ಕೊಡಗು ಪತ್ರಿಕಾ ಭವನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಹಿರಿಯರ ಕವಿಗೋಷ್ಠಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಆಧುನಿಕತೆಯ ಸ್ಪರ್ಶವಿಲ್ಲದೆ ಮೊಬೈಲ್ ಪೂರ್ವ ಯುಗದಲ್ಲಿ ಬದುಕಿನ ಅನುಭವಗಳನ್ನು ಸಾಹಿತ್ಯದ ಮೂಲಕ ಹೊರ ಹೊಮ್ಮಿಸುತ್ತಿದ್ದ ಹಿರಿಯ ಸಾಹಿತಿಗಳು ಹಾಗೂ ಯುವ ಬರಹಗಾರರಿಗೆ ಸಾಹಿತ್ಯ ರಚನೆಯತ್ತ ಹಿರಿಯರು ಪ್ರೇರಣೆ ನೀಡುವ ಮೂಲಕ ಎರಡು ಪೀಳಿಗೆಗಳ ಕೊಂಡಿ ಹಿರಿಯ ಸಾಹಿತಿಗಳ ಕವಿಗೋಷ್ಠಿ ಮೂಲಕ ಆಗಬೇಕು ಎಂದು ಕವಿ ಕಾಜೂರು ಸತೀಶ್ ನುಡಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದ್ದ ಹಿರಿಯರ ಕವಿಗೋಷ್ಠಿಯನ್ನು ಕೊಡಗು ಪತ್ರಿಕಾ ಭವನ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಮೊಬೈಲ್, ಇಂಟರ್ನೆಟ್, ಫೇಸ್ಬುಕ್ ಇವುಗಳ ಕಲ್ಪನೆಯೇ ಇಲ್ಲದ ದಿನಗಳಲ್ಲಿ ಕುಟುಂಬದ ಸದಸ್ಯರೊಡನೆ ಬೆರೆತು ಯಾವುದೇ ಅಡೆತಡೆಗಳಿಲ್ಲದೆ ನಮ್ಮ ಹಿರಿಯರು ತಮ್ಮ ಅನುಭವವನ್ನು ತಿಳಿಸುತ್ತಿದ್ದರು. ಆದರೆ ಅಂತಹ ಪರಿಸ್ಥಿತಿಗಳಿಗೆ ತದ್ವಿರುದ್ಧವಾಗಿರುವ ಪರಿಸ್ಥಿತಿಯನ್ನು ನಾವಿಂದು ಕಾಣುತ್ತಿದ್ದೇವೆ ಎಂದರು. ನಂತರ ತಾವೇ ರಚಿಸಿದ ಚಪ್ಪಲಿಗಳು ನಾವು ಎಂಬ ಕವನವನ್ನು ವಾಚಿಸಿದರು.

ಜಿಲ್ಲೆಯ ಹಿರಿಯ ಹದಿನಾರು ಕವಿಗಳು ತಮ್ಮ ಕವನ ವಾಚನ ಮಾಡಿದರು. ಪ್ರತಿಯೊಂದು ಕವಿತೆಯೂ ತಮ್ಮ ಜೀವನದುದ್ದಕ್ಕೂ ತಾವು ಕಲಿತ ಅನುಭವಗಳನ್ನು ಧಾರೆ ಎರೆಯುವಂತಿತ್ತು. ತಮ್ಮ ಇಳಿ ವಯಸಿನಲ್ಲಿಯೂ ಕವನವಾಚಸಿದ ಕವಿಗಳು ಜೀವನೋತ್ಸಾಹ ತುಂಬಿದ ಕವನಗಳನ್ನು ವಾಚಿಸುವ ಮೂಲಕ ಕಾರ್ಯಕ್ರಮಕ್ಕೆ ಉತ್ಸಾಹ ತುಂಬಿದರು.

ಗೌರವ ನೀಡಿದೆ:

ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಮಾತನಾಡಿ ಕೊಡಗಿನಲ್ಲಿ ಸಾಹಿತ್ಯ ಕ್ಷೇತ್ರವನ್ನು ಬೆಳೆಸಿಕೊಂಡು ಬಂದಂತಹ ಹಿರಿಯ ಸಾಹಿತಿಗಳಿಗೆ ಯಾವುದೇ ಕವಿಗೋಷ್ಠಿ ಅಥವಾ ಸಾಹಿತ್ಯ ಗೋಷ್ಠಿಯಲ್ಲಿ ಅವಕಾಶ ಸಿಗದೇ ಹಿರಿಯರನ್ನು ನಿರ್ಲಕ್ಷಿಸಲಾಗುತ್ತಿತ್ತು. ಅದನ್ನು ಮನಗೊಂಡು ಕನ್ನಡ ಸಾಹಿತ್ಯ ಪರಿಷತ್ತು ಹಿರಿಯರ ಕವಿಗೋಷ್ಠಿ ಏರ್ಪಡಿಸಿ ಅವರ ಹಿರಿತನಕ್ಕೆ ಗೌರವ ನೀಡಿದೆ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯುವ ಸಾಹಿತಿ, ಕವಿ ಕೃಪಾ ದೇವರಾಜ್ ಮಾತನಾಡುತ್ತಾ ಹಿರಿಯರ ಅನುಭವದ ಕವನಗಳು ಯುವ ಪೀಳಿಗೆಗೆ ಮಾರ್ಗದರ್ಶಕ ವಾಗಬೇಕು. ವಯಸ್ಸು ಕೇವಲ ಎಣಿಕೆಯ ಸಂಖ್ಯೆ ದೇಹಕ್ಕೆ ವಯಸ್ಸಾಗಬಹುದು. ಮನಸ್ಸಿಗೆ ಅಲ್ಲ ನಮ್ಮ ಮನಸ್ಸಿನಲ್ಲಿರುವ ಮುಗ್ಧತೆಯನ್ನು ಸದಾ ಲವಲವಿಕೆಯಿಂದ ಇಟ್ಟುಕೊಳ್ಳುವವರೇ ನಿಜವಾದ ಸಾಹಿತಿಗಳು ಎಂದರು. ಹಿರಿತನ ಎಂಬುದು ಅರಳು ಮರಳಲ್ಲ ಮರಳಿ ಅರಳುವ ಕಾಲ ಎಂದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡುತ್ತಾ ಸಾಹಿತ್ಯ ಪರಿಷತ್ತು ಎಲ್ಲಾ ಪ್ರಕಾರದ ಎಲ್ಲಾ ವಯಸ್ಸಿನ ಸಾಹಿತಿ ಮತ್ತು ಕವಿಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಪದವಿ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಈ ವರ್ಷ ಕವಿಗೋಷ್ಠಿ ಯನ್ನು ಏರ್ಪಾಡು ಮಾಡಲಾಗಿದೆ ಎಂದರು.

ಸಂತಸ ತಂದಿದೆ:

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬಿ.ಎ ಷಂಶುದ್ದೀನ್ ಮಾತನಾಡುತ್ತಾ ಹಿರಿಯ ಕವಿಗಳ ಕವನ ವಾಚನ ನಿಜಕ್ಕೂ ಸಂತಸ ತಂದಿದೆ. ಹಿರಿಯ ಕವಿಗಳ ಅನುಭವದ ಕವಿತ್ವ, ಕಾವ್ಯದ ಹಿನ್ನೆಲೆ, ಕಾವ್ಯದಿಂದ ಸಮಾಜದಲ್ಲಿ ಬದಲಾವಣೆ ಆಗಬೇಕಿದೆ. ಮನಸ್ಸಿನೊಳದಿಂದ ಮೂಡಿ ಬರುವ ಭಾವನೆಗಳೇ ಕವಿತ್ವ ಎಂದರು. ತಾವು ಬಾಲ್ಯದಿಂದಲೇ ಕವಿತ್ವ ಮತ್ತು ಸಾಹಿತ್ಯಗಳಿಗೆ ಆಕರ್ಷಿತಗೊಂಡದ್ದು ವಿದ್ಯಾರ್ಥಿ ಜೀವನದಲ್ಲಿ ರಚಿಸಿದ ಕವನಗಳನ್ನು ವಾಚಿಸಿದರು. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.

ಹಿರಿಯರ ಕವಿಗೋಷ್ಠಿಯಲ್ಲಿ ಕಿಗ್ಗಾಲು ಎಸ್ ಗಿರೀಶ್, ಮೂಟೆರ ಕೆ ಗೋಪಾಲಕೃಷ್ಣ, ಕೆ ಶೋಭಾ ರಕ್ಷಿತ್, ಕಟ್ರತನ ಲಲಿತಾ ಅಯ್ಯಣ್ಣ, ಅಂಬೆಕಲ್ಲು ಸುಶೀಲ ಕುಶಾಲಪ್ಪ , ಬಿ.ಜಿ ಅನಂತಶಯನ, ವಿದ್ವಾನ್ ಶಂಕರಯ್ಯ ಮಾಸ್ಟರ್, ಭಾಗೀರಥಿ ಹುಲಿತಾಳ, ರೇವತಿ ರಮೇಶ್ ಮಡಿಕೇರಿ, ಬಿ.ಬಿ.ನಾಗರಾಜ ಆಚಾರ್ ಶನಿವಾರಸಂತೆ, ಕೆ ಎಸ್ ನಳಿನಿ ಸತ್ಯನಾರಾಯಣ ಕುಶಾಲನಗರ, ಶಿವದೇವಿ ಅವನೀಶ್ಚಂದ್ರ, ಹರೀಶ್ ಸರಳಾಯ ಮಡಿಕೇರಿ, ಹಾ.ತಿ.ಜಯಪ್ರಕಾಶ್, ಪಿ.ಎಸ್ ವೈಲೇಶ್, ಪಿ.ಎ.ಸುಶೀಲ ಕವನ ವಾಚಿಸಿದರು.

ಕವನ ವಾಚಸಿದ ಕವಿ ಭಾಗೀರಥಿ ಹುಲಿತಾಳ ತೆರೆದಿಡು ಮನದ ಬಾಗಿಲವಾ ಎನ್ನುತ್ತಾ ಜೀವನೋತ್ಸಹದ ಕವನ ವಾಚಿಸಿದರು. ಶನಿವಾರಸಂತೆಯ ಬಿ.ಬಿ ನಾಗರಾಜ್ ತಮ್ಮ ಕವನ ವಾಚಿಸುತ್ತಾ ನನಗೆ ಸಾಕಲು ಆನೆ ಬೇಕಾಗಿದೆ ಆದರೆ ಸಾಕಾನೆ ಅಲ್ಲ ಕಾಡಾನೆ ಅಲ್ಲ ಎನ್ನುತ್ತಾ ಕಡೆಗೆ ಮಾರ್ಮಿಕವಾಗಿ ಆನೆ ಎಂದರೆ ಆರೋಗ್ಯ ಮತ್ತು ನೆಮ್ಮದಿ ಬೇಕಾಗಿದೆ ಎಂದರು.

ಕವಿ ಅನಂತಶಯನ ಕವನ ವಾಚನ ಮಾಡುತ್ತಾ ಕುಡಿದಿರುವೆ ನಾನು ಕಂಠಪೂರ್ತಿ ಕುಡಿದಿರುವೆ, ಜಗವ ಮರೆಯಲು ಕುಡಿದಿರುವೆ, ನನ್ನ ನಾ ಮರೆಯಲು ಕುಡಿದಿರುವೆ, ಎಲ್ಲರನ್ನೂ ಎಲ್ಲವನ್ನೂ ಮರೆಯಲು ಕುಡಿದಿರುವೆ, ಕುಡಿದಿರುವೆ ಗುರುವಿನ ಬೊಗಸೆಯಿಂದ ತೀರ್ಥ ಕುಡಿದಿರುವೆ, ದೈವೀಸ್ಪರ್ಶಿತ ಅಮೃತ ಬಿಂದುವನ್ನು ಕುಡಿದಿರುವೆ. ನಾನು ಲೋಕದ ನೋಟಕ್ಕೆ ಕುಡುಕನಾಗಿ ಕಾಣುವೆ ಹೌದು ನಾನು ಕುಡಿದಿರುವೆ ತಾತ್ಕಾಲಿಕ ಇರುವಿಕೆಯನ್ನು ಕಳಚಲು ಕುಡಿದಿರುವೆ, ನಿಶೆ ಏರಿ ಅಹಂ ಜಾರಿ ಮಹಾಪ್ರಜ್ಞೆಯೊಂದಿಗೆ ಒಂದಾಗಿ ಮರೆಯಾಗಲು ಅಮೃತ ಪಾನವ ಮಾಡಿರುವೆ ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಬೈತಡ್ಕ ಜಾನಕಿ, ಬಿ ಆರ್ ಜೋಯಪ್ಪ, ಸರ್ವೋದಯ ಸಮಿತಿಯ ಅಧ್ಯಕ್ಷರಾದ ಅಂಬೇಕಲ್ ಕುಶಾಲಪ್ಪ, ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಾಸು ರೈ, ಕುಶಾಲನಗರದ ಸತ್ಯನಾರಾಯಣ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉಪನ್ಯಾಸಕಿ ಪ್ರತಿಮಾ ರೈ ನಿರೂಪಿಸಿದರು. ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ಎಸ್.ಎಸ್ ಸಂಪತ್ ಕುಮಾರ್ ವಂದಿಸಿದರು.