ಸಾರಾಂಶ
ಪ್ರತಿಯೊಂದು ಮಗುವಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವುದು ಸರ್ಕಾರದ ಪ್ರಮುಖ ಧ್ಯೇಯವಾಗಿದೆ. ಆದ್ದರಿಂದ ನಾವೆಲ್ಲರೂ ಸರ್ಕಾರದ ಮಾಗದರ್ಶನದಂತೆ ಕಾರ್ಯ ನಿರ್ವಹಿಸಬೇಕು ಎಂದು ಬಿಇಓ ಜಿಎಂ ಮುಂದಿನಮನಿ ಹೇಳಿದರು.
ಲಕ್ಷ್ಮೇಶ್ವರ: ಪ್ರತಿಯೊಂದು ಮಗುವಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವುದು ಸರ್ಕಾರದ ಪ್ರಮುಖ ಧ್ಯೇಯವಾಗಿದೆ. ಆದ್ದರಿಂದ ನಾವೆಲ್ಲರೂ ಸರ್ಕಾರದ ಮಾಗದರ್ಶನದಂತೆ ಕಾರ್ಯ ನಿರ್ವಹಿಸಬೇಕು ಎಂದು ಬಿಇಓ ಜಿ.ಎಂ.ಮುಂದಿನಮನಿ ಹೇಳಿದರು.
ಪಟ್ಟಣದ ಉಮಾ ವಿದ್ಯಾಲಯದಲ್ಲಿ ಬುಧವಾರ ನಡೆದ ಮುಖ್ಯೋಪಾಧ್ಯಾಯರ ಸಭೆಯನ್ನುದ್ದೇಶಿಸಿ ಮಾತನಾಡಿದರು.ಶಾಲೆಗೆ ಆಗಮಿಸುವ ಪ್ರತಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಅವರ ಬೆಳವಣಿಗೆಯಲ್ಲಿ ಶಿಕ್ಷಣದ ಮಹತ್ವ ತಿಳಿಸಿಕೊಡುವ ಕಾರ್ಯ ನಾವು ಮಾಡುವುದು ಅಗತ್ಯವಾಗಿದೆ. ಸರ್ಕಾರ ಗುಣಮಟ್ಟದ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಯಾವ ಯಾವ ಮಾನದಂಡ ಅನುಸರಿಸಬೇಕು ಎನ್ನುವ ನಿರ್ದೇಶನ ನೀಡಿದೆಯೋ ಆ ಎಲ್ಲ ನಿರ್ದೇಶನಗಳನ್ನು ಚಾಚೂ ತಪ್ಪದೆ ಪಾಲಿಸುವುದು ಮುಖ್ಯೋಪಾಧ್ಯಾಯರ ಕರ್ತವ್ಯವಾಗಿದೆ ಎಂದು ಹೇಳಿದರು.
ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಿ.ಎಸ್. ಹರ್ಲಾಪೂರ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಾರ್ಯದಲ್ಲಿ ನಾವೆಲ್ಲ ಪ್ರಾಮಾಣಿಕವಾಗಿ ತೊಡಗಿಕೊಳ್ಳುವುದು ಅಗತ್ಯವಾಗಿದೆ. ಸರ್ಕಾರದಿಂದ ಶಿಕ್ಷಕರಿಗೆ ದೊರೆಯಬೇಕಾದ ಸೌಲಭ್ಯ ನಿಮಗೆ ತಲುಪಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರು ನೇಕಾರ ಮಾತನಾಡಿ, ಸರ್ಕಾರ ನೀಡುವ ಸೂಚನೆ ತಪ್ಪದೆ ಅನುಸರಿಸುವ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವ ಕಾರ್ಯ ಮಾಡುವ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೌಲಭ್ಯ ಅವರಿಗೆ ತಲುಪಿಸುವ ಕಾರ್ಯದಲ್ಲಿ ನಾವೆಲ್ಲರು ಪ್ರಾಮಾಣಿಕರಾಗಿ ಕೆಲಸ ಮಾಡೋಣ ಎಂದು ಹೇಳಿದರು.
ಈ ವೇಳೆ ವಿ.ಡಿ. ಹುಲಬಜಾರ, ಎಲ್.ಎನ್ . ನಂದೆಣ್ಣವರ, ಎಂ.ಎ. ನದಾಫ್, ಎಂ.ಎಸ್. ಹಿರೇಮಠ, ಹರೀಶ ಸೇಂದ್ರಗಯಾ, ಸತೀಶ್ ಬೊಮಲೆ, ಉಮೇಶ ನೇಕಾರ, ಗಿರೀಶ ನೇಕಾರ, ಜ್ಯೋತಿ ಗಾಯಕವಾಡ, ಜಿ.ಆರ್. ಪಾಟೀಲ, ಶಿವಾನಂದ ಅಸುಂಡಿ, ಆರ್.ಎಫ್. ದೊಡ್ಡಮನಿ, ಬಿ.ಎಂ, ಕುಂಬಾರ ಇದ್ದರು.ಈ ವೇಳೆ ವಿಶ್ವ ಹಿಂದಿ ದಿನಾಚರಣೆಯ ಅಂಗವಾಗಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಸ್.ಎಸ್. ನಾಗಲೋಟಿ ಅವರನ್ನು ಸನ್ಮಾನಿಸಲಾಯಿತು.