ತರಬೇತಿ ಪಡೆದು ನೀರಗಂಟಿಗಳು ಕೌಶಲ್ಯಭರಿತರಾಗಲಿ: ಎಸ್.ಬಿ. ಮುಳ್ಳಳ್ಳಿ

| Published : Feb 04 2024, 01:33 AM IST

ತರಬೇತಿ ಪಡೆದು ನೀರಗಂಟಿಗಳು ಕೌಶಲ್ಯಭರಿತರಾಗಲಿ: ಎಸ್.ಬಿ. ಮುಳ್ಳಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಮನೆಗೆ ನೀರನ್ನು ತಲುಪಿಸುವ ಹಾಗೂ ತೊಂದರೆಗಳು ಬರದಂತೆ ಮುಂಜಾಗ್ರತೆ ಕೈಗೊಳ್ಳುವುದು ಪ್ರತಿ ಗ್ರಾಮದ ನೀರುಗಂಟಿಗಳ ಜವಾಬ್ದಾರಿ.

ಹಾವೇರಿ ತಾಲೂಕಿನ ನೀರುಗಂಟಿ, ಪ್ಲಂಬರ್‌ಗಳಿಗೆ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಹಾವೇರಿ

ಪ್ರತಿ ಮನೆಗೆ ನೀರನ್ನು ತಲುಪಿಸುವ ಹಾಗೂ ತೊಂದರೆಗಳು ಬರದಂತೆ ಮುಂಜಾಗ್ರತೆ ಕೈಗೊಳ್ಳುವುದು ಪ್ರತಿ ಗ್ರಾಮದ ನೀರುಗಂಟಿಗಳ ಜವಾಬ್ದಾರಿ. ಆದ್ದರಿಂದ ಎಲ್ಲಾ ನೀರುಗಂಟಿ ಹಾಗೂ ಪ್ಲಂಬರ್‌ಗಳು ತರಬೇತಿಯ ಸದುಪಯೋಗ ಪಡೆದು ಕೌಶಲ್ಯಭರಿತರಾಗಬೇಕು ಎಂದು ಜಿಪಂ ಉಪಕಾರ್ಯದರ್ಶಿ ಎಸ್.ಬಿ. ಮುಳ್ಳಳ್ಳಿ ಹೇಳಿದರು.

ನಗರದ ತಾಪಂ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಹಾವೇರಿ ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಹಾವೇರಿ ವಿಭಾಗ ಮತ್ತು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಲೋಕಲ್ ಸೆಲ್ಫ್ ಗೌವರ್ನಮೆಂಟ್ ಆಶ್ರಯದಲ್ಲಿ ಹಾವೇರಿ ತಾಲೂಕಿನ ನೀರುಗಂಟಿ, ಪ್ಲಂಬರ್‌ಗಳಿಗೆ ಏರ್ಪಡಿಸಿದ್ದ ಎರಡು ದಿನಗಳ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಇರುವ ನೀರುಗಂಟಿ ಮತ್ತು ಪ್ಲಂಬರ್‌ಗಳಿಗೆ ಜಲ ಜೀವನ ಮಿಷನ್ ಯೋಜನೆ ನಿರ್ವಹಣೆ ಹಾಗೂ ಮೇಲ್ವಿಚಾರಣೆಯನ್ನು ಕೌಶಲ್ಯಭರಿತವಾಗಿ ಮಾಡಲು ಪ್ರತಿ ತಾಲೂಕು ಕೇಂದ್ರಗಳಲ್ಲಿ ತರಬೇತಿ ಆಯೋಜಿಸಲಾಗಿದೆ. ತರಬೇತಿ ಪಡೆದ ಆನಂತರ ಪ್ರತಿಯೊಬ್ಬ ನೀರುಗಂಟಿ ಉತ್ಸಾಹದಿಂದ ಕಾರ್ಯನಿರ್ವಹಿಸಿ ಗ್ರಾಮಕ್ಕೂ ಹಾಗೂ ಜಿಲ್ಲೆಗೆ ಉತ್ತಮ ಹೆಸರು ತರಬೇಕು ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭರತ ಹೆಗಡೆ ಮಾತನಾಡಿ, ಗ್ರಾಮಮಟ್ಟದಲ್ಲಿ ನೀರುಗಂಟಿಗಳು ತುಂಬಾ ಮುಂದಾಲೋಚನೆಯಿಂದ ೨೪x೭ ಕಾರ್ಯನಿರ್ವಹಿಸಬೇಕು. ನೀವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಗ್ರಾಪಂಗೆ ಒಳ್ಳೆಯ ಹೆಸರು ಬರುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾದ ಮಂಜುನಾಥ ಎನ್.ಎಸ್. ಜಲ ಜೀವನ ಮಿಷನ್ ಯೋಜನೆಯ ಗುರಿ, ಉದ್ದೇಶ, ಘಟಕಾಂಶಗಳ ಕುರಿತು, ಎಂ.ಟಿ. ಓಲೇಕಾರ ನೀರುಗಂಟಿಗಳು ನೀರು ನಿರ್ವಹಣೆ ಮೂಲ ಸೌಕರ್ಯಗಳನ್ನು ಯಾವ ರೀತಿ ನಿರ್ವಹಿಸಬೇಕು ಹಾಗೂ ಮೇಲ್ವಿಚಾರಣೆ ಮಾಡಬೇಕು, ರಿಪೇರಿ ಕೆಲಸಗಳನ್ನು ಯಾವ ರೀತಿ ನಿಯಮಬದ್ಧವಾಗಿ ನಿರ್ವಹಿಸಬೇಕು ಎಂಬ ಕುರಿತು, ಡಾ. ನಾಗಪ್ಪ ನೀರಿನ ಗುಣಮಟ್ಟ ಪರೀಕ್ಷೆ ಕುರಿತು ತರಬೇತಿ ನೀಡಿದರು.

ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ನಡೆಯುವ ಕರ್ಜಗಿ ಗ್ರಾಮಕ್ಕೆ ಕ್ಷೇತ್ರ ಭೇಟಿ ನೀಡಿ ಪೈಪ್‌ಗಳ ಜೋಡಣೆ ನಳ ಜೋಡಣೆ, ಪೈಪ್ ಕಟಿಂಗ್, ಎಲೆಕ್ಟ್ರಿಷಿಯನ್ ಮಷಿನ್ ಬಳಕೆ ಕುರಿತು ಎಂ.ಬಿ. ಓಲೇಕಾರ ಪ್ರಾತ್ಯಕ್ಷಿಕೆ ನೀಡಿದರು. ತರಬೇತಿಯಲ್ಲಿ ಭಾಗವಹಿಸಿದ ಎಲ್ಲ ನೀರುಗಂಟಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.