ಸಾರಾಂಶ
ಕನ್ನಡಪ್ರಭ ವಾರ್ತೆ ದೇವದುರ್ಗ
ಸ್ಥಳೀಯ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ(ಟಿಎಪಿಸಿಎಂಎಸ್)ದ ಕಚೇರಿ ಕಟ್ಟಡದ ನಿರ್ಮಾಣಕ್ಕಾಗಿ ಅನುದಾನ ಕೋರಲು ಕೆಆರ್ ಡಿಬಿ ಅಧ್ಯಕ್ಷ ಅಜಯಸಿಂಗ್ ಬಳಿ ಕಾರ್ಯಕಾರಿ ಸಮಿತಿ ನಿಯೋಗ ತೆರಳಲು ನಿರ್ಧರಿಸಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಮಾಲಿ ಪಾಟೀಲ್ ಮದರಕಲ್ ತಿಳಿಸಿದರು.ಪಟ್ಟಣದ ಸಂಘದ ಕಚೇರಿಯಲ್ಲಿ ಜರುಗಿದ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಈ ಸಂಘದ ಕಚೇರಿಗೆ ಕಟ್ಟಡದ ಅವಶ್ಯಕತೆ ಇದ್ದು, ಸಹಕಾರ ಸಚಿವ ರಾಜಣ್ಣರವರ ಗಮನಕ್ಕೂ ತರಲಾಗಿದೆ. ಕಚೇರಿ ನಿರ್ಮಾಣದ ಡ್ರಾಯಿಂಗ್ ಹಾಗೂ ಪ್ರಸ್ತಾವನೆಯನ್ನು ಸಿದ್ಧಪಡಿಸಿಕೊಳ್ಳಲಾಗುವುದು ಎಂದರು. ಸಂಘಕ್ಕೆ ಪಟ್ಟಣದ ಹೃದಯ ಭಾಗದಲ್ಲಿ ಬೃಹತ್ ನಿವೇಶನವಿದ್ದು, ಈಗಾಗಲೇ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಲಾಗಿದೆ. ವ್ಯಾಪಾರಿಗಳ ಮನವಿ ಮೇರೆಗೆ ತಿಂಗಳ ಬಾಡಿಗೆ ದರವನ್ನು ಇಳಿಸಿ ಪ್ರೋತ್ಸಾಹಿಸಲಾಗಿದೆ. ಸಂಘದ ನಿವೇಶನ ಸುತ್ತಲೂ ಕಂಪೌಂಡ್ ನಿರ್ಮಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಶರಣಗೌಡ ಮಾಲಿ ಪಾಟೀಲ್ ಮದರಕಲ್ ತಿಳಿಸಿದರು.ಸಭೆಯಲ್ಲಿ ಆರ್ ಡಿ ಸಿಸಿ ಬ್ಯಾಂಕ್ ನಿರ್ದೇಶಕ ಎ. ರಾಜಶೇಖರ ನಾಯಕ ಮಾತನಾಡಿ, ರೈತರಿಗೆ ಅನುಕೂಲವಾಗುವ ಚಟುವಟಿಕೆಗಳನ್ನು ಸಂಘ ನಿರಂತರವಾಗಿ ನಡೆಸಿಕೊಂಡು ಬರುವ ಪರಿಪಾಠ ಮುಂದುವರೆಸಲು ಸಲಹೆ ನೀಡಿದರು.ಈ ಸಂದರ್ಭದಲ್ಲಿ ನಿರ್ದೇಶಕರಾದ ಪ್ರಕಾಶ ಪಾಟೀಲ್ ಮಾತ್ಪಳ್ಳಿ, ಮಲ್ಲಯ್ಯ ಬಿ. ಗಣೇಕಲ್, ಯಲ್ಲಪ್ಪ ಚಪ್ಪಳಿಕೆ, ಶಿವುಕುಮಾರ ಅಕ್ಕರಕಿ, ಶರಣಗೌಡ ಕಮತಗಿ, ಶಿವುಕುಮಾಋ ಸುಣ್ಣದಕಲ್, ಶರಣಪ್ಪ ಸಾಹು ಪರತಪುರ, ಪರ್ವತರೆಡ್ಡಿ ಪಾಟೀಲ್ ಶಾವಂತಗೇರಾ, ಸತೀಶ ಬಂಡೇಗುಡ್ಡ, ಚನ್ನವೀರಯ್ಯಸ್ವಾಮಿ ಹಿರೇಮಠ ಹಾಗೂ ಸಂಘದ ವ್ಯವಸ್ಥಾಪಕಿ ಸರಸ್ವತಿ ಇದ್ದರು.