ಬೆಳ್ತಂಗಡಿ: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮೂರು ಕಡೆಗಳಲ್ಲಿ ನಡೆಯುವ ಗೌರವ ಸನ್ಮಾನ ಸಮಾರಂಭಕ್ಕೆ ಭಾನುವಾರ ಬೆಳಗ್ಗೆ ಅಳದಂಗಡಿ ಸ್ವರಾಜ್ ಟವರ್ಸ್ ನಲ್ಲಿ ಚಾಲನೆ ನೀಡಲಾಯಿತು.

ಶಾಸಕ ಹರೀಶ್ ಪೂಂಜ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳೇ ಭವಿಷ್ಯದ ಉಜ್ವಲ ಭಾರತವನ್ನು ಮುನ್ನಡೆಸುವ ಪ್ರತಿನಿಧಿಗಳು. ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ. ಈ ಗೌರವ ಇನ್ನುಳಿದ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು. ಪೂಂಜ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಹಾಶಕ್ತಿ ಕೇಂದ್ರಗಳ ವ್ಯಾಪ್ತಿಯ ಗ್ರಾಮಗಳನ್ನು ಆಧರಿಸಿ ಮೂರು ಪ್ರತ್ಯೇಕ ಸಮಯ ಹಾಗೂ ಸ್ಥಳಗಳಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.

ದೈಹಿಕ ಶಿಕ್ಷಣದ ಶಿಕ್ಷಕ ಅಜಿತ್ ಕುಮಾ‌ರ್ ಕೊಕ್ರಾಡಿ, ಬಿಜೆಪಿ ಪ್ರಭಾರಿ ಜಯಂತ್ ಕೋಟ್ಯಾನ್, ಸುಲ್ಕೇರಿ ಶ್ರೀರಾಮ ಶಾಲೆಯ ಗೌರವಾಧ್ಯಕ್ಷ ಗಣೇಶ ಹೆಗ್ಡೆ, ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್‌ ಪಾರೆಂಕಿ ಮತ್ತಿತರರಿದ್ದರು.