ಇಲಾಖೆ ನಿಷ್ಕ್ರಿಯವಾಗಿದ್ದರೆ ನಾವು ಯಾರ ಮೇಲೆ ನಂಬಿಕೆ ಇಡಬೇಕು: ಆರ್. ಡಿ. ಹೆಗಡೆ

ಕನ್ನಡಪ್ರಭ ವಾರ್ತೆ ಸಿದ್ದಾಪುರಪ್ರಸ್ತುತ ಸರ್ಕಾರ ಹಾಗೂ ಸ್ಥಳೀಯ ಶಾಸಕರು ಜನರ ನೆಮ್ಮದಿಯನ್ನು ಕಳೆದು ತಾವು ನೆಮ್ಮದಿಯಾಗಿ ಬದುಕುತ್ತಿದ್ದಾರೆ. ಕಾಂಗ್ರೆಸ್ ಆಡಳಿತಕ್ಕೆ ಬಂದಾಗಿನಿಂದ ಹಿಂದುಗಳ ಮೇಲೆ ಹಲ್ಲೆ, ದೊಂಬಿಗಳು ರಾಜ್ಯ ಸರ್ಕಾರದ ವ್ಯವಸ್ಥಿತ ಆದೇಶದಂತೆ ನಡೆದುಕೊಂಡು ಬಂದಿದೆ. ಕಳೆದ ಮೂರು ವರ್ಷಗಳಲ್ಲಿ ಆತ್ಮಹತ್ಯೆಗಳು, ಕೊಲೆಗಳು ಅವ್ಯಾಹತವಾಗಿ ನಡೆಯುತ್ತಾ ಇದ್ದರೂ ಸಹ ಕಂದಾಯ ಇಲಾಖೆಯಿಂದ ಆಗಲಿ ಪೊಲೀಸ್ ಇಲಾಖೆಯಿಂದಾಗಲಿ ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಒಂದು ಸಂದೇಶ ಈವರೆಗೂ ಸಾರ್ವಜನಿಕರಿಗೆ ಹೋಗಿಲ್ಲ. ಸಮಾಜದ್ರೋಹಿಗಳಿಗೆ, ಈ ರೀತಿ ಘಟನೆ ಮಾಡಿದವರಿಗೆ ಎಲ್ಲಿಯವರೆಗೆ ಶಿಕ್ಷೆ ಆಗುವುದಿಲ್ಲವೋ, ಅವರನ್ನು ರಕ್ಷಣೆ ಮಾಡಲು ಜನಪ್ರತಿನಿಧಿಗಳು ಎಲ್ಲಿಯವರೆಗೆ ಇರುತ್ತಾರೋ, ಇಲಾಖೆ ಎಲ್ಲಿಯವರೆಗೆ ಅವರಿಗೆ ಸಹಾಯ ಮಾಡುತ್ತದೆಯೋ ಅಲ್ಲಿಯವರೆಗೆ ಈ ಗಲಾಟೆ ದೊಂಬಿಗಳು ನಿಲ್ಲುವುದಿಲ್ಲ ಎಂದು ಬಿಜೆಪಿಯ ಶಿವಮೊಗ್ಗ ವಿಭಾಗದ ಪ್ರಮುಖ ಆರ್.ಡಿ. ಹೆಗಡೆ ಜಾನ್ಮನೆ ಹೇಳಿದರು.ತಾಲೂಕಿನ ಬಿಕ್ಕಳಸೆ ಗ್ರಾಮದ ಯುವತಿ ಆತ್ಮಹತ್ಯೆ ಪ್ರಕರಣದ ಸೂಕ್ತ ತನಿಖೆಗೆ ಆಗ್ರಹಿಸಿ ಬಿಜೆಪಿ ಮಂಡಳ ಹಾಗೂ ಹಿಂದೂ ಪರ ಸಂಘಟನೆಗಳ ಸಹಯೋಗದಲ್ಲಿ ಸ್ಥಳೀಯ ಪೊಲೀಸ್ ಠಾಣೆಯೆದುರು ನಡೆಸಿದ ಸಾಂಕೇತಿಕ ಧರಣಿಯಲ್ಲಿ ಮಾತನಾಡಿದರು.

ಸೂಕ್ತ ತನಿಖೆಗೆ ಆಗ್ರಹಿಸಿ ತಾಲೂಕು ದಂಡಾಧಿಕಾರಿಯವರಿಗೆ ಈ ಕುರಿತು ಮನವಿ ನೀಡಿದರೂ ಅವರು 15 ದಿನಗಳ ನಂತರ ಮನವಿಯನ್ನು ಠಾಣೆಗೆ ಕಳಿಸಿಕೊಡುತ್ತಾರೆ ಎಂದರೆ ಅದರ ಅರ್ಥ ಏನು? ಇಲಾಖೆ ನಿಷ್ಕ್ರಿಯವಾಗಿದ್ದರೆ ನಾವು ಯಾರ ಮೇಲೆ ನಂಬಿಕೆ ಇಡಬೇಕು. ಪ್ರತಿಭಟನೆ ಮಾಡಬೇಡಿ ಎಂದು ಪೊಲೀಸರು ಹೇಳುತ್ತಾರೆ. ಆದರೆ ಈ ಪ್ರಕರಣದಲ್ಲಿ ಏನಾಗಿದೆ ಎಂಬ ವಿಷಯವನ್ನು ಪೊಲೀಸ್‌ ಇಲಾಖೆ ಈವರೆಗೂ ಸಾರ್ವಜನಿಕವಾಗಿ ತಿಳಿಸಿಲ್ಲ. ಈ ಪ್ರಕರಣದ ಸಮಗ್ರ ತನಿಖೆಗೆ ಕೂಡಲೇ ಮುಂದಾಗಬೇಕು ಎಂದು ಆಗ್ರಹಿಸಿದರು.ಬಿಜೆಪಿ ಮಂಡಳ ಅಧ್ಯಕ್ಷ ತಿಮ್ಮಪ್ಪ ಮಡಿವಾಳ ಮಾತನಾಡಿ, ಈ ಪ್ರಕರಣದ ತನಿಖೆಗಾಗಿ ಬೇರೆ ತಂಡವನ್ನು ರಚಿಸಬೇಕು. ಇಲ್ಲಿನ ಸಿಪಿಐ ಮೇಲೆ ನಮಗೆ ಸಂಪೂರ್ಣ ವಿಶ್ವಾಸ ಹೋಗಿದೆ. 15 ದಿನಗಳ ಒಳಗೆ ಸೂಕ್ತ ತನಿಖೆ ಆಗದಿದ್ದರೆ, ಸಿದ್ದಾಪುರ ಬಂದ್ ಕರೆ ನೀಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು ಮಂಡಳ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ, ಹಿಂದೂ ಸಂಘಟನೆಯ ಸತೀಶ ಚೆನ್ನಯ್ಯ ಮಾತನಾಡಿದರು. ಸಾಂಕೇತಿಕ ಧರಣಿಯಲ್ಲಿ ಜಿಲ್ಲಾ ಬಿಜೆಪಿ ವಿಶೇಷ ಆಮಂತ್ರಿತ ಗುರುರಾಜ ಶಾನಭಾಗ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್.ಕೆ. ಮೇಸ್ತ, ಹಿಂದೂ ಜಾಗರಣಾ ವೇದಿಕೆಯ ಅಣ್ಣಪ್ಪ ನಾಯ್ಕ ಹಾಗೂ ಪಕ್ಷದ ವಿವಿಧ ಪದಾಧಿಕಾರಿಗಳು, ಹಿಂದೂ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಆರೋಪಿತರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಸಿಪಿಐ ಮೂಲಕ ಡಿವೈಎಸ್ಪಿಗೆ ಮನವಿ ನೀಡಲಾಯಿತು.