ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಬೇಸಿಗೆ ಶಿಬಿರ ಎಂದರೆ ಸಾಂಪ್ರದಾಯಿಕ ನೃತ್ಯ, ನಾಟಕ, ಸಂಗೀತ, ಸಾಂಸ್ಕೃತಿಕ ಚಟುವಟಿಕೆ ಕಲಿಸುವುದು ಸಾಮಾನ್ಯ. ಆದರೆ, ಇಲ್ಲಿನ ಜಿಟಿಟಿಸಿ (ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ)ಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ರೋಬೋಟಿಕ್‌ ಮತ್ತು ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಬೇಸಿಗೆ ಶಿಬಿರ ಆಯೋಜಿಸಲಾಗಿದೆ.

ಇಂದು ಪ್ರತಿಯೊಂದು ರಂಗದಲ್ಲೂ ಎಐ (ಕೃತಕ ಬುದ್ಧಿಮತ್ತೆ) ಪ್ರಮುಖ ಪಾತ್ರ ವಹಿಸಿದೆ. ಇಂದಿಗೂ ಹಲವು ಮಕ್ಕಳಲ್ಲಿ ಇದರ ಕುರಿತು ಅರಿವು ಇರುವುದಿಲ್ಲ. ಮಕ್ಕಳಿಗೆ ಎಐ ತಂತ್ರಜ್ಞಾನ ಹೇಗೆಲ್ಲ ಕೆಲಸ ಮಾಡುತ್ತದೆ. ಇದರಿಂದಾಗುವ ಪ್ರಯೋಜನಗಳು ಹಾಗೂ ಏನೆಲ್ಲ ಆವಿಷ್ಕಾರ ಮಾಡಬಹುದಾಗಿದೆ ಎಂಬುದರ ಕುರಿತು ಪ್ರೌಢಶಾಲಾ ಹಂತದಲ್ಲಿರುವ ಮಕ್ಕಳಿಗೆ ಮಾಹಿತಿ ಒದಗಿಸಲು, ಅವರಲ್ಲಿನ ಕಲಿಕಾ ಮಟ್ಟ ಸುಧಾರಣೆಗಾಗಿ ಶಿಬಿರ ಆರಂಭಿಸಲಾಗಿದೆ.

10 ದಿನಗಳ ಶಿಬಿರ:


ವಿದ್ಯಾರ್ಥಿಗಳಿಗಾಗಿ 10 ದಿನ ರೋಬೋಟಿಕ್‌ ಮತ್ತು ಎಐ ತರಬೇತಿ ನೀಡಲಾಗುತ್ತದೆ. ಶಿಬಿರದಲ್ಲಿ ಎಐ ತಯಾರಿಕೆಯ ಕಲಿಕೆ, ಐಒಟಿ (Internet of Things) ಪ್ರೊಜೆಕ್ಟ್, ರೋಬೋಟಿಕ್‌ ಪ್ರೋಗ್ರಾಮ್, ಕಂಪ್ಯೂಟರ್‌ ಪ್ರೋಗ್ರಾಮಿಂಗ್ ಸಿದ್ಧಪಡಿಸುವುದು, ಗೇಮ್‌ಗಳ ತಯಾರಿಕೆ ಕಲಿಸಲಾಗುತ್ತದೆ. ಜತೆಗೆ ಸ್ಮಾರ್ಟ್‌ ನೀರಾವರಿ ವ್ಯವಸ್ಥೆ, ಸ್ಮಾರ್ಟ್‌ ಡಸ್ಟ್‌ಬಿನ್‌, ಹೋಮ್‌ ಅಟೋಮೇಷನ್, ಸ್ಮಾರ್ಟ್‌ ನೋಟಿಸ್‌ ಬೋರ್ಡ್, ಧ್ವನಿ ನಿಯಂತ್ರಿತ ರೋಬೋಟ್, ಎಐ ಚಾಟ್‌ಬೋಟ್‌, ಆ್ಯಪ್‌ ಕ್ಯಾಚರ್‌ ಗೇಮ್, ಬೀಟೆಲ್‌ ಮೇಜ್‌ ಗೇಮ್‌ ಹೀಗೆ ಹಲವು ಬಗೆಯ ಪ್ರೊಜೆಕ್ಟ್‌ಗಳನ್ನು ಮಕ್ಕಳಿಂದಲೇ ಸಿದ್ಧಪಡಿಸಲಾಗುತ್ತದೆ. ಕಳೆದ ವರ್ಷವೂ ಇಲ್ಲಿನ ಜಿಟಿಟಿಸಿಯಲ್ಲಿ ರೋಬೊಟಿಕ್‌ ಶಿಬಿರ ಆಯೋಜಿಸಲಾಗಿತ್ತು. ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ ಈ ಬಾರಿಯ ಬೇಸಿಗೆ ಶಿಬಿರದಲ್ಲಿ 8, 9, 10ನೇ ತರಗತಿಯ ಮಕ್ಕಳಿಗಾಗಿ ಈ ಶಿಬಿರ ಆಯೋಜಿಸಲಾಗಿದೆ.

3 ತಂಡ:

ಏ. 13ರಿಂದ ಆರಂಭವಾಗಿರುವ ಈ ಶಿಬಿರದಲ್ಲಿ 10 ದಿನ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಬಳಿಕ ಏ. 28ರಿಂದ ಮೇ 11ರ ವರೆಗೆ ಹಾಗೂ ಮೇ 12ರಿಂದ 22ರ ವರೆಗೆ ಹೀಗೆ ಮೂರು ಬ್ಯಾಚ್‌ಗಳಲ್ಲಿ ತರಬೇತಿ ನೀಡಲಾಗುತ್ತಿದೆ.

100 ವಿದ್ಯಾರ್ಥಿಗಳಿಗೆ ತರಬೇತಿ

ಶಾಲಾ ಶಿಕ್ಷಣದ ನಂತರ ಮಕ್ಕಳು ಹೊಸ ಕೋರ್ಸ್‌ ಆಯ್ಕೆ ಮಾಡುವಲ್ಲಿ ಸವಾಲು ಎದುರಿಸಬೇಕಾಗುತ್ತದೆ. ಹಾಗಾಗಿ ಮೊದಲೇ ತಾಂತ್ರಿಕ ಅರಿವು ನೀಡಿದರೆ ಮಕ್ಕಳು ಸುಲಭವಾಗಿ ತಾಂತ್ರಿಕ ಕೋರ್ಸ್‌ ಕಲಿಯಲು ಸಹಕಾರಿಯಾಗಲಿದೆ. ಭವಿಷ್ಯದ ತಂತ್ರಜ್ಞಾನ ಗುರಿಯಾಗಿ ಇಟ್ಟುಕೊಂಡು ಇಂತಹ ಶಿಬಿರ ಆಯೋಜಿಸುತ್ತಿದೆ. ಒಟ್ಟು ಮೂರು ಬ್ಯಾಚ್‌ ಮಾಡಲಾಗಿದ್ದು, 100 ಮಕ್ಕಳಿಗೆ ತರಬೇತಿ ನೀಡುವ ಉದ್ದೇಶ ಹೊಂದಿದೆ. ಮೊದಲ ಬ್ಯಾಚ್‌ನಲ್ಲಿ 25 ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಇದರೊಂದಿಗೆ ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್ ಸಹ ಹೇಳಿಕೊಡಲಾಗುತ್ತಿದೆ. ಇದು ಸಂಪೂರ್ಣ ಉಚಿತವಾಗಿದ್ದು, ವಿದ್ಯಾರ್ಥಿಗಳು ಇಂತಹ ಶಿಬಿರಗಳ ಪ್ರಯೋಜನ ಪಡೆದುಕೊಳ್ಳುವಂತೆ ಜಿಟಿಟಿಸಿಯ ಪ್ರಾಂಶುಪಾಲ ಮಾರುತಿ ಭಜಂತ್ರಿ "ಕನ್ನಡಪ್ರಭ "ಕ್ಕೆ ತಿಳಿಸಿದರು.ಎಐ ಕಲಿಯಬೇಕೆಂಬ ಆಸೆಯಿತ್ತು. ಈ ಶಿಬಿರದ ಕುರಿತು ಪಾಲಕರಿಗೆ ತಿಳಿಸಿದಾಗ ಖುಷಿಪಟ್ಟು ಕಳಿಸುತ್ತಿದ್ದಾರೆ. ಶಿಕ್ಷಕರು ಸಹ ಹೆಚ್ಚಿನ ಮುತುವರ್ಜಿ ವಹಿಸಿ ತರಬೇತಿ ನೀಡುತ್ತಿದ್ದಾರೆ. ಎಐ ಕಲಿಕೆಗೆ ಈ ಶಿಬಿರ ತುಂಬಾ ಸಹಕಾರಿಯಾಗಿದೆ.

ಅಭಿಷೇಕ್‌ ಜಿ.ಎಸ್‌. ಎಐ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿ