ಸಾರಾಂಶ
ನಾಡಿನ ಹೆಸರಾಂತ ಸಾಹಿತಿಗಳು,ಆಧ್ಯಾತ್ಮ ಚಿಂತಕರು, ಅನುಭವಿಗಳು ರಾಜಕಾರಣಿಗಳು, ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ
ಲಕ್ಷ್ಮೇಶ್ವರ: ಶ್ರಾವಣ ಮಾಸದಲ್ಲಿ ಶರಣರ ನುಡಿ ಆಲಿಸುವ ಮೂಲಕ ನಮ್ಮ ಜೀವನ ಪಾವನಗೊಳಿಸುವ ಕಾರ್ಯ ಮಾಡುವುದು ಅಗತ್ಯವಾಗಿದೆ ಎಂದು ನಿವೃತ್ತ ಶಿಕ್ಷಕಿ ಲಲಿತಾ ಕೆರಿಮನಿ ಹೇಳಿದರು.
ಶನಿವಾರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳು ನಡೆಯುವ 19ನೇ ವರ್ಷದ ಶ್ರಾವಣ ಸಂಜೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಈ ವರ್ಷದ ಶ್ರಾವಣ ಸಂಜೆ ಕಾರ್ಯಕ್ರಮವು ಅ.5 ರಿಂದ ಸೆ.3ರ ವರೆಗೆ ಪ್ರತಿ ದಿನ ಸಂಜೆ 5.45ಕ್ಕೆ ಆರಂಭಗೊಳ್ಳುತ್ತದೆ. ಸಮಾರಂಭದ ಸಾನ್ನಿಧ್ಯವನ್ನು ಹೂವಿನ ಶಿಗ್ಲಿಯ ಚನ್ನವೀರ ಮಹಾಸ್ವಾಮಿಗಳು ವಹಿಸಿಕೊಳ್ಳುವರು.ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗರಾಜ ಅರಳಿ ನೆರವೇರಿಸುವರು,
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅಧ್ಯಕ್ಷತೆ ವಹಿಸಿಕೊಳ್ಳುವರು.ಎಸ್.ಎಫ್.ಆದಿ ಶರಣರಲ್ಲಿ ಸಾಮಾಜಿಕ ಚಿಂತನೆ ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡುವರು ಎಂದು ಹೇಳಿದ ಅವರು, ಕಳೆದ 19 ವರ್ಷಗಳಿಂದ ಸಿದ್ದೇಶ್ವರ ಸತ್ಸಂಗ ಬಳಗ, ಗದಗ ಜಲ್ಲಾ ಕದಳಿ ವೇದಿಕೆ, ಶರಣ ಸಾಹಿತ್ಯ ಪರಿಷತ್ತು, ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಬಳಗ ಸಂಸ್ಕೃತಿ ವೇದಿಕೆ ಸಹಯೋಗದಲ್ಲಿ ಶ್ರಾವಣ ಸಂಜೆ ಎನ್ನುವ ಅಭೂತ ಪೂರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಮಠಾಧೀಶರು, ನಾಡಿನ ಹೆಸರಾಂತ ಸಾಹಿತಿಗಳು,ಆಧ್ಯಾತ್ಮ ಚಿಂತಕರು, ಅನುಭವಿಗಳು ರಾಜಕಾರಣಿಗಳು, ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡುವ ಮೂಲಕ ಶ್ರಾವಣ ಮಾಸದಲ್ಲಿ ಶರಣರ ನುಡಿ ಅರಿತು ಅಳವಡಿಸಿಕೊಳ್ಳುವ ಕಾರ್ಯಕ್ರಮ ಇದಾಗಿದ್ದು. ಪ್ರತಿ ವರ್ಷದಂತೆ ಈ ವರ್ಷವು ಶ್ರಾವಣ ಮಾಸದಲ್ಲಿ ಒಂದು ತಿಂಗಳು ಪರ್ಯಂತ 12ನೇ ಶತಮಾನದಲ್ಲಿ ಬಾಳಿ ಹೋದ ಶರಣರ, ಸಂತರ, ಅನುಭಾವಿಗಳ ಹಿತ ನುಡಿ ಶ್ರವಣ ಮಾಡುವ ಮೂಲಕ ಜೀವನ ಪಾವನ ಮಾಡಿಕೊಳ್ಳು ಉದ್ದೇಶ ನಮ್ಮದಾಗಿದೆ ಎಂದು ಹೇಳಿದರು.ಸಭೆಯಲ್ಲಿ ಬಸಣ್ಣ ಬೆಂಡಿಗೇರಿ, ಎಂ.ಕೆ. ಕಳ್ಳಿಮಠ, ಮಲ್ಲೇಶ ಬಣಕಾರ, ಗಂಗಾಧರ ಅರಳಿ, ಮುರಳಿಧರ ಹುಬ್ಬಳ್ಳಿ, ಶಾರದಾ ಬಟಗುರ್ಕಿ, ಶೈಲಾ ಆದಿ, ರೇಖಾ ವಡಕಣ್ಣವರ, ಶೋಭಾ ಗಾಂಜಿ, ಕಾಂಚನಾ ಹಸರೆಡ್ಡಿ, ಪಾರ್ವತಿ ಕಳ್ಳಿಮಠ, ಪ್ರತಿಮಾ ಮಹಾಜನಶೆಟ್ಟರ, ಕವಿತಾ ಅರಳಹಳ್ಳಿ, ತನ್ಮಯಿ ವಡಕಣ್ಣವರ ಇದ್ದರು.
ಈ ವೇಳೆ ನಿರ್ಮಲಾ ಅರಳಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರತ್ನ ಕರ್ಕಿ ಸ್ವಾಗತಿಸಿದರು. ಅಶ್ವಿನಿ ಅಂಕಲಕೋಟಿ ವಂದಿಸಿದರು.