ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಭಾಷಾ ಜಗತ್ತಿನಲ್ಲಿ ಶ್ರಮ ಸಂಸ್ಕೃತಿ ಲೋಪವಾಗುತ್ತಿದೆ. ಆಳವಾದ ಅಧ್ಯಯನ ಇಲ್ಲವಾಗಿದೆ ಎಂದು ಶತಾವಧಾನಿ ಆರ್. ಗಣೇಶ್ ವಿಷಾದಿಸಿದರು.ಅವರು, ಧರ್ಮಸ್ಥಳದ ಲಕ್ಷದೀಪೋತ್ಸವ ಸಂದರ್ಭ ಅಮೃತವರ್ಷಿಣಿ ಸಭಾಭವನದಲ್ಲಿ ಶನಿವಾರ ನಡೆದ 92ನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ವಿಚಾರಗಳನ್ನು, ಭಾವನೆಗಳನ್ನು ಸ್ಪಷ್ಟವಾಗಿ ಹೇಳುವ ಶಕ್ತಿ, ವ್ಯವಹಾರವನ್ನು ಚೆನ್ನಾಗಿ ಮಾಡಬಲ್ಲ ಸಾಮರ್ಥ್ಯ ಕನ್ನಡಕ್ಕಿದೆ. ಹೊಸಪೀಳಿಗೆಯು ಕನ್ನಡದ ಹಿರಿಮೆಯನ್ನು ಅರಿತಕೊಳ್ಳದೆ ಇರುವುದರಿಂದ ಅದು ಸೊರಗುತ್ತಿದೆ. ಹೀಗಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಕುಮಾರವ್ಯಾಸನನ್ನು ಓದಿದರೆ ಕನ್ನಡದ ವಿಶೇಷತೆ ಏನೆಂಬುದನ್ನು ತಿಳಿಯಬಹುದು ಎಂದರು.ಫೇಸ್‌ಬುಕ್, ಬ್ಲಾಗ್‌ಗಳಲ್ಲೇ ಕನ್ನಡ ಕಳೆದುಹೋಗಬಾರದು. ಹೊಸಪದಗಳನ್ನು ಸೃಷ್ಟಿಸುವ ಶಕ್ತಿ ಕನ್ನಡಕ್ಕಿದೆ. ಸಾಮಾನ್ಯ ವ್ಯಕ್ತಿಯಲ್ಲಿ ಸಾಹಿತ್ಯದ ಬಗ್ಗೆ ಅಗಾಧ ಆಸಕ್ತಿಯಿದೆ. ಪ್ರಸ್ತುತ ಕನ್ನಡದಲ್ಲಿ ಪ್ರತಿವರ್ಷ 250ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗುತ್ತಿರುವುದು ಸಾಹಿತ್ಯದ ವ್ಯಾಪ್ತಿ ಬೆಳೆಯುತ್ತಿರುವುದನ್ನು ಸೂಚಿಸುತ್ತದೆ. ಆದರೆ ಇದರ ಮೌಲ್ಯಮಾಪನಕ್ಕೆ, ವಿಮರ್ಶೆಗೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶತಾವಧಾನಿ ಆರ್. ಗಣೇಶ್ ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಶೋಧಕ ಡಾ. ಪಾದೇಕಲ್ಲು ವಿಷ್ಣು ಭಟ್ ಅವರು, ಸಾಹಿತ್ಯವು ಸಂಸ್ಕಾರಯುತವಾಗಿ, ರುಚಿ, ಶುದ್ಧಿ, ಭಾಷಾ ಸಂಪತ್ತಿನಿಂದ ಹೆಚ್ಚಾಗಬೇಕಾದರೆ ಹಳೆಗನ್ನಡದ ಅಧ್ಯಯನಕ್ಕೆ ಆದ್ಯತೆ ಕೊಡಬೇಕು. ಅಧ್ಯಾಪಕ ವರ್ಗ ಈ ಬಗ್ಗೆ ಚಿಂತನೆ ನಡೆಸಿ ಕನ್ನಡದ ಕಸುವು ಹೆಚ್ಚುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.1933ರಲ್ಲಿಯೇ ಮಂಜಯ್ಯ ಹೆಗ್ಗಡೆಯವರು ಸಾಹಿತ್ಯದ ಉನ್ನತಿಗಾಗಿ ಇಂತಹ ಕಾರ್ಯಕ್ರಮ ಆಯೋಜಿಸಿದರು. ಇವರ ಆಶಯ ಮುಂದುವರಿಯಬೇಕು. ಧರ್ಮ ಮತ್ತು ಸಾಹಿತ್ಯದಿಂದ ಶಾಂತಿ ಸಾಧ್ಯ. ಸಾಹಿತ್ಯ ಧರ್ಮವನ್ನು ಪೋಷಿಸುತ್ತದೆ, ನಿರ್ದೇಶಿಸುತ್ತದೆ. ಉತ್ಸವ, ಸಂಭ್ರಮ, ವೈಭವ, ಆಡಂಬರದ ಜೊತೆಗೆ ವಿಚಾರಗಳು, ಹೊಸ ಹೊಳಹುಗಳು ಬರಬೇಕು ಎಂಬುದು ಸಮ್ಮೇಳನದ ಆಶಯ ಎಂಬುದು ನನ್ನ ಭಾವನೆಯಾಗಿದೆ ಎಂದರು.
ಹೊಸತನದಿಂದ ಕನ್ನಡವನ್ನು ಬೆಳೆಸುವುದು ಹೇಗೆ ಎಂಬ ಚಿಂತನೆ ಅಗತ್ಯ. ಹಿರಿಯರು ನೀಡಿದ ಕನ್ನಡವನ್ನು ಇನ್ನಷ್ಟು ಯೋಗ್ಯವನ್ನಾಗಿ ಮಾಡಬೇಕೇ ಹೊರತು ಹಾಳು ಮಾಡುವ ಸ್ವಾತಂತ್ರ್ಯ ಯಾರಿಗೂ ಇಲ್ಲವೆಂದು ಎಚ್ಚರಿಸಿದರು.ಸಾಹಿತ್ಯ ಶಾಂತಿ ಸೌಹಾರ್ದತೆ ಮೂಡಿಸಬೇಕು: ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಸಾಹಿತ್ಯ, ಅಧ್ಯಯನ, ಸಂವಾದಗಳು ಜನರ ಹೃದಯಗಳನ್ನು ಬೆಸೆಯುವ ಮತ್ತು ಮನಸ್ಸುಗಳನ್ನು ಕಟ್ಟುವ ಕಾರ್ಯವನ್ನು ಮಾಡುತ್ತದೆ. ಇಂದು ಡಿಜಿಟಲ್ ಮಾಧ್ಯಮದ ಮೂಲಕ ಸಾಹಿತ್ಯ ಬೆಳೆಯುತ್ತಿದೆ, ಸಾಹಿತ್ಯದ ಬಗ್ಗೆ ವಿಸ್ತಾರವಾದ ಚರ್ಚೆಗಳು ಅಂತರ್ಜಾಲದಲ್ಲಿ ನಡೆಯುತ್ತಿದೆ ತಂತ್ರಜ್ಞಾನದ ಬಳಕೆ ಸಾಹಿತ್ಯದಲ್ಲಿ ಹೊಸ ಮನ್ವಂತರವನ್ನೇ ಹುಟ್ಟುಹಾಕಿದೆ. ಸಾಹಿತ್ಯ ಯಾವ ರೀತಿಯಲ್ಲಿ ಬೆಳೆಯಲಿ ಸಾಹಿತ್ಯದ ಅಂತಿಮ ಗುರಿ ಮಾನವೀಯತೆ ಶಾಂತಿ ಸೌಹಾರ್ದತೆಯನ್ನು ಮೂಡಿಸುವುದೇ ಆಗಿದೆ ಎಂದರು.
ಸಮ್ಮೇಳನದಲ್ಲಿ ಡಾ.ಬಿ.ವಿ. ವಸಂತ ಕುಮಾರ್ ಅವರು ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸುವ ಮಾರ್ಗೋಪಾಯಗಳು ಎಂಬ ವಿಚಾರದ ಬಗ್ಗೆ, ಡಾ. ಪ್ರಮೀಳಾ ಮಾಧವ್ ಅವರು ಸ್ತ್ರೀಯರ ಸ್ವಂತ ಸುಖಕ್ಕೆ ಸಾಹಿತ್ಯದ ಅರಿವಿನ ಅವಶ್ಯಕತೆ ಎಂಬ ವಿಚಾರದ ಬಗ್ಗೆ ಹಾಗೂ ಪ್ರೊ. ಮೊರಬದ ಮಲ್ಲಿಕಾರ್ಜುನ ಅವರು ಇಂದಿನ ತಾಂತ್ರಿಕ ಯುಗದಲ್ಲಿ ಸಾಹಿತ್ಯದ ಅವಶ್ಯಕತೆ ಮತ್ತು ಸಾಹಿತ್ಯವನ್ನು ಜನಪ್ರಿಯಗೊಳಿಸುವ ಮಾರ್ಗೋಪಾಯಗಳು ಎಂಬ ವಿಚಾರದ ಬಗ್ಗೆ ಉಪನ್ಯಾಸ ಮಂಡಿಸಿದರುವೇದಿಕೆಯಲ್ಲಿ, ಹೇಮಾವತಿ ವಿ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು. ಡಿ. ಶ್ರೇಯಸ್ ಕುಮಾರ್ ಹಾಗೂ ಡಾ. ಸತೀಶ್ಚಂದ್ರ ಸನ್ಮಾನ ಪತ್ರ ವಾಚಿಸಿದರು.ಈ ಸಂದರ್ಭದಲ್ಲಿ ಸೋನಿಯಾ ಯಶೋವರ್ಮ ಅವರ ಕೃತಿ ‘ಗುಣಗಣಿ- ಗುಣರತ್ನಗಳ ಧಣಿ’ ಹಾಗೂ ಪುಷ್ಪದಂತ ಅವರ ‘ಉಪರತ್ನಗಳು ಮತ್ತು ನವರತ್ನಗಳು’ ಪುಸ್ತಕಗಳನ್ನು ಸಭಾಧ್ಯಕ್ಷರು ಬಿಡುಗಡೆಗೊಳಿಸಿದರು.ಎಸ್.ಡಿ.ಎಂ ಎಂಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಅಶೋಕ್ ಕುಮಾರ್ ವಂದಿಸಿದರು. ಡಾ. ದಿವ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು. ಭಕ್ತರಿಂದಲೇ ರಾತ್ರಿ ಅನ್ನದಾನ, ಕಲಾವಿದರಿಂದ ಉಚಿತ ಸೇವೆ
ದೀಪೋತ್ಸವದ ಕೊನೆಯ ದಿನವಾದ ಶನಿವಾರ ರಾತ್ರಿಯ ಊಟದ ವ್ಯವಸ್ಥೆಯನ್ನು ಭಕ್ತರೇ ಮಾಡಿದ್ದು ಸುಮಾರು 22 ಕೌಂಟರ್‌ಗಳಲ್ಲಿ ವಿವಿಧ ಬಗೆಯ ತಿಂಡಿ ತಿನಸುಗಳೊಂದಿಗೆ ನಿರಂತರ ಅನ್ನದಾನ ನಡೆಯಿತು. 15 ಲಕ್ಷ ದಲ್ಲಿ ಬೆಂಗಳೂರಿನ ಭಕ್ತರು ಹೂವಿನ ಅಲಂಕಾರ ಮಾಡಿದರು. 1000 ಮಂದಿಯನ್ನೊಳಗೊಂಡ 285 ವಾಲಗ ತಂಡ , 755 ಮಂದಿಯಿರುವ 85 ಬ್ಯಾಂಡ್ ಸೆಟ್ ತಂಡ, 97 ಸೆಟ್ ಶಂಖ, 161 ತಂಡ ಡೊಳ್ಳುಕುಣಿತ, 255 ತಂಡ ಕರಡಿ ಕುಣಿತ, 95 ತಂಡ ವೀರಗಾಸೆ ಸೇರಿ ಹೀಗೆ ಒಟ್ಟು 4330 ಕಲಾವಿದರು ಉಚಿತ ಸೇವೆ ಮಾಡಿದರು.