ಬಡವರಿಗೂ ಸಿಎಂ ಪರಿಹಾರ ನಿಧಿ ಸಿಗವಂತಾಗಲಿ

| Published : Nov 19 2024, 12:50 AM IST

ಸಾರಾಂಶ

ವೈದ್ಯಕೀಯ ನೆರವು ಕೋರಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಿದಾಗ ಅರ್ಜಿಗಳು ತಿರಸ್ಕೃತಗೊಂಡ ಬಡವರು ವೈದ್ಯಕೀಯ ನೆರವಿನಿಂದ ವಂಚಿತರಾಗುತ್ತಿದ್ದಾರೆ ಎಂದು ಮಲೆನಾಡು ಕರಾವಳಿ ಒಕ್ಕೂಟ ರಾಜ್ಯ ಪ್ರಧಾನ ಸಂಚಾಲಕರು ಅನಿಲ್ ಹೊಸಕೊಪ್ಪ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪ

ವೈದ್ಯಕೀಯ ನೆರವು ಕೋರಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಿದಾಗ ಅರ್ಜಿಗಳು ತಿರಸ್ಕೃತಗೊಂಡ ಬಡವರು ವೈದ್ಯಕೀಯ ನೆರವಿನಿಂದ ವಂಚಿತರಾಗುತ್ತಿದ್ದಾರೆ ಎಂದು ಮಲೆನಾಡು ಕರಾವಳಿ ಒಕ್ಕೂಟ ರಾಜ್ಯ ಪ್ರಧಾನ ಸಂಚಾಲಕರು ಅನಿಲ್ ಹೊಸಕೊಪ್ಪ ತಿಳಿಸಿದ್ದಾರೆ.ಸೋಮವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಮಲೆನಾಡು-ಕರಾವಳಿ ಹಾಗೂ ಇತರೆ ಭಾಗದ ನೆಲವಾಸಿಗಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ವೈದ್ಯಕೀಯ ನೆರವು ಕೋರಿ ಅರ್ಜಿ ಸಲ್ಲಿಸುತ್ತಿದ್ದು, ಬಹುತೇಕ ಅರ್ಜಿಗಳು ತಿರಸ್ಕೃತವಾಗುತ್ತಿವೆ. ನಿಜವಾಗಿಯೂ ಬಡವರಿಗೆ ಸಲ್ಲಬೇಕಾದ ಸಹಾಯ ತಲುಪುತ್ತಿಲ್ಲ. ಹಳ್ಳಿಗಾಡು ಪ್ರದೇಶಗಳಲ್ಲಿ, ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸಮಸ್ಯೆಯಾದಾಗ ಜನ ಸ್ಥಳೀಯ ಆಸ್ಪತ್ರೆಗೆ ಹೋಗುತ್ತಾರೆ. ಒಂದೆರಡು ದಿನಗಳ ಬಳಿಕ ಇಲ್ಲಿ ಚಿಕಿತ್ಸೆ ಸಿಗುವುದಿಲ್ಲ. ದೊಡ್ಡ ಆಸ್ಪತ್ರೆಗಳಿಗೆ ಹೋಗಿ, ಬೇರೆ ಕಡೆ ತೋರಿಸಿ ಎನ್ನುತ್ತಾರೆ ಎಂದು ದೂರಿದರು.

ಆಯುಷ್ಮಾನ್ ಅಥವಾ ಬೇರೆ ಬಿ.ಪಿ.ಎಲ್ ಕಾರ್ಡ್ಗಳ ಮೂಲಕ ಸ್ವಲ್ಪ ಹಣ ಜಮೆ ಆಗಿರುತ್ತದೆ. ಗ್ರಾಮೀಣ ಭಾಗದ ಜನ ಚಿಕಿತ್ಸೆಗಾಗಿ ನಗರ ಪ್ರದೇಶದ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಅಲ್ಲಿ 15ರಿಂದ 20 ದಿನಗಳವರೆಗೆ ಆಸ್ಪತ್ರೆಗಳಲ್ಲಿ ಇದ್ದು, ಲಕ್ಷಗಟ್ಟಲೆ ಹಣ ಕಟ್ಟಿ ನಂತರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಜಿ ಕೊಟ್ಟರೆ ಈಗಾಗಲೇ ನಿಮಗೆ ಆಯುಷ್ಮಾನ್ ಅಥವಾ ಬಿ.ಪಿ.ಎಲ್ ಸೌಲಭ್ಯದಿಂದ 5 ಸಾವಿರ ಡ್ರಾ ಆಗಿದೆ. ಹಾಗಾಗಿ ಈ ಬಿಲ್ ನೀಡಲು ಬರುವುದಿಲ್ಲ ಎಂದು ತಿರಸ್ಕರಿಸುತ್ತಾರೆ ಎಂದು ಮಾಹಿತಿ ನೀಡಿದರು.

ಅಮಾಯಕ ಜನರಿಗೆ ಯಾವ ರೀತಿ ವೈದ್ಯಕೀಯ ನೆರವು ಪಡೆಯಬೇಕು, ಅರ್ಜಿಗಳನ್ನು ಹೇಗೆ ಸಲ್ಲಿಸಬೇಕೆಂಬ ಮಾಹಿತಿ ಇರುವುದಿಲ್ಲ. ಎಷ್ಟೋ ಹಣ ಬಂದರೆ ಸಾಕು ಎಂದು ತಿಳಿದು ಅರ್ಜಿ ಸಲ್ಲಿಸುತ್ತಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಲಕ್ಷಗಟ್ಟಲೆ ವೆಚ್ಚವಾಗಿರುತ್ತದೆ. ಇದರಿಂದ ಬಡವರಿಗೆ ನಿರಂತರ ಅನ್ಯಾಯವಾಗುತ್ತಿದೆ. ಸಣ್ಣ ಸಣ್ಣ ಕಾರಣಗಳನ್ನು ಮುಂದಿಟ್ಟು ಬಡ ಜನರ ಅರ್ಜಿಗಳನ್ನು ತಿರಸ್ಕರಿಸಿದರೆ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲವೇನೋ? ಮುಖ್ಯಮಂತ್ರಿಗಳ ಪರಿಹಾರ ನಿಧಿ ಬರಿದಾಗಿದೆಯೋ? ಎಂಬ ಭಾವನೆ ಜನರಲ್ಲಿ ಮೂಡುತ್ತದೆ ಎಂದರು.

ಹಾಗಾಗಿ ದಯವಿಟ್ಟು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಲಕ್ಷ ಬಿಲ್‌ಗೆ ಎಷ್ಟು ಬರುತ್ತೋ ಅದರಲ್ಲಿ ಮೊದಲ ಆಸ್ಪತ್ರೆಗಳಲ್ಲಿ ನೀಡಿದ ಕಡಿಮೆ ಮೊತ್ತವನ್ನು ಅಂದರೆ 5 ಸಾವಿರ ಕಡಿತಗೊಳಿಸಿಕೊಂಡು ಉಳಿದ ಹಣವನ್ನು ಬಡವರ ಚಿಕಿತ್ಸೆಗಾಗಿ ಬಿಡುಗಡೆ ಮಾಡಿ ಬಡವರಿಗೆ ಹೆಚ್ಚಿನ ಪರಿಹಾರ ನೀಡುವ ಮೂಲಕ ಸಹಾಯ ಮಾಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಮಲೆನಾಡು ಕರಾವಳಿ ಒಕ್ಕೂಟ ಆಗ್ರಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ.