ಹಂಪಿ ಉತ್ಸವ ಏರ್ಪಡಿಸಲು ಅಗತ್ಯ ಇರುವ ಸಿದ್ಧತೆ ಮಾಡಿಕೊಳ್ಳಲು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಹೊಸಪೇಟೆ: ಪ್ರತಿ ವರ್ಷದಂತೆ 2026ನೇ ಸಾಲಿನಲ್ಲಿ ಹಂಪಿ ಉತ್ಸವ ಏರ್ಪಡಿಸಲು ಅಗತ್ಯ ಇರುವ ಸಿದ್ಧತೆ ಮಾಡಿಕೊಳ್ಳಲು ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ 2026ರಲ್ಲಿ ಕೈಗೊಳ್ಳುವ ಹಂಪಿ ಉತ್ಸವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರತಿ ವರ್ಷದಂತೆ 2026ರಲ್ಲಿ ಹಂಪಿ ಉತ್ಸವ ಆಯೋಜಿಸಬೇಕೆಂಬ ಉದ್ದೇಶ ಹೊಂದಲಾಗಿದೆ. ಸರ್ಕಾರದ ಮಟ್ಟದಲ್ಲಿ ದಿನಾಂಕ ಇನ್ನೂ ನಿಗದಿಯಾಗಬೇಕಿದೆ. ಆದ್ದರಿಂದ ದಿನಾಂಕ ನಿಗದಿಯ ಪೂರ್ವದಿಂದಲೇ ಅಗತ್ಯವಿರುವ ಪೂರ್ವ ಸಿದ್ಧತೆಯನ್ನು ಆಯಾ ಇಲಾಖೆ ಅಧಿಕಾರಿಗಳು ಮತ್ತು ಸಮಿತಿ ಕಾರ್ಯೋನ್ಮುಖರಾಗಬೇಕು ಎಂದರು.
ವಿನೂತನ ಉತ್ಸವಇಲ್ಲಿ ವರೆಗೆ ಹಲವು ಹಂಪಿ ಉತ್ಸವಗಳಾಗಿವೆ. ಆದರೆ ಬರುವ ಉತ್ಸವದಲ್ಲಿ ಹಿಂದೆ ಆದಂತಹ ಕುಂದು ಕೊರೆತೆಗಳು, ಸಮಸ್ಯೆಗಳು ಮರುಕಳಿಸಬಾರದು, ಜೊತೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಸುಧಾರಣೆಯ ಕ್ರಮವಾಗಿ ಉತ್ಸವ ಆಯೋಜಿಸಬೇಕಿದೆ. ಹಂಪಿ ವಿಶ್ವ ಪಾರಂಪರಿಕ ತಾಣವಾಗಿದ್ದು, ಹಂಪಿ ಕುರಿತಂತೆ ಹೆಚ್ಚಿನ ಪ್ರಚಾರ ಕೈಗೊಳ್ಳಲು ಉತ್ಸವಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಸ್ಥಳೀಯ ಕಲಾವಿದರ ಜೊತೆಗೆ ಆರ್ಕಷಣೀಯ ಖ್ಯಾತನಾಮ ಕಲಾವಿದರಗಳನ್ನು ಒಳಗೊಂಡು ಸಾಂಸ್ಕೃತಿಕ ಕಾಯಕ್ರಮಗಳನ್ನು ಆಯೋಜಿಸಲಾಗುವುದು. ರೈತರು, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವಂತಹ ವಸ್ತು ಪ್ರದರ್ಶನಗಳು, ಗ್ರಾಮೀಣ ಕಲೆಗಳು ಮತ್ತು ಕ್ರೀಡೆಗಳಿಗೂ ಒತ್ತು ನೀಡುವ ನಿಟ್ಟಿನಲ್ಲಿ ಎಲ್ಲರ ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದರು.ಈ ವೇಳೆ ಜಿಪಂ ಸಿಇಒ ಅಕ್ರಮ್ ಷಾ, ಎಸ್ಪಿ ಎಸ್. ಜಾಹ್ನವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.