ಕಬ್ಬು ಬೆಳೆಗಾರರ ಬಾಕಿ ಪಾವತಿಸಲು ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಆಗ್ರಹ

| Published : Aug 04 2024, 01:29 AM IST / Updated: Aug 04 2024, 07:28 AM IST

ಕಬ್ಬು ಬೆಳೆಗಾರರ ಬಾಕಿ ಪಾವತಿಸಲು ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಹಳಿಯಾಳದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ರೈತರಿಗೆ ನ್ಯಾಯಯುತವಾಗಿ ನೀಡಬೇಕಾಗಿದ್ದ ಹಣ ಪಾವತಿಸಿ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ಆರಂಭಿಸಲಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಆಗ್ರಹಿಸಿದರು.

ಹಳಿಯಾಳ: ಸ್ಥಳೀಯ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ರೈತರಿಗೆ ನ್ಯಾಯಯುತವಾಗಿ ನೀಡಬೇಕಾಗಿದ್ದ ಪ್ರತಿ ಟನ್ ಕಬ್ಬಿಗೆ ₹150 ಹಾಗೂ ಹೆಚ್ಚುವರಿಯಾಗಿ ಆಕರಿಸಿದ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ಪ್ರತಿ ಟನ್‌ಗೆ ₹120 ರೈತರಿಗೆ ಮೊದಲು ಪಾವತಿಸಿಯೇ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ಆರಂಭಿಸಲಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಆಗ್ರಹಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದೆರೆಡು ವರ್ಷಗಳ ಹಿಂದೆ ರೈತರು ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ರಾಜ್ಯ ಸರ್ಕಾರ ನಮ್ಮ ಬೇಡಿಕೆಯನ್ನು ಪರಿಶೀಲಿಸಲು ನಿಜಲಿಂಗಪ್ಪನವರ ಸಮಿತಿಯನ್ನು ರಚಿಸಿತು. ಈ ಸಮಿತಿಯು ಕಾರ್ಖಾನೆಗಳ ಆದಾಯ ಉತ್ಪನ್ನ ಇತ್ಯಾದಿಗಳನ್ನು ಪರಿಶೀಲಿಸಿ ಪ್ರತಿ ಟನ್ ಕಬ್ಬಿಗೆ ₹150 ಪಾವತಿಸಲು ಸೂಚಿಸಿತು. ಹಾಗೆಯೇ ಕಬ್ಬು ಕಟಾವು ಮತ್ತು ಸಾಗಾಟ ಮಾಡಲು ಹೆಚ್ಚಿನ ದರ ಆಕರಿಸಲಾಗುತ್ತಿದ್ದ ಬಗ್ಗೆಯೂ ಸಮಗ್ರ ಪರಿಶೀಲನೆ ನಡೆಸಿದ ಸಮಿತಿಯು ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ ಆಕರಿಸಿದ ₹120 ಬಾಕಿ ಪಾವತಿಸಲು ಸೂಚಿಸಿದೆ. 

ರಾಜ್ಯದಲ್ಲಿನ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ಮೋಸ ಮಾಡಲಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಸರ್ಕಾರವು ಕಬ್ಬಿನ ತೂಕ ಪಾರದರ್ಶಕವಾಗಿಡಲು ಪ್ರತಿ ಸಕ್ಕರೆ ಕಾರ್ಖಾನೆಗಳ ಮುಂದೆ ಎಪಿಎಂಸಿ ವತಿಯಿಂದ ಡಿಜಿಟಲ್ ತೂಕದ ಯಂತ್ರವನ್ನು ಅಳವಡಿಸಲು ಆದೇಶವನ್ನು ಹೊರಡಿಸಿದೆ. ಸರ್ಕಾರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆಯನ್ನು ಕಳಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದ್ದು, ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಸರ್ಕಾರದ ಆದೇಶವನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಕಳೆದ ವರ್ಷ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು 10.15 ಲಕ್ಷ ಟನ್ ಕಬ್ಬನ್ನು ನುರಿಸಿದ್ದು, ಶೇ. 11.11 ಇಳುವರಿಯನ್ನು ತೋರಿಸಿದ್ದಾರೆ. ಈ ಕಾರ್ಖಾನೆ ಕಳೆದ ನಾಲ್ಕೈದು ವರ್ಷಗಳಿಂದ ಸಕ್ಕರೆ ಇಳುವರಿ ಪ್ರಮಾಣವನ್ನು ಕಡಿಮೆ ತೋರಿಸುತ್ತಿದ್ದಾರೆ. ಇದು ರಾಜ್ಯದೆಲ್ಲೆಡೆ ಕಾರ್ಖಾನೆಯವರು ವ್ಯವಸ್ಥಿತವಾಗಿ ಮಾಡುತ್ತಿರುವ ಮೋಸವಾಗಿದೆ ಎಂದು ಆರೋಪಿಸಿದರು.

ರೈತರ ಬೇಡಿಕೆಗಳು ಮತ್ತು ಹಕ್ಕಿಗಾಗಿ ಹೋರಾಟ ನಡೆಸುವ ಜತೆಗೆ ನಮ್ಮ ಸಂಘವು ರೈತರಿಗೆ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲು ಯೋಜಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಶಂಕರ ಕಾಜಗಾರ, ಜಿಲ್ಲಾಧ್ಯಕ್ಷ ಕುಮಾರ್ ಬೊಬಾಟೆ, ಧಾರವಾಡ ಜಿಲ್ಲಾ ಅಧ್ಯಕ್ಷ ಮಹೇಶ ಬೆಳಗಾಂವಕರ, ಪರಶುರಾಮ ಎತ್ತಿನಗುಡ, ಎಂ.ವಿ. ಘಾಡಿ, ಅಶೋಕ ಮೇಟಿ, ನಾಗೇಂದ್ರ ಜಿವೋಜಿ, ಸುರೇಶ ಶಿವಣ್ಣನವರ, ಅತ್ತಹಳ್ಳಿ ದೇವರಾಜ್, ಸಾತೋರಿ ಗೋಡೆಮನಿ, ರಾಮದಾಸ ಬೆಳಗಾಂವಕರ ಇದ್ದರು.