ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಸ್ಥಳೀಯ ನವನಗರದ ಪಂಚಾಕ್ಷರಿ ನಗರ ಹಾಗೂ ಅಶೋಕನಗರದ ಬ್ರಿಡ್ಜ್ ಬಳಿ ಕಳೆದ 21 ದಿನಗಳಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ಅದ್ಧೂರಿ ವಿಸರ್ಜನಾ ಮೆರವಣಿಗೆ ಭಾನುವಾರ ಸಂಜೆ ಜರುಗಿತು.ನವನಗರದಲ್ಲಿ ಹು-ಧಾ ಹಿಂದು ಮಹಾಗಣಪತಿ ಉತ್ಸವ ಮಂಡಳಿ ನವನಗರ, ಅಪ್ಪಾಜಿ ಸೇವಾ ಟ್ರಸ್ಟ್ ಹಾಗೂ ನವಶಕ್ತಿ ಮಹಿಳಾ ಮಂಡಳ ಆಶ್ರಯದಲ್ಲಿ ಕಳೆದ ಸೆ. 18ರಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಅಂದಿನಿಂದ ಸುಮಾರು 20 ದಿನಗಳ ವರೆಗೆ ವಿಶೇಷ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಅ. 7ರ ಶನಿವಾರ ರಾತ್ರಿ ಗಣಪತಿ ಪ್ರತಿಷ್ಠಾಪನೆಯಲ್ಲಿ ಸಹಕಾರಿ ನೀಡಿದ ದಾನಿಗಳ ಸನ್ಮಾನ ಹಾಗೂ ಚಲನಚಿತ್ರದ ವಿವಿಧ ಜ್ಯೂನಿಯರ್‌ಗಳಿಂದ ರಸಮಂಜರಿ ಕಾರ್ಯಕ್ರಮ ನೆರವೇರಿತು. ಭಾನುವಾರ ಬೆಳಗ್ಗೆ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಮೂರ್ತಿಗೆ ಬಳಸಲಾಗಿದ್ದ ವಸ್ತುಗಳ ಹರಾಜು ನೆರವೇರಿತು.ಇಲ್ಲಿನ ಅಶೋಕನಗರದ ಬ್ರಿಡ್ಜ್ ಬಳಿ ಕಳೆದ ಸೆ. 18ರಂದು ಪ್ರತಿಷ್ಠಾಪಿಸಲಾಗಿದ್ದ ಹುಬ್ಬಳ್ಳಿ ಹಿಂದೂ ಮಹಾ ಗಣಪತಿಯ ವಿಸರ್ಜನಾ ಮೆರವಣಿಗೆ ಭಾನುವಾರ ಜರುಗಿತು. ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಪಾಲಿಕೆ ಸದಸ್ಯರು ಪಾಲ್ಗೊಂಡು ಮೆರವಣಿಗೆಗೆ ಮೆರಗು ತಂದರು. ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ ಕೇಸರಿ ಬಾವುಟ ಹಿಡಿದು ಸಂಭ್ರಮಿಸಿದರು.
ಮಧ್ಯಾಹ್ನ 3 ಗಂಟೆಯಿಂದ ಆರಂಭವಾದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಡಿಜೆ ಮೆರಗು ತಂದಿತು. ಬೃಹತ್ ಪ್ರಮಾಣದಲ್ಲಿರಿಸಲಾಗಿದ್ದ ಡಿಜೆಯಿಂದ ಹೊರಸೂಸುತ್ತಿದ್ದ ಹಾಡುಗಳ ಸದ್ದಿಗೆ ಯುವಕರು, ಮಹಿಳೆಯರು ಮಕ್ಕಳಾದಿಯಾಗಿ ಎಲ್ಲರೂ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಈ ವೇಳೆ ಸಾವಿರಾರು ಸಂಖ್ಯೆಯ ಜನರು ಪಾಲ್ಕೊಂಡಿರುವುದು ಕಂಡುಬಂದಿತು.ಪಂಚಾಕ್ಷರಿ ನಗರದ ಮಹಾವೀರ ವೃತ್ತದಿಂದ ಆರಂಭವಾದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯು ಕರ್ನಾಟಕ ವೃತ್ತ, ನವನಗರ ಕ್ಯಾನ್ಸರ್ ಆಸ್ಪತ್ರೆ ರಸ್ತೆ ನಂತರ ಹುಬ್ಬಳ್ಳಿ-ಧಾರವಾಡ ಮುಖ್ಯ ರಸ್ತೆಯ ಮೂಲಕ ಶಾಂತಿನಿಕೇತನ ಬಡಾವಣೆಯ(ಸನಾ ಕಾಲೇಜು ಹತ್ತಿರ) ಬಾವಿಯಲ್ಲಿ ಮೂರ್ತಿಯ ವಿಸರ್ಜನಾ ಕಾರ್ಯಕ್ರಮ ನೆರವೇರಿತು.
ಅಶೋಕ ನಗರದಿಂದ ಆರಂಭಗೊಂಡ ಹುಬ್ಬಳ್ಳಿ ಹಿಂದೂ ಮಹಾ ಗಣಪತಿಯ ಅದ್ಧೂರಿ ವಿಸರ್ಜನಾ ಮೆರವಣಿಗೆಯು ಮುಖ್ಯ ರಸ್ತೆಯ ಮೂಲಕ ಹೊಸೂರಿನಲ್ಲಿರುವ ಗಣೇಶ ಬಾವಿಗೆ ತಂದು ವಿಸರ್ಜಿಸಲಾಯಿತು.9 ಗಂಟೆಗೆ ಡಿಜೆ ಬಂದ್‌ನವನಗರದಲ್ಲಿ ಹು-ಧಾ ಹಿಂದು ಮಹಾಗಣಪತಿ ಉತ್ಸವ ಮಂಡಳಿಯಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣೇಶ ಮೂರ್ತಿಯ ಅದ್ಧೂರಿ ವಿಸರ್ಜನಾ ಮೆರವಣಿಗೆ ವೇಳೆ ರಾತ್ರಿ 9ಗಂಟೆಗೆ ಪೊಲೀಸರು ಡಿಜೆ ಬಂದ್ ಮಾಡಿಸಿದರು.ಈಚೆಗೆ ನಗರದಲ್ಲಿ ನಡೆದ 5, 7, 11ದಿನಗಳ ಗಣೇಶ ಮೂರ್ತಿ ವಿಸರ್ಜನೆಗೆ ರಾತ್ರಿ 10 ಗಂಟೆಯ ವರೆಗೆ ಡಿಜೆ ಬಳಕೆಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರಥಮ ಬಾರಿಗೆ 21ನೇ ದಿನಗಳ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ 7.30ಗಂಟೆಯ ವರೆಗೆ ಡಿಜೆ ಬಳಕೆಗೆ ಪೊಲೀಸರು ಅನುಮತಿ ನೀಡಿದ್ದರು. ನಂತರ ಉತ್ಸವ ಮಂಡಳಿಯ ಮನವಿಯ ಮೇರೆಗೆ 9 ಗಂಟೆಗೆ ವರೆಗೆ ಡಿಜೆ ಬಳಕೆಗೆ ಅವಕಾಶ ಕಲ್ಪಿಸಲಾಯಿತು. 9 ಗಂಟೆಯಾಗುತ್ತಿದ್ದಂತೆ ಪೊಲೀಸರು ಡಿಜೆ ಬಂದ್ ಮಾಡಿಸಿ ಗಣೇಶ ವಿಸರ್ಜನಾ ಮೆರವಣಿಗೆಗೆ ಅನುವು ಮಾಡಿಕೊಟ್ಟರು.
;Resize=(128,128))
;Resize=(128,128))