ಧಾರವಾಡ:
ಗ್ರಂಥಾಲಯ ಮಾಹಿತಿ ವಿಜ್ಞಾನವು ಪರಿವರ್ತನಾಶೀಲ, ವೃತ್ತಿಪರವಾದ ವಿಷಯವಾಗಿದೆ ಎಂದು ಅಹ್ಮದಾಬಾದ್‌ನ ಇನ್‌ಪ್ಲಿಬಿನೆಟ್ ನಿರ್ದೇಶಕಿ ಪ್ರೊ. ದೇವಿಕಾ ಮಾಡಳ್ಳಿ ಅಭಿಪ್ರಾಯಪಟ್ಟರು.ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ವತಿಯಿಂದ ಪ್ರೊ. ಎಂ.ಆರ್. ಕುಂಬಾರ ಜನ್ಮ ಶತಮಾನೋತ್ಸವ ಸವಿ ನೆನಪಿಗಾಗಿ ಕವಿವಿ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆದ "ಡಿಜಿಟಲ್, ಕೃತಕ ಬುದ್ಧಿಮತ್ತೆ " ಜಗತ್ತಿನಲ್ಲಿ ಸಾಂಪ್ರದಾಯಿಕ ವರ್ಗೀಕರಣ, ಕ್ಯಾಟ್‌ಲಾಗ್ ಪದ್ಧತಿಯಿಂದ ಜ್ಞಾನ ಸಂಘಟನೆಯತ್ತ ಮುನ್ನಡೆಯುವಿಕೆ: ಹಿಂದಿನ ಭವಿಷ್ಯದ ದೃಷ್ಟಿಕೋನಗಳು ಎಂಬ ವಿಷಯದ ಕುರಿತು ನಡೆದ ಎರಡು ದಿನಗಳ ರಾಷ್ಟ್ರಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭದ ಭಾಷಣದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಹಳೆಯ ಪದ್ಧತಿ ಮತ್ತು ವಿಧಾನಗಳು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಮಹತ್ವ ಪಡೆದಿದೆ. ಇಂದಿನ ಯುವ ಗ್ರಂಥಪಾಲಕರು ಮತ್ತು ವೃತ್ತಿಪರರು ಪ್ರಾಚೀನ ಪರಂಪರೆ ಮತ್ತು ವಿಧಾನವನ್ನು ಕೂಡ ಮರೆಯಬಾರದು ಎಂದ ಅವರು, ಪ್ರೊ. ಎಂ.ಆರ್. ಕುಂಬಾರ ಅವರು ಗ್ರಂಥಾಲಯದ ದಿಗ್ಗಜರಾಗಿದ್ದಾರೆ ಎಂದರು.ರಾಣಿ ಚೆನ್ನಮ್ಮ ವಿವಿ ವಿಶ್ರಾಂತ ಪ್ರಾಧ್ಯಾಪಕ ಪಿ.ಡಿ. ಕೊಣ್ಣೂರ, ಕವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗವು ದೇಶದಲ್ಲಿ ತನ್ನದೇ ಆದ ಮಹತ್ವ ಪಡೆದಿದೆ. ಗ್ರಂಥಾಲಯದ ಶಿಕ್ಷಣವನ್ನು ಇನ್ನಷ್ಟು ಬೆಳಸಬೇಕಾದ ಅಗತ್ಯವಿದೆ ಎಂದು ಹೇಳಿದರು.ಗ್ರಂಥಾಲಯ ತಜ್ಞ ಪ್ರೊ. ಎಸ್.ಎಲ್. ಕಾಡದೇವರಮಠ ಮಾತನಾಡಿ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಕುರಿತು ಯುವಕರಲ್ಲಿ ಅರಿವು ಮೂಡಿಸಬೇಕಾಗಿದೆ. ಕರ್ನಾಟಕ ರಾಜ್ಯ ಸಂಘವು ಗ್ರಂಥಪಾಲಕರ ಮತ್ತು ವೃತ್ತಿಪರರ ಜಿಲ್ಲಾಮಟ್ಟದ ಗ್ರಂಥಪಾಲಕರ ಮತ್ತು ವೃತ್ತಿಪರರ ಸಂಘಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಮದ್ರಾಸ್ ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ರಮೇಶಬಾಬು ಮಾತನಾಡಿ, ಭಾರತೀಯ ಜ್ಞಾನ ಪದ್ಧತಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಬೇಕಾಗಿದೆ. ಪ್ರಸ್ತುತ ಗ್ರಂಥಾಲಯದ ವೃತ್ತಿಪರರು ಮಾಹಿತಿ ನಿರ್ವಹಣೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ, ಪ್ರತಿ ವರ್ಷ ಏ. 16ರಂದು ಪ್ರೊ. ಎಂ.ಆರ್. ಕುಂಬಾರ ಸ್ಮರಣಾರ್ಥ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು. ವಿಭಾಗದ ಬೆಳವಣಿಗೆಗೆ ಗ್ರಂಥಾಲಯ ಮತ್ತು ಮಾಹಿತಿ ಹಳೆಯ ವಿದ್ಯಾರ್ಥಿಗಳ ಸಂಘ ಬದ್ಧವಾಗಿದೆ ಎಂದ ಅವರು, ಗ್ರಂಥಾಲಯ ವಿದ್ಯಾರ್ಥಿಗಳಿಗೆ ವೃತ್ತಿಪರತೆ ಹೆಚ್ಚಿಸಲು ತರಬೇತಿ ನೀಡಲು ವೃತ್ತಿಪರ ಸಂಸ್ಥೆಗಳಲ್ಲಿ ಇಂಟರ್ನ್‌ಶಿಪ್ ನೀಡುವುದು ಬಹಳ ಅಗತ್ಯವಿದೆ ಎಂದರು.
ಬೆಂಗಳೂರಿನ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಇನ್ಫಾರ್ಮೇಶನ್ ರಿಸೋರ್ಸ್ ಸೆಂಟರ್ ಮುಖ್ಯಸ್ಥ ಡಾ. ನಾಗಪ್ಪ ಬಕ್ಕನ್ನವರ ಅವರು ವಿಚಾರ ಸಮ್ಮೇಳನದ ವರದಿ ಮಂಡಿಸಿದರು. ಈ ವೇಳೆ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ತಜ್ಞರು ಮಾತನಾಡಿದರು. 40ಕ್ಕೂ ಹೆಚ್ಚಿನ ಸಂಶೋಧನಾತ್ಮಕ ಪ್ರಬಂಧಗಳ ಮಂಡನೆಯಾದವು.
ಕಾರ್ಯಕ್ರಮದಲ್ಲಿ ಕವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಸಿ. ಕೃಷ್ಣಮೂರ್ತಿ, ಡಾ. ಆರ್.ಆರ್. ನಾಯಕ, ಡಾ. ಗುರುರಾಜ ಹಡಗಲಿ, ಡಾ. ಅನಿಲ ತಳವಾರ, ಗ್ರಂಥಾಲಯದ ತಜ್ಞರಾದ ಪ್ರೊ. ಸಿ.ಆರ್. ಕರಿಸಿದ್ದಪ್ಪ, ಪ್ರೊ. ಎಸ್.ಎಲ್. ಸಂಗಮ, ಪ್ರೊ. ರಮೇಶ ಬಾಬು, ಪ್ರೊ. ಮಹೇಶ ಹೊರಕೇರಿ ಇದ್ದರು.