ಸಾರಾಂಶ
ಶಿಗ್ಗಾಂವಿ: ಪ್ರಕೃತಿದತ್ತವಾದ ಮನುಷ್ಯನ ಶಾರೀರಿಕ ರಚನೆಯ ಲಿಂಗಬೇಧವನ್ನೇ ಬಳಸಿಕೊಂಡು ಲಿಂಗ ತಾರತಮ್ಯ ಮಾಡುವ ಮೂಲಕ ಮಹಿಳೆಯರ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಇಂಥ ಲಿಂಗ ತಾರತಮ್ಯವನ್ನು ತೊಡೆದು ಸಮಾನತೆ ಸಮಾಜ ನಿರ್ಮಾಣ ಇವತ್ತಿನ ಅವಶ್ಯಕತೆಯಾಗಿದೆ ಎಂದು ಹಾವೇರಿ ಕನ್ನಡ ಜಾಗೃತಿ ಸಮಿತಿ ಸದಸ್ಯೆ ಡಾ. ಪುಷ್ಪಾ ಶಲವಡಿಮಠ ಹೇಳಿದರು.ಪಟ್ಟಣದ ಚನ್ನಪ್ಪ ಕುನ್ನೂರ ಕಾಲೇಜಿನ ಕಾಲೇಜು ಒಕ್ಕೂಟ ಹಾಗೂ ಮಹಿಳಾ ಸಂಘದ ಆಶ್ರಯದಲ್ಲಿ ಏರ್ಪಡಿಸಿದ ಸಂಕಲ್ಪ ಗುರಿ-೫ ಮಹಿಳಾ ಸಬಲೀಕರಣ ಗೋಷ್ಠಿಯಲ್ಲಿ ನಾ ಬರಿ ಭ್ರೂಣವಲ್ಲ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು ಗರ್ಭದಲ್ಲಿಯೇ ಲಿಂಗ ಪತ್ತೆ ಮಾಡುವ ಹಾಗೂ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವ ಅನಾಗರಿಕ ಪದ್ಧತಿ ಸಮಾಜದಲ್ಲಿ ಇಂದಿನ ಆಧುನಿಕ ಕಾಲದಲ್ಲಿಯೂ ಮುಂದುರೆದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು ಈಗಾಗಲೇ ಇರುವ ಕಾನೂನುಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವ ತುರ್ತು ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.
ಹೆಣ್ಣು ರಜಸ್ವಲೆಯಾಗುವ ಕಾರಣವನ್ನು ಮುಂದಿಟ್ಟುಕೊಂಡು ಅವಳನ್ನು ಮಲೀನೆ ಎಂದು ಕಾಣುವ ಸಾಮಾಜಿಕ ವ್ಯವಸ್ಥೆ ಅತ್ಯಂತ ಹೇಯವಾದುದು ಎಂದ ಅವರು, ಅವಳ ಋತುಚಕ್ರದ ಕಾರಣವಾಗಿಯೇ ಜನಾಂಗ ಅಭಿವೃದ್ಧಿಯಾಗುವ ಸತ್ಯವನ್ನು ಅರಿಯಬೇಕಿದೆ ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ನಾಗರಾಜ ಜಿ. ದ್ಯಾಮನಕೊಪ್ಪ ಅವರು ಮಹಿಳೆ ಅಬಲೆಯಲ್ಲ ಎಂದು ಪ್ರತಿಪಾದಿಸುತ್ತಾ ಪುರಾಣೇತಿಹಾಸಗಳಲ್ಲಿ ತನಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಪುರುಷನಿಗೆ ಹೊಯಿಕೈಯಾಗಿ ನಿಂತಿರುವ ಅಂಶಗಳನ್ನು ಸೋದಾಹರಣವಾಗಿ ವಿವರಿಸಿದರು. ದಿಕ್ಸೂಚಿ ಭಾಷಣ ಮಾಡಿದ ಮಹಿಳಾ ಸಂಘದ ಕಾರ್ಯಾಧ್ಯಕ್ಷೆ ಗೀತಾ ಸಾಲ್ಮನಿ ಅವರು ಹೆಣ್ಣು ಭ್ರೂಣಹತ್ಯೆ ಸಮಾಜದಲ್ಲಿ ಎಗ್ಗಿಲ್ಲದೆ ನಡೆಯುತ್ತದೆ ಎಂದು ಅಂಕಿ ಅಂಶ ಸಮೇತವಾಗಿ ವಿವರಿಸಿ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದರು.
ಸಂಕಲ್ಪ ಗುರಿ- ೪ರ ಅಂಗವಾಗಿ ಏರ್ಪಡಿಸಿದ ಭಾರತದ ಚುನಾವಣೆಯಲ್ಲಿ ಯುವಕರ ಪಾತ್ರ ಎಂಬ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸಂಜನಾ ಪಾಟೀಲ (ಪ್ರಥಮ), ಅಶ್ವಿನಿ ಅರಳಪ್ಪನವರ (ದ್ವಿತೀಯ), ದೀಪಾ ವಾಲ್ಮೀಕಿ ಹಾಗೂ ಲತಾ ಸಣ್ಣಮನಿ (ತೃತೀಯ) ಇವರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಥಮಸ್ಥಾನ ಪಡೆದ ಸಂಜನಾ ಪಾಟೀಲ ಅವರ ಪ್ರಬಂಧ ವಾಚನ ಗಮನಸೆಳೆಯಿತು ಕಾರ್ಯಕ್ರಮದಲ್ಲಿ ಡಾ. ಕೆ.ಎಸ್. ಬರದೆಲಿ, ಮಂಜುನಾಥ ಕಾಳೆ, ಅನ್ನಪೂರ್ಣ ಅಂಕಲಕೋಟಿ, ಮಹೇಶ ಲಕ್ಷ್ಮೇಶ್ವರ ಮುಂತಾದವರು ಇದ್ದರು. ಶಾಲಿನಿ ಕೆ. ಸ್ವಾಗತಿಸಿದರು. ರಕ್ಷಿತಾ ಧಾರವಾಡ ನಿರೂಪಿಸಿದರು. ರಿತು ಪಾಟೀಲ ವಂದಿಸಿದರು.;Resize=(128,128))
;Resize=(128,128))