ಶಿಕ್ಷಣ ದೇಶ ಅಭಿವೃದ್ಧಿಗೆ ಬಳಕೆಯಾಗಲಿ: ಶಾಸಕ ಹರೀಶ್

| Published : Dec 01 2024, 01:32 AM IST

ಸಾರಾಂಶ

ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪಡೆದ ಶಿಕ್ಷಣ ಅಂಕ ಗಳಿಕೆಗಷ್ಟೇ ಸಿಮಿತವಾಗದೇ, ದೇಶದ ಉನ್ನತಿ, ಅಭಿವೃದ್ಧಿಗೆ ಬಳಕೆಯಾಗಬೇಕು. ಆ ಮೂಲಕ ಉತ್ತಮ ಪ್ರಜೆಗಳಾಗಿ ಬೆಳೆಯಬೇಕು ಎಂದು ಶಾಸಕ ಬಿ.ಪಿ. ಹರೀಶ್ ಹರಿಹರದಲ್ಲಿ ಹೇಳಿದ್ದಾರೆ.

- ಹರಿಹರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮ- - - ಕನ್ನಡಪ್ರಭ ವಾರ್ತೆ ಹರಿಹರ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪಡೆದ ಶಿಕ್ಷಣ ಅಂಕ ಗಳಿಕೆಗಷ್ಟೇ ಸಿಮಿತವಾಗದೇ, ದೇಶದ ಉನ್ನತಿ, ಅಭಿವೃದ್ಧಿಗೆ ಬಳಕೆಯಾಗಬೇಕು. ಆ ಮೂಲಕ ಉತ್ತಮ ಪ್ರಜೆಗಳಾಗಿ ಬೆಳೆಯಬೇಕು ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ 2024- 2025ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ, ಎನ್‍ಎಸ್‍ಎಸ್, ಸ್ಕೌಟ್ ಮತ್ತು ಗೈಡ್ಸ್, ರೆಡ್ ಕ್ರಾಸ್, ಚಟುವಟಿಕೆ ಹಾಗೂ ಕರ್ನಾಟಕ ರಾಜ್ಯೋತ್ಸವ ಉದ್ಘಾಟಿಸಿ, ಹರಿಹರ ದೀವಿಗೆ-04 ವಾರ್ಷಿಕ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸರ್ಕಾರಿ ಕಾಲೇಜುಗಳು ಇಂದು ಖಾಸಗಿ ಕಾಲೇಜುಗಳನ್ನು ಮೀರಿ ಬೆಳೆಯುತ್ತಿವೆ. ಅದರಲ್ಲೂ ಶೈಕ್ಷಣಿಕ ಸಾಧನೆಯಲ್ಲಿ, ಸಾಕಷ್ಟು ಉತ್ತಮ ಫಲ ಕಾಣುತ್ತಿರುವುದು ಸಂತಸದ ಸಂಗತಿಯಾಗಿದೆ. ಈ ಹಿನ್ನೆಲೆ ಮೂಲ ಸೌಲಭ್ಯಗಳನ್ನು ಸರ್ಕಾರ ಆದ್ಯತೆ ಮೇರೆಗೆ ನೀಡಬೇಕೆಂದು, ಉನ್ನತ ಶಿಕ್ಷಣ ಸಚಿವರಿಗೆ, ರಾಜ್ಯಪಾಲರಿಗೆ, ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.

2008ರಲ್ಲಿ ಶಾಸಕನಾಗಿದ್ದ ಸಂದರ್ಭ ಸರ್ಕಾರದಿಂದ ಹರಿಹರಕ್ಕೆ ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡಿಸಿದ್ದೆ. ಪ್ರಥಮ ವರ್ಷದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ನೀಡಿದ ಫಲಿತಾಂಶ ನನಗೆ ತುಂಬಾ ಸಂತೋಷ ತಂದಿತು. ಪದವೀಧರರು ಸ್ವಉದ್ಯೋಗಕ್ಕೂ ಸಿದ್ಧರಾಗಬೇಕು. ನಾನು ಇನ್ನೊಬ್ಬರ ಮನೆಯಲ್ಲಿ ಕೂಲಿ ಕೆಲಸ ಮಾಡಿದ್ದೆ. ನಮ್ಮ ಮಕ್ಕಳು ಹಾಗಾಗಬಾರದು ಎಂಬ ಮನೋಭಾವನೆ ಎಲ್ಲರಲ್ಲಿ ಬಂದಿರುವುದು ಸಂತಸದ ಸಂಗತಿ ಎಂದರು.

ದವನ್ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಬಾತಿ ಬಸವರಾಜ್ ಮಾತನಾಡಿ, ದ್ರಾವಿಡರು ಹುಟ್ಟಿದಾಗಲೇ ಕನ್ನಡ ಭಾಷೆ ಹಾಗೂ ಲಿಪಿ ಹುಟ್ಟಿದೆ. ಅನ್ಯಭಾಷೆ ಪದಗಳನ್ನು ಎರವಲು ಪಡೆಯುವ ಮೂಲಕ ಕನ್ನಡ ಭಾಷೆಗೆ ಚಂದದ ಹೊಳಪನ್ನು ನೀಡಲಾಗಿದೆ ಎಂದರು.

ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ವಿರೂಪಾಕ್ಷಪ್ಪ ವಹಿಸಿದ್ದರು. ಹರಿಹರ ನಗರ ಠಾಣೆಯ ಪಿಎಸ್‍ಐ ಶ್ರೀಪತಿ ಗಿನ್ನಿ, ಅಧೀಕ್ಷಕ ಆರ್.ಎಂ. ವೀರಭದ್ರಯ್ಯ, ಕಾಲೇಜಿನ ವಿವಿಧ ಘಟಕಗಳ ಸಂಚಾಲಕರಾದ ಡಾ. ಅನಂತನಾಗ್, ಡಾ. ಕುಮಾರ, ಡಾ. ಬಿ.ಕೆ. ಮಂಜುನಾಥ್, ಡಾ. ಗಂಗರಾಜ್, ಡಾ. ಚಂದ್ರಶೇಖರ, ಡಾ. ಗೌರಮ್ಮ ಎಂ.ಎಸ್. ಡಾ. ದಾಕ್ಷಾಯಿಣಿ ಜಿ.ಎನ್. ಪ್ರೊ. ಯೋಗೇಶ್, ಕೆ.ಜಿ. ಅಬ್ದುಲ್ ಬಶೀರ್, ಶಿವರಾಜ್ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಡಾ. ಎಚ್. ತಿಪ್ಪೇಸ್ವಾಮಿ ಸ್ವಾಗತಿಸಿ, ಡಾ. ಎಸ್.ಆರ್. ಮಹಾಂತೇಶ ಪರಿಚಯಿಸಿದರು. ವಿದ್ಯಾರ್ಥಿನಿ ಅರ್ಪಿತ ಪ್ರಾರ್ಥಿಸಿ, ಅನಿತಾ ಸಂಗಡಿಗರು ನಾಡಗೀತೆ ಹಾಡಿದರು. ದೀಕ್ಷಿತ ಮತ್ತು ನಾಗವೇಣಿ ನಿರೂಪಿಸಿದರು. ಎಲ್.ಆರ್. ಸಹನಾ ವಂದಿಸಿದರು.

- - - -30ಎಚ್.ಆರ್.ಅರ್3:

ಹರಿಹರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ 2024- 2025ನೇ ಸಾಲಿನ ಸಾಂಸ್ಕೃತಿಕ ಕ್ರೀಡೆ ಹಾಗೂ ಇನ್ನಿತರೇ ಕಾರ್ಯಕ್ರಮಗಳನ್ನು ಶಾಸಕ ಬಿ.ಪಿ. ಹರೀಶ್ ಉದ್ಘಾಟಿಸಿದರು.