ಸಾರಾಂಶ
ಕೊಪ್ಪಳ: ನಮ್ಮ ಸಂಸ್ಕೃತಿ, ನಮ್ಮ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಇರಬೇಕು. ಪಕ್ಕದ ತಮಿಳುನಾಡು ನೋಡಿ ನಾವು ಮಾತೃಭಾಷೆಯನ್ನು ಪ್ರೀತಿಸುವುದು ಕಲಿಯಬೇಕು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು.
ಅವರು ಶನಿವಾರ ನಗರದ ಸಾಹಿತ್ಯ ಭವನದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕರ್ನಾಟಕ ಸುವರ್ಣ ಸಂಭ್ರಮ ಕನ್ನಡ ರಾಜೋತ್ಸವ ಹಾಗೂ ಕನ್ನಡ ಸಂಘ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಇತ್ತೀಚೆಗೆ ನಮ್ಮಲ್ಲಿ ಕನ್ನಡ ಭಾಷೆ ಮಾತನಾಡಿದರೆ ನಮಗೆ ಗೌರವ ಸಿಗಲ್ಲ. ಇಂಗ್ಲಿಷ್‌ನಲ್ಲಿ ಮಾತನಾಡಿದರೆ ಗೌರವ ಹೆಚ್ಚುತ್ತದೆ ಎನ್ನುವ ಮಾನಸಿಕ ರೋಗದ ಗೀಳು ನಮಗೆ ಬಂದಿದೆ. ವಿಶ್ವವಿದ್ಯಾಲಯಗಳು ಮಾತೃಭಾಷೆಯಲ್ಲಿಯೆ ಪಠ್ಯಕ್ರಮಗಳನ್ನು ರಚಿಸಿ ಮಕ್ಕಳಿಗೆ ಕಲಿಸುವಂತಾಗಬೇಕು ಮತ್ತು ಈ ಕುರಿತು ವಿಶ್ವವಿದ್ಯಾಲಯಗಳು ಗಂಭೀರ ಚಿಂತನೆ ಮಾಡಬೇಕಿದೆ ಎಂದು ಹೇಳಿದರು.ಕನ್ನಡಕ್ಕೆ ಹರಪ್ಪಾ ಮತ್ತು ಮೊಹೆಂಜೊದಾರೋ ಸಂಸ್ಕೃತಿ ಕಾಲದಿಂದ ಹಿಡಿದು ಇತಿಹಾಸ ಇದೆ. ರಾಜ ಮಹಾರಾಜರು ಕನ್ನಡ ಭಾಷೆಯನ್ನು ತಮ್ಮ ಆಡಳಿತ ಭಾಷೆಯಾಗಿ ಆಳ್ವಿಕೆ ಮಾಡಿದ್ದಾರೆ. ಅಶೋಕನ ಹೆಸರು ಗೊತ್ತಾಗಿರುವುದು ಮಸ್ಕಿ ಶಾಸನದಿಂದ. ಸನ್ನತಿಯಲ್ಲಿಯೂ ಅಶೋಕನ ಕುರಿತು ಮಾಹಿತಿ ದೊರೆಯುತ್ತದೆ. ಕದಂಬ, ಗಂಗರು, ಚಾಲುಕ್ಯ ಸೇರಿದಂತೆ ಹಲವಾರು ರಾಜ ಮನೆತನಗಳು ನಮ್ಮಲ್ಲಿ ಆಳ್ವಿಕೆ ಮಾಡಿವೆ ಎಂದರು.
ನಮ್ಮ ದೇಶಕ್ಕೆ ಸ್ವಾತಂತ್ರ್ಯೆ ಸಿಕ್ಕಮೇಲೆ ಭಾಷಾವಾರು ಪ್ರಾಂತ್ಯಗಳು ರಚನೆಯಾದವು. ಕರ್ನಾಟಕದ ಏಕೀಕರಣಕ್ಕಾಗಿ ಅಂದು ದೊಡ್ಡ ಚಳವಳಿ, ಹೋರಾಟಗಳು ನಡೆದವು. ಹಲವಾರು ಜನರು ಜೈಲಿಗೆ ಹೋಗಿದ್ದರು. ಅವರ ತ್ಯಾಗ-ಬಲಿದಾನಗಳನ್ನು ನಾವು ಸ್ಮರಿಸಬೇಕಿದೆ ಎಂದು ಹೇಳಿದರು.ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಕಲ್ಯಾಣವಾಣಿ ಸುವರ್ಣ ಸಂಭ್ರಮ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಉತ್ತಮ ವಿಶ್ವವಿದ್ಯಾಲಯ ಆಗಲಿ. ಇದರಿಂದ ಈ ಭಾಗದಲ್ಲಿ ಒಳ್ಳೆಯ ಕೆಲಸ ಕಾರ್ಯಗಳು ನಡೆಯಲಿ. ಉತ್ತರ ಕರ್ನಾಟಕದ ಜನರು ಕನ್ನಡ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಶ್ರೇಷ್ಠ ಭಾಷೆ ನಮ್ಮದಾಗಿದೆ. ನಾವೆಲ್ಲರೂ ಮಾತೃಭಾಷೆಗೆ ಆದ್ಯತೆ ನೀಡಬೇಕೆಂದು ಹೇಳಿದರು.
ಕೊಪ್ಪಳ ಸಂಸದ ಕೆ. ರಾಜಶೇಖರ ಹಿಟ್ನಾಳ ಮಾತನಾಡಿ, ಕರ್ನಾಟಕ ಇತಿಹಾಸ ಪ್ರಸಿದ್ಧವಾಗಿದೆ. ಬಸವಣ್ಣನವರು ಜಗತ್ತಿಗೆ ಮೊದಲ ಸಂಸತ್ತನ್ನು ನೀಡಿದ್ದರು. ಇದು ಎಲ್ಲರಿಗೂ ಸಮಾನತೆಯನ್ನು ಸಾರಿದ ನಾಡು ನಮ್ಮದಾಗಿದೆ. ಪಾರ್ಲಿಮೆಂಟ್‌ನಲ್ಲಿ ವಿವಿಧ ರಾಜ್ಯಗಳಿಂದ ಬಂದವರು ತಮ್ಮದೆ ಭಾಷೆಯಲ್ಲಿ ಮಾತನಾಡುವ ಮೂಲಕ ತಮ್ಮ ಮಾತೃಭಾಷೆ ಬಗ್ಗೆ ಅಭಿಮಾನ ತೋರಿಸುತ್ತಾರೆ ಎಂದು ಹೇಳಿದರು.ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊಪ್ಪಳ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಒಂದೂವರೆ ವರ್ಷವಾಗಿದೆ. ಮೈಸೂರು ದಸರಾದಲ್ಲಿ ನಡೆದಂತೆ ಇಲ್ಲಿಯೂ ಕವಿಗೋಷ್ಠಿ ಮಾಡಿದ್ದೇವೆ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಮೇಲೆ ಪ್ರೀತಿ ಇರುವ ಅಪಾರ ಜನರು ಈ ಭಾಗದಲ್ಲಿದ್ದಾರೆ ಎಂದು ಹೇಳಿದರು.
ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಮುನಿರಾಜು ಎಂ., ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಮಾನಸ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ.ವಿ. ನಾಗರಾಜಮೂರ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಂ ಮಾತನಾಡಿದರು.ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಎಸ್.ಎನ್. ರುದ್ರೇಶ್, ಕೊಪ್ಪಳ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಅಮೀನಸಾಬ್, ಕೊಪ್ಪಳ ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವ ಪ್ರೊ. ಕೆ.ವಿ. ಪ್ರಸಾದ ಉಪಸ್ಥಿತರಿದ್ದರು.