ಮಾಗಡಿ: ಬಹಿರಂಗ ಚರ್ಚೆಗೂ ಮೊದಲು ಏಪ್ರಿಲ್ 25ರಂದು ತಾಲೂಕಿನ ಚಕ್ರಬಾವಿ ವಿಎಸ್ಎಸ್ಎನ್ ಸಹಕಾರ ಸಂಘದಲ್ಲಿ ಶಾಸಕರ ವಿರುದ್ಧ ನಾನು ಮಾಡಿರುವ ಆರೋಪಗಳ ದಾಖಲಾತಿ ಕೊಡುತ್ತೇನೆ, ಅದನ್ನು ಪರಿಶೀಲಿಸಲಿ ನಂತರ ಬಹಿರಂಗ ಚರ್ಚೆ ಮಾಡೋಣ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು

ಮಾಗಡಿ: ಬಹಿರಂಗ ಚರ್ಚೆಗೂ ಮೊದಲು ಏಪ್ರಿಲ್ 25ರಂದು ತಾಲೂಕಿನ ಚಕ್ರಬಾವಿ ವಿಎಸ್ಎಸ್ಎನ್ ಸಹಕಾರ ಸಂಘದಲ್ಲಿ ಶಾಸಕರ ವಿರುದ್ಧ ನಾನು ಮಾಡಿರುವ ಆರೋಪಗಳ ದಾಖಲಾತಿ ಕೊಡುತ್ತೇನೆ, ಅದನ್ನು ಪರಿಶೀಲಿಸಲಿ ನಂತರ ಬಹಿರಂಗ ಚರ್ಚೆ ಮಾಡೋಣ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಾಡಿರುವ ₹ 600 ಕೋಟಿ‌ ಹಗರಣ, ಕುದೂರು ಬಿಡಿಸಿಸಿ ಬ್ಯಾಂಕ್ ನಲ್ಲಿ ನಕಲಿ ಚಿನ್ನ, ತಾವರೆಕೆರೆಯಲ್ಲಿ ಸುಳ್ಳು ದಾಖಲಾತಿ ಮಾಡಿಸಿಕೊಂಡು ಶಾಸಕರ ಪತ್ನಿ ಹೆಸರಿನಲ್ಲಿ ಜಮೀನು ರಿಜಿಸ್ಟರ್ ಮಾಡಿಸಿಕೊಂಡಿರುವ ಎಲ್ಲಾ ಆರೋಪಗಳ ಬಗ್ಗೆ ನಾನು ಈಗಲೂ ಬದ್ಧನಾಗಿರುವೆ. ಶಾಸಕರು ಮಾಧ್ಯಮಗಳ ಜೊತೆ ಬಹಿರಂಗ ಚರ್ಚೆಗೆ ನನ್ನ ಬಳಿ ದಾಖಲೆ ಇಲ್ಲ, ಮಾಜಿ ಶಾಸಕರೇ ತರಲಿ ಎಂದು ಹೇಳಿಕೆ ಕೊಟ್ಟಿದ್ದಾರೆ, ಈ ಎಲ್ಲಾ ಆರೋಪಗಳ ದಾಖಲಾತಿಗಳನ್ನು ಮಾಧ್ಯಮಗಳ ಮುಖಾಂತರ ಅಥವಾ ರಿಜಿಸ್ಟರ್ ಪೋಸ್ಟ್ ಮುಖಾಂತರ ಕಳಿಸಿಕೊಡುತ್ತೇನೆ. ಶಾಸಕರು ಪರಿಶೀಲಿಸಿ ಆರೋಪ ಸರಿ ಇಲ್ಲ ಎಂದು ತಿಳಿಸಲಿ ನಂತರ ಬಹಿರಂಗ ಸಭೆಗೆ ನಾನೇ ಬರುತ್ತೇನೆ. ಶಾಸಕರಿಗೆ ನಾನು ಸವಾಲು ಹಾಕಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಉತ್ತರ ಕೊಡಲು ಅವರ್ಯಾರು ಅವರು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಅಧ್ಯಕ್ಷರು, ನನಗಲ್ಲ, ನಾನು ಬಾಲಕೃಷ್ಣರವರಿಗೆ ಉತ್ತರ ಕೊಡುತ್ತೇನೆಯೇ ಹೊರತು ಯಾರೋ ಕರೆಯುವ ಬಹಿರಂಗ ಸಭೆಗೆ ನಾನು ಬರುವುದಿಲ್ಲ ಎಂದು ಹೇಳಿದರು.ಚಕ್ರಬಾವಿಯಲ್ಲಿ ಹಿಂದೆ ವಿಧಾನಸಭಾ ಚುನಾವಣೆ ಸಮಯದಲ್ಲಿ ಬ್ಯಾಂಕಿನ ಹಣ ಚುನಾವಣೆಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಆರೋಪ ಮಾಡಿದ್ದೆ. ಅದರ ಬಗ್ಗೆ ಚರ್ಚೆಯಾಗಲಿ, ಚಕ್ರಬಾವಿಯಲ್ಲಿ ಏಕೆ ಮಾಗಡಿ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಶಾಸಕರೆ ಬಹಿರಂಗ ಸಭೆ ಕರೆಯಲಿ, ನಾನು ಅಲ್ಲಿಗೆ ಬರಲು ಸಿದ್ಧನಿದ್ದೇನೆ. ಈ ಆರೋಪಗಳಿಂದ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮತ್ತೊಮ್ಮೆ ಎ.ಮಂಜುನಾಥ್ ಶಾಸಕರ ವಿರುದ್ಧ ಆರೋಪಗಳನ್ನು ಸಮರ್ಥಿಸಿಕೊಂಡರು.

ಪಿಡಬ್ಲ್ಯೂಡಿ ಅಕ್ರಮ: ಮಾಗಡಿ ತಾಲೂಕಿನ ಲೋಕೋಪಯೋಗಿ ಇಲಾಖೆ (PWD) ವ್ಯಾಪ್ತಿಯಲ್ಲಿ ನಡೆದಿರುವ ಹಗರಣಗಳ ಬಗ್ಗೆ ದಾಖಲೆಗಳು ತಮ್ಮ ಬಳಿ ಇವೆ. ಈ ಬಗ್ಗೆ ಈಗಾಗಲೇ ಪೋಸ್ಟ್ ಮೂಲಕ ಶಾಸಕರಿಗೆ ದಾಖಲೆಗಳನ್ನು ರವಾನಿಸಲಾಗಿದೆ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ, ಲೋಕಾಯುಕ್ತ ತನಿಖೆ ಹಾಗೂ ಹೌಸ್ ಕಮಿಟಿ ರಚನೆಯಾಗಿರುವ ಬಗ್ಗೆ ಉಲ್ಲೇಖಿಸಿದ ಅವರು, ಸಿದ್ದರಾಮಯ್ಯನವರ ಸರ್ಕಾರದಲ್ಲೇ ಈ ಬಗ್ಗೆ ವರದಿಗಳಾಗಿವೆ ಸತ್ಯ ಏನೆಂಬುದು ಜನರಿಗೆ ತಿಳಿಯಲಿ ಎಂದು ಮಂಜುನಾಥ್ ಹೇಳಿದರು.

ಕ್ಷೇತ್ರ ಬಿಡುವುದಿಲ್ಲ:

ರಾಜಕೀಯ ಕರ್ಮಭೂಮಿಯಾಗಿರುವ ಮಾಗಡಿ ವಿಧಾನಸಭಾ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ನಾನು ಬಿಡುವುದಿಲ್ಲ. ಕೇಂದ್ರದಲ್ಲಿ ಕ್ಷೇತ್ರ ಮರುವಿಂಗಡನೆ ಮಸೂದೆ ಮಂಡನೆ ಆಗುತ್ತಿದ್ದು, ಒಂದು ವೇಳೆ ಮುಂದಿನ ಚುನಾವಣೆಗೆ ಜಾರಿಯಾದರೆ ಹಾರೋಹಳ್ಳಿ ಕ್ಷೇತ್ರವಾದರೂ ಕೂಡ ನಾನು ಮಾಗಡಿ ವಿಧಾನಸಭಾ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುತ್ತೇನೆ. ಈಗಾಗಲೇ ನಮ್ಮ ವಿರೋಧಿಗಳು ಬಿಡದಿಯಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ ಮತ್ತು ಮಾಗಡಿಯಲ್ಲಿ ಸಕ್ರಿಯರಾಗುತ್ತಿದ್ದಾರೆ ಎಂದು ಗೊಂದಲ ಸೃಷ್ಟಿ ಮಾಡುತ್ತಿದ್ದು ನಾನು ಮಾಗಡಿಯಲ್ಲೇ ಸ್ಪರ್ಧೆ ಮಾಡುತ್ತೇನೆ. ಸೋಲು ಗೆಲುವು ಜನಗಳೇ ತೀರ್ಮಾನಿಸುತ್ತಾರೆ ಎಂದು ಮಾಧ್ಯಮಗಳ ಪ್ರಶ್ನೆಗೆ ಮಾಜಿ ಶಾಸಕರು ಉತ್ತರಿಸಿದರು.

ಸರ್ಕಾರಕ್ಕೆ ಕೋರ್ಟ್ ಚಾಟಿ:

ನೆಲಮಂಗಲ ಶಾಸಕ ಶ್ರೀನಿವಾಸ್ ಅತುರವಾಗಿ ಕ್ಷೇತ್ರ ಮರು ವಿಂಗಡಣೆಯಾದರೆ ಸೋಲೂರು ಯಾವ ತಾಲೂಕಿನಲ್ಲಿ ಇರಬೇಕು, ಅದೇ ತಾಲೂಕಿಗೆ ಉಳಿಸಲಾಗುತ್ತಿತ್ತು. ಆತುರವಾಗಿ ಅವರು ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರಿಸಿದ್ದು ಈಗ ಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದೆ. ಸೋಲೂರು ಹೋಬಳಿ ವಿಚಾರವಾಗಿ ಮತ್ತೆ ಮುನ್ನೆಲೆಗೆ ಬಂದಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿಯಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜೆಡಿಎಸ್ ಮುಖಂಡರು ಹಾಜರಿದ್ದರು.