ಚುವರಿ ನಿಬಂಧಕ ಸುದೇಶ ರಾಜಾರಾಂ ಪರದೇಶಿ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪ್ರಹ್ಲಾದ್‌ರಾವ್ ಮುತಾಲಿಕ್ ಪಾಟೀಲ, ಲೋಕಾಯುಕ್ತ ರಾಯಚೂರಿನ ಪೊಲೀಸ್ ಅಧೀಕ್ಷಕ ಡಾ.ರಾಮ್ ಲಕ್ಷ್ಮಣ ಅರಸಿದ್ದಿ, ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ, ಕೊಪ್ಪಳ ಲೋಕಾಯುಕ್ತ ಕಚೇರಿಯ ಉಪಾಧೀಕ್ಷಕ ಸಲಿಂ ಪಾಶಾ, ಜಿಲ್ಲಾ ಪೊಲೀಸ್ ಉಪಾಧೀಕ್ಷಕ ಶರಣಬಸಪ್ಪ ಸುಬೇಧಾರ ಇದ್ದರು.ನ್ಯಾಯಾಧೀಶರಾದ ಸದಾನಂದ ನಾಯಕ ಗೌರವಾನ್ವಿತ ಉಪ ಲೋಕಾಯುಕ್ತರ ಪರಿಚಯ ಮಾಡಿದರು. ನ್ಯಾಯಾಧೀಶೆ ಶ್ರೀದೇವಿ ದರಬಾರೆ ನಿರೂಪಿಸಿದರು. ನ್ಯಾಯಾಧೀಶ ಯಲಬುರ್ಗಾದ ವಿಜಯಕುಮಾರ ಕುನ್ನೂರ ವಂದಿಸಿದರು.ಸಮಾರಂಭದಲ್ಲಿ ಕುಷ್ಟಗಿ, ಗಂಗಾವತಿ ಸೇರಿದಂತೆ ವಿವಿಧ ತಾಲೂಕುಗಳು ನ್ಯಾಯಾಧೀಶರು, ರಾಯಚೂರು ಮತ್ತು ಕೊಪ್ಪಳ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ಇದ್ದರು. ಕಲಾವಿದ ಶಂಕ್ರಯ್ಯ ಪ್ರಾರ್ಥಿಸಿದರು. ಸಂತೋಷ ಚಿತ್ರಗಾರ ಕಿನ್ನಾಳ ಕಲೆಯ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.