ಸಾರಾಂಶ
ಚಿತ್ರದುರ್ಗ: ಜಿಲ್ಲಾಸ್ಪತ್ರೆ ಬಳಿಯ ಸ್ವಾಮಿ ವಿವೇಕಾನಂದ ಉದ್ಯಾನವನದಲ್ಲಿ ವಿವೇಕಾನಂದರ ಪ್ರತಿಮೆ ಸ್ಥಾಪನೆಯಾಗಲಿ ಎಂದು ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಕರಿಯಣ್ಣ.ಡಿ ಅಗ್ರಹಿಸಿದರು.
ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ, ನೆಹರು ಯುವ ಕೇಂದ್ರ ಹಾಗೂ ಶಾರದಾ ರಾಮಕೃಷ್ಣ ಆಶ್ರಮದ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದ ಅವರ 161ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನಗರದ ಜಿಲ್ಲಾ ಆಸ್ಪತ್ರೆ ಬಳಿಯ ಸ್ವಾಮಿ ವಿವೇಕಾನಂದ ಉದ್ಯಾನವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ, ಉದ್ಯಾನವನ ಸ್ವಚ್ಛತಾ ಕಾರ್ಯಕ್ರಮ ಹಾಗೂ ಸಹಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದರು.ಈ ಉದ್ಯಾನವನದ ಪಕ್ಕದಲ್ಲೇ ಜಿಲ್ಲಾ ಆಸ್ಪತ್ರೆ ಇದೆ. ಇಲ್ಲಿಗೆ ಪ್ರತಿದಿನ ಸಾವಿರಾರು ಜನರು ಬಂದು ಹೋಗುತ್ತಾರೆ. ಆರೋಗ್ಯದ ಬಗ್ಗೆ ಕಾಳಜಿವಹಿಸುವ ಆಸ್ಪತ್ರೆ ಮುಂದಿನ ಉದ್ಯಾನವನವ ನಿರ್ಲಕ್ಷ್ಯ ಮಾಡಿದೆ. ಮುಖ್ಯ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಉದ್ಯಾನವನಕ್ಕೆ ಹಾಕಿದ್ದ ತಂತಿ ಬೇಲಿ ತೆರವು ಮಾಡಲಾಗಿದೆ. ಅಂದಿನಿಂದ ಯಾವುದೇ ಅಡೆತಡೆ ಇಲ್ಲದಂತಾಗಿದೆ. ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವ ಉದ್ಯಾನದ ಸ್ಥಿತಿ ನಗರಸಭೆ ಅಥವಾ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಬರದೇ ಇರುವುದು ಬೇಸರದ ಸಂಗತಿ ಎಂದರು.
ದೇಶದ ಕೀರ್ತಿ ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿಯ ಹೆಸರನ್ನು ಉದ್ಯಾನವನಕ್ಕೆ ಇಡಲಾಗಿದೆ. ಆದರೆ ಇದು ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿಣಮಿಸಿದೆ. ಕಂಡ ಕಂಡಲ್ಲೇ ಮಲ ಮೂತ್ರ ವಿಸರ್ಜನೆ ಮಾಡಲಾಗಿದೆ. ರಾತ್ರಿ ಕುಡುಕರ ಅಡ್ಡವಾಗಿ ಪರಿಣಮಿಸುವ ಈ ಸ್ಥಳದಲ್ಲೇ ಸಾಕಷ್ಟು ಮದ್ಯದ ಬಾಟಲಿಗಳು ಬಿದ್ದಿವೆ. ಹಣಕೊಟ್ಟು ನಾಯಿ ಖರೀದಿಸಿ ಶೋಕಿಗಾಗಿ ಸಾಕಿದ ಜನರು ನಾಯಿ ಸತ್ತ ಮೇಲೆ ಅದರ ಮೃತ ದೇಹವನ್ನು ತಂದು ಇಲ್ಲಿ ಬಿಸಾಡಿದ್ದಾರೆ. ಇದರಿಂದ ಇಲ್ಲಿ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ ಎಂದು ದೂರಿದರು.ಸಂಘಟನೆಗಳ ಪದಾಧಿಕಾರಿಗಳು ಇಲ್ಲಿ ನಡೆಸಿದ ಸ್ವಚ್ಚತಾ ಕಾರ್ಯದಲ್ಲಿ ಸುಮಾರು ಒಂದು ಲೋಡ್‌ನಷ್ಟು ಕಸ ಸಂಗ್ರಹವಾಗಿದೆ. ಸ್ವಚ್ಚತಾ ಕಾರ್ಯದ ನಂತರ ಸ್ವಾಮಿ ವಿವೇಕಾನಂದ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಿಸಲಾಯಿತು. ಸ್ವಾಮಿ ವಿವೇಕಾನಂದ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ರವಿಕುಮಾರ್ ಹಾಗೂ ಖಜಾಂಚಿ ಬ್ರಿಜೇಶ್ ಭಗತ್ ಹಾಗೂ ವಿವಿಧ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.