ಪ್ರಸ್ತಾವಿತ ರೈಲು ಮಾರ್ಗವು ಕುಷ್ಟಗಿ, ಗಜೇಂದ್ರಗಡ, ಕೋಣೆ, ನರಗುಂದ, ಸುಕ್ಷೇತ್ರ ಯಲ್ಲಮ್ಮನಗುಡ್ಡ, ಯರಗಟ್ಟಿ, ಮುನವಳ್ಳಿ, ಗೋಕಾಕ್, ಘಟಪ್ರಭಾ ಸಂಪರ್ಕಿಸುತ್ತದೆ.

ನರಗುಂದ: ನರಗುಂದ ಮಾರ್ಗವಾಗಿ ನೂತನ ರೈಲ್ವೆ ಮಾರ್ಗ ಪ್ರಾರಂಭಿಸಬೇಕೆಂದು ಆಗ್ರಹಿಸಿ ರೈಲ್ವೆ ಸಚಿವರಿಗೆ ರಾಜ್ಯದ ಕೇಂದ್ರ ಸಚಿವರು ಮತ್ತು ಸಂಸದರು ಮನವಿ ನೀಡಿದ್ದು ಸಂತೋಷ ತಂದಿದೆ ಎಂದು ತಾಲೂಕು ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಚನ್ನು ನಂದಿ ತಿಳಿಸಿದ್ದಾರೆ.

ಮಂಗಳವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನವದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡ್ರ, ವಿಜಯಪುರದ ಸಂಸದ ರಮೇಶ ಜಿಗಜಿಗಣಿ ಅವರು ರೈಲ್ವೆ ಸಚಿವ ಅಶ್ವಿನ್ ವೈಷ್ಣವ ಅವರಿಗೆ ಮನವಿ ಪತ್ರ ಸಲ್ಲಿಸಿ ನರಗುಂದ ಮಾರ್ಗವಾಗಿ ಘಟಪ್ರಭಾ- ಕುಷ್ಟಗಿಯವರೆಗೆ ಹೊಸ ರೈಲು ಮಾರ್ಗ ಸಮೀಕ್ಷೆ, ಅನುದಾನ ಮಂಜೂರಿಗೆ ಮನವಿ ಮಾಡಿದ್ದಾರೆ.ರೈಲ್ವೆ ಹೋರಾಟ ಜಂಟಿ ಸಮಿತಿ ನಿಯೋಗವು ಇತ್ತೀಚೆಗೆ ಹುಬ್ಬಳ್ಳಿಯ ರೈಲ್ವೆ ವಲಯದ ಜನರಲ್ ಮ್ಯಾನೇಜ‌ರ್ ಮುಕುಲ ಶರನ್ ಮಾಧುರ ಅವರನ್ನು ಭೇಟಿ ಮಾಡಿ ತಾಂತ್ರಿಕ ಸಮೀಕ್ಷೆ ಪ್ರಾರಂಭಿಸುವಂತೆ ಜ್ಞಾಪಕ ಪತ್ರ ಸಲ್ಲಿಸಿದೆ. ಪ್ರಸ್ತಾವಿತ ರೈಲು ಮಾರ್ಗವು ಕುಷ್ಟಗಿ, ಗಜೇಂದ್ರಗಡ, ಕೋಣೆ, ನರಗುಂದ, ಸುಕ್ಷೇತ್ರ ಯಲ್ಲಮ್ಮನಗುಡ್ಡ, ಯರಗಟ್ಟಿ, ಮುನವಳ್ಳಿ, ಗೋಕಾಕ್, ಘಟಪ್ರಭಾ ಸಂಪರ್ಕಿಸುತ್ತದೆ.

ಈ ಯೋಜನೆ ಸಾಮಾಜಿಕ ಮತ್ತು ಆರ್ಥಿಕ ಪ್ರಾಮುಖ್ಯತೆ ಹೊಂದಿದೆ. ಮೇಲಾಗಿ ಈ ರೈಲ್ವೆ ಮಾರ್ಗವು ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣ ಸಂಪರ್ಕಿಸುವ ನಿರ್ಣಾಯಕ ಜಂಕ್ಷನ್ ಆಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಸುಧಾರಿತ ರೈಲು ಸಂಪರ್ಕವಾಗಲಿದೆ. ಈ ಎಲ್ಲ ಪ್ರದೇಶಗಳಲ್ಲಿ ವ್ಯಾಪಾರ, ಕೃಷಿ, ಕೈಗಾರಿಕೆ ಮತ್ತು ಚಲನಶೀಲತೆ ಗಣನೀಯ ಪ್ರಯೋಜನ ನೀಡುತ್ತದೆ. ಪ್ರತಿವರ್ಷ ಲಕ್ಷಾಂತರ ಭಕ್ತರು ಸುಕ್ಷೇತ್ರ ಯಲ್ಲಮ್ಮ (ರೇಣುಕಾ) ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಯಲ್ಲಮ್ಮ ದೇವಾಲಯದ ಮೂಲಕ ರೈಲು ಮಾರ್ಗಯಾತ್ರಾರ್ಥಿಗಳಿಗೆ ಸುರಕ್ಷಿತ ಅನುಕೂಲಕರ ಮತ್ತು ಕೈಗೆಟಕುವ ಸಾರಿಗೆಯಾಗುತ್ತದೆ ಎಂದರು.

ನೈರುತ್ಯ ರೇಲ್ವೆಯಡಿ ಕುಷ್ಟಗಿ- ಘಟಪ್ರಭಾ ರೈಲ್ವೆ ಮಾರ್ಗದ ವಿವರವಾದ ಸಮೀಕ್ಷೆಗೆ ತಕ್ಷಣದ ಅನುಮೋದನೆ ನೀಡಿ ಮುಂಬರುವ ರೈಲ್ವೆ ಕಾಮಗಾರಿ ಯೋಜನೆ ಬಜೆಟ್‌ನಲ್ಲಿ ಸೇರಿಸಿ ಶೀಘ್ರ ಕೇಂದ್ರ ರೈಲ್ವೆ ಸಚಿವರು ಮಂಜೂರು ಮಾಡಬೇಕು. ಉತ್ತರ ಕರ್ನಾಟಕದ ಜನರ ಬಹುದಿನ ಬೇಡಿಕೆ ಈಡೇರಿಲಿದೆ ಎಂದಿದ್ದಾರೆ.