ಟಿ.ತಿಪ್ಪೇಸ್ವಾಮಿ ಜೀವನ ಮೌಲ್ಯಗಳು ಸದಾ ಜೀವಂತ: ಶಾಸಕ ಬಿ.ದೇವೇಂದ್ರಪ್ಪ

| Published : Jan 15 2024, 01:47 AM IST

ಟಿ.ತಿಪ್ಪೇಸ್ವಾಮಿ ಜೀವನ ಮೌಲ್ಯಗಳು ಸದಾ ಜೀವಂತ: ಶಾಸಕ ಬಿ.ದೇವೇಂದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರತ್ನ ಡಾ.ಟಿ ತಿಪ್ಪೇಸ್ವಾಮಿ ಶಿಕ್ಷಣ, ಅನ್ನ ನೀಡಿದ್ದಲ್ಲದೆ ನನ್ನ ಎಂದಿಗೂ ಜವಾನ ಎಂದು ನೋಡಿದವರಲ್ಲ. ಮನೆಯ ವ್ಯಕ್ತಿ ಅಂತೆಯೇ ನೋಡಿದ್ದರು. ಅವರ ಶಿಸ್ತು, ಪರಿಶ್ರಮವೇ ಇಂದು ನಾನು ಶಾಸಕನಾಗಲು ಕಾರಣ. ಈ ಸಂಸ್ಥೆಯಲ್ಲಿ ಕಲಿತ ನನ್ನ ಇಬ್ಬರು ಮಕ್ಕಳಲ್ಲಿ ಐಎಎಸ್ ಪರೀಕ್ಷೆ ಪಾಸು ಮಾಡಿ ಉಪ ಕಮಿಷನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಅಮರ ಭಾರತಿ ವಿದ್ಯಾಸಂಸ್ಥೆ ವಾರ್ಷಿಕೋತ್ಸವ, ಪುಣ್ಯಸ್ಮರಣೆಯಲ್ಲಿ ಅಭಿಪ್ರಾಯ

ಕನ್ನಡಪ್ರಭ ವಾರ್ತೆ ಜಗಳೂರು

ಅಮರ ಭಾರತಿ ವಿದ್ಯಾಸಂಸ್ಥೆ ಸಂಸ್ಥಾಪಕ ದಿ.ಟಿ.ತಿಪ್ಪೇಸ್ವಾಮಿ ಇಹಲೋಕ ತ್ಯಜಿಸಿದ್ದರೂ, ಅವರು ಹಾಕಿಕೊಟ್ಟ ಜೀವನ ಮೌಲ್ಯಗಳು ಬದುಕಿನಲ್ಲಿ ಜೀವಂತವಾಗಿವೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ಪಟ್ಟಣದ ಅಮರ ಭಾರತಿ ವಿದ್ಯಾ ಕೇಂದ್ರದ ನಾಲಂದ ಬಯಲು ರಂಗಮಂದಿರ ಆವರಣದಲ್ಲಿ ಭಾನುವಾರ ಸಂಜೆ ನಡೆದ ೨೦೨೩ -೨೪ ೨೪ನೇ ಸಾಲಿನ ಶಾಲಾ ಕಾಲೇಜುಗಳ ವಾರ್ಷಿಕೋತ್ಸವ ಹಾಗೂ ವಿದ್ಯಾರತ್ನ ಡಾ.ಟಿ ತಿಪ್ಪೇಸ್ವಾಮಿ ಪುಣ್ಯಸ್ಮರಣೆ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿ ಅವರು ಶಿಕ್ಷಣ, ಅನ್ನ ನೀಡಿದ್ದಲ್ಲದೆ ನನ್ನ ಎಂದಿಗೂ ಜವಾನ ಎಂದು ನೋಡಿದವರಲ್ಲ. ಮನೆಯ ವ್ಯಕ್ತಿ ಅಂತೆಯೇ ನೋಡಿದ್ದರು. ಅವರ ಶಿಸ್ತು, ಪರಿಶ್ರಮವೇ ಇಂದು ನಾನು ಶಾಸಕನಾಗಲು ಕಾರಣ. ಈ ಸಂಸ್ಥೆಯಲ್ಲಿ ಕಲಿತ ನನ್ನ ಇಬ್ಬರು ಮಕ್ಕಳಲ್ಲಿ ಐಎಎಸ್ ಪರೀಕ್ಷೆ ಪಾಸು ಮಾಡಿ ಉಪ ಕಮಿಷನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಅಮರ ಭಾರತಿ ವಿದ್ಯಾಕೇಂದ್ರದ ಗೌರವ ಕಾರ್ಯದರ್ಶಿ ಮಧು ಮಾತನಾಡಿ ಬರಡು ಭೂಮಿಯಲ್ಲಿ ಬಡ ಜನರ ಮಕ್ಕಳಿಗೆ ಶಿಕ್ಷಣ ಕೊಡಬೇಕೆಂಬ ಗುರಿ ಇಟ್ಟುಕೊಂಡು 1973ರಲ್ಲಿ ನಮ್ಮ ತಂದೆ ಟಿ.ತಿಪ್ಪೇಸ್ವಾಮಿ ಅಮರ ಭಾರತಿ ವಿದ್ಯಾಸಂಸ್ಥೆ ಪ್ರಾರಂಭಿಸಿದ್ದರು. ಇಂದು ಶಿಕ್ಷಣ ಓಡುವ ಕುದುರೆಯಾಗಿದೆ. ಮೌಲ್ಯಾಧಾರಿತ ಶಿಕ್ಷಣದ ಅವಶ್ಯವಿದೆ ಎಂದರು.

ಉಪ ನಿರ್ದೇಶಕ ಜಿ.ಕೊಟ್ರೇಶ್, ಶಿಕ್ಷಣ ತಜ್ಞ ಡಾ.ಎಚ್ .ವಿ.ವಾಮದೇವಪ್ಪ ಮಾತನಾಡಿ ಬರದ ನಾಡಿನಲ್ಲಿ ೧೯೭೩ರಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಶೈಕ್ಷಣಿಕ ನಾಡು ಆಗಿ ಮಾಡಿರುವ ದಿ.ಟಿ ತಿಪ್ಪೇಸ್ವಾಮಿಯವರ ಮರೆಯಲು ಸಾಧ್ಯವಿಲ್ಲ. ಈ ಸಂಸ್ಥೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಮಾಡಿ ಸರ್ಕಾರಿ ಸೇವೆಗಳಲ್ಲಿ ಇದ್ದಾರೆ ಎಂದರು.

ವಿದ್ಯಾರ್ಥಿಗಳು, ಸಾಧಕರಿಗೆ ಸನ್ಮಾನ:

೨೦೨೨-೨೩ನೇ ಸಾಲಿನಲ್ಲಿ ನಿವೃತ್ತರಾದ ಭೌತಶಾಸ್ತ್ರ ಉಪನ್ಯಾಸಕ ಜಿ.ಟಿ.ಶಿವಕುಮಾರ್, ಅರ್ಥಶಾಸ್ತ್ರ ಉಪನ್ಯಾಸಕ ಜೆ.ಟಿ.ಶಂಶುದ್ದೀನ್, ಹಿಂದಿ ಉಪನ್ಯಾಸಕ ಆರ್ .ಅಮಾನುಲ್ಲಾರನ್ನು ಸನ್ಮಾನಿಸಲಾಯಿತು.

ಶಾಲಾ ಕಾಲೇಜುಗಳಲ್ಲಿ ಹೆಚ್ಚು ಅಂಕಗಳಿಸಿದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಾದ ರಾಜೇಶ್ವರಿ, ಪ್ರಿಯಾಂಕಾ, ದ್ವಿತೀಯ ಪಿಯುಸಿಯ ಶಾಂತೇಶ, ಬಿಇಡಿ ಪದವಿಯ ನಯನಾ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಭದ್ರ ಮೇಲ್ದಂಡೆ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ತೋರಣಗಟ್ಟೆ ತಿಪ್ಪೇಸ್ವಾಮಿ, ಸಮಾಜ ಸೇವೆ ಕ್ಷೇತ್ರದಲ್ಲಿ ಜಿ.ಎಚ್ ಶಂಭುಲಿಂಗಪ್ಪ, ಗೋಪಗೊಂಡನಹಳ್ಳಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಬಿ.ಪಿ. ಸುಭಾನ್ ಜಗಳೂರು, ಕೃಷಿ ಕ್ಷೇತ್ರದಲ್ಲಿ ಬಿ ಆರ್ ರಂಗಪ್ಪ ಜಮ್ಮಾಪುರ ಇವರ ಸನ್ಮಾನಿಸಲಾಯಿತು.

ಈ ವೇಳೆ ಅಮರ ಭಾರತಿ ವಿದ್ಯಾ ಕೇಂದ್ರದ ಅಧ್ಯಕ್ಷ ಟಿ.ಅನ್ನಪೂರ್ಣಮ್ಮ ಟಿ.ತಿಪ್ಪೇಸ್ವಾಮಿ , ಆಡಳಿತಾಧಿಕಾರಿ ಶ್ವೇತಾ ಮಧು, ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದ ಜಿ.ಎಸ್, ಜಿ.ಎಚ್ ಶಂಭುಲಿಂಗಪ್ಪ, ಬಿ.ಪಿ ಸುಭಾನ್ , ಬಿ.ಆರ್ ರಂಗಪ್ಪ, ಪ್ರಾಂಶುಪಾಲರಾದ ಎಸ್ ಆರ್ ಕಲ್ಲೇಶ್, ಕೆ ಮಹೇಶ್, ಸಿ. ತಿಪ್ಪೇಸ್ವಾಮಿ, ಜಿ.ಬಿ ಬಾಲರಾಜ್, ಬಿ.ಎನ್.ಎಂ ಸ್ವಾಮಿ, ರಾಜೇಶ್ ಜೈನ್ ಸೇರಿ ಇತರರಿದ್ದರು.